ರಾಮನಗರ: ಪೋಷಕರು ತಮ್ಮ ಮಕ್ಕಳನ್ನು ಅಂಕ ತೆಗೆಯುವ ಯಂತ್ರಗಳಂತೆ ಭಾವಿಸುತ್ತಿರುವುದರಿಂದ ಅವರಲ್ಲಿನ ಆತ್ಮಸ್ಥೈರ್ಯ ಕುಂಠಿತಗೊಳ್ಳುತ್ತಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.
ಒಕ್ಕಲಿಗರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಇಲ್ಲಿನ ಹೊನ್ನಮ್ಮ ಕಲ್ಯಾಣ ಮಂಟಪದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹೆಚ್ಚು ಅಂಕ ತೆಗೆಯುವಂತೆ ಪೋಷಕರು, ಶಿಕ್ಷಕರು ಒತ್ತಡ ಹೇರುತ್ತಿರುವುದರಿಂದ ಮಕ್ಕಳಲ್ಲಿನ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಜಗತ್ತನ್ನು ಎದುರಿಸುವ ಆತ್ಮವಿಶ್ವಾಸವನ್ನು ಪೋಷಕರು ತುಂಬಬೇಕು. ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಮನೆಗಳಲ್ಲಿ ಸಂಸ್ಕೃತಿ, ಮಾನವೀಯತೆಯ ಪಾಠವನ್ನು ಹೇಳಿಕೊಡಬೇಕು. ಪ್ರೀತಿ , ದಯೆ, ಅನುಕಂಪ, ಮನುಷ್ಯತ್ವದ ಮೌಲ್ಯಗಳಿಗೆ ಸ್ಪಂದಿಸದ ಯಾವುದೇ ವಿದ್ಯೆ ಪದವಿ, ಅಧಿಕಾರ ನಿಷ್ಪಪ್ರಯೋಜಕ ಎಂದರು.
ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಲಿಂಗು ಮಾತನಾಡಿ ‘ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆದಿರುವ ವಿದ್ಯಾರ್ಥಿಗಳಿಗೂ ಸನ್ಮಾನ ಮಾಡಬೇಕು’ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಪಡೆದ ತಾಲ್ಲೂಕಿನ 30 ವಿದ್ಯಾರ್ಥಿಗಳನ್ನು ಹಾಗೂ ನೂತನವಾಗಿ ಸರ್ಕಾರಿ ಸೇವೆಗೆ ಸೇರಿರುವ ಡಾ.ಎ.ಎನ್. ಕಾವ್ಯಶ್ರೀ, ಡಾ. ನೇತ್ರಾ ಕೆ.ಗೌಡ, ಡಾ.ಚೈತ್ರಾ ಕೆ.ಗೌಡ, ಎಚ್.ಸಿ. ಶಶಿರೇಖಾ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಲಮಂಗಲ ನಾಗರಾಜು, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪುಟ್ಟರಾಮಯ್ಯ, ನಗರಸಭೆ ಉಪಾಧ್ಯಕ್ಷೆ ಮಂಗಳಾ ಶಂಭುಗೌಡ, ಸದಸ್ಯರಾದ ಆರ್.ಎ. ಮಂಜುನಾಥ್, ಎ.ಬಿ. ಚೇತನ್‌ಕುಮಾರ್, ಡಿ.ಕೆ. ಶಿವಕುಮಾರ್, ಕೂಟಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಎ. ಗುಡ್ಡತಿಮ್ಮಯ್ಯ, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಪಿ. ಮಹಾಲಿಂಗಯ್ಯ, ಜಯ ಕರ್ನಾಟಕ ಸಂಘಟನೆಯ ಸಿ.ಕೆ. ರವಿ, ಮುಖಂಡರಾದ ಕೆ. ಚಂದ್ರಯ್ಯ, ಸಿದ್ದೇಗೌಡ, ಚಿಕ್ಕಶಂಕರಣ್ಣ, ಸಿ. ರವಿಕುಮಾರ್, ನಂದಪ್ರಭಾ, ಪ್ರೇಮ್ ಕುಮಾರ್, ಭಾಗ್ಯಲಕ್ಷ್ಮೀ, ಇಂದ್ರಮ್ಮ, ಸಚಿನ್ ಅಚ್ಚೇಗೌಡ, ವೆಂಕಟೇಶ್, ಬೈರೇಗೌಡ, ಶಿವಣ್ಣ, ಶಿವಸ್ವಾಮಿ, ನಿಂಗರಾಜು, ಒಕ್ಕಲಿಗರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಿ. ಹನುಮಯ್ಯ, ಎಂ. ಮಹದೇವಯ್ಯ, ಎಸ್. ರಾಮಕೃಷ್ಣಯ್ಯ, ದುಂಡಮಾದಯ್ಯ, ಟಿ.ಎಂ. ನಾಗರತ್ನಮ್ಮ, ಕೆ.ಟಿ. ಪ್ರಕಾಶ್, ಗವಿಗಂಗಾಧರಯ್ಯ, ರೇಣುಕಯ್ಯ, ಸಿ. ವಿರೇಂದ್ರಕುಮಾರ್, ಜಿ.ಪಿ. ಗಿರೀಶ್ ಇದ್ದರು.
ಬಿಜಿಎಸ್ ಅಂಧರ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ಒಕ್ಕಲಿಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವೇಗೌಡ ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು. ಬಿ. ರಾಮಕೃಷ್ಣಯ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.