ADVERTISEMENT

ಜೆಡಿಎಸ್‌ ಮುಖಂಡ ಸೇರಿ ಹಲವರ ವಿರುದ್ಧ ಪ್ರಕರಣ

ಪ್ರತಿಭಟನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ಆಸ್ತಿ ನಷ್ಟ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:04 IST
Last Updated 11 ಜುಲೈ 2024, 6:04 IST
ಉಮೇಶ್, ಜೆಡಿಎಸ್ ಮುಖಂಡ
ಉಮೇಶ್, ಜೆಡಿಎಸ್ ಮುಖಂಡ   

ರಾಮನಗರ: ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ ಖಂಡಿಸಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಕಂದಾಯ ಭವನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ, ನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ ಸ್ಥಳದಲ್ಲಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಪುರ ಠಾಣೆ ಸಬ್ ಇನ್‌ಸ್ಪೆಕ್ಟರ್ ಆಕಾಶ ಎಸ್. ಚನ್ನಾಳ ಅವರು ನೀಡಿದ ದೂರಿನ ಮೇರೆಗೆ, ಪ್ರತಿಭಟನೆ ಆಯೋಜಕ ಸ್ಥಳೀಯ ಜೆಡಿಎಸ್ ಮುಖಂಡ ಉಮೇಶ್ ಹಾಗೂ ಇತರ ಕಾರ್ಯಕರ್ತರ ವಿರುದ್ಧ ಬುಧವಾರ ಸಂಜೆ ಎಫ್‌ಐಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪವೇನು?: ಉಮೇಶ್ ಸೇರಿದಂತೆ 100ಕ್ಕೂ ಹೆಚ್ಚು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಂದಾಯ ಭವನದ ಆವರಣದಲ್ಲಿ, ಸಹಕಾರ ಸಂಘಗಳ ಉಪ ನಿಬಂಧಕರ ವಿರುದ್ಧ ಜುಲೈ 9ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ, ಕಾನೂನುಬಾಹಿರವಾಗಿ ಧ್ವನಿವರ್ಧಕ ಬಳಸಿ ಘೋಷಣೆ ಕೂಗಿರುವ ಪ್ರತಿಭಟನಾಕಾರರು, ಪ್ರವೇಶದ್ವಾರದ ಬಳಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ADVERTISEMENT

ಪೊಲೀಸ್ ಅಧಿಕಾರಿಗಳ ಸೂಚನೆ ಪಾಲಿಸದೆ, ಶಾಂತಿಯುತ ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ಕೊಂಡೊಯ್ದಿದ್ದರು. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸ್ಥಳದಲ್ಲಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಕಂದಾಯ ಭವನಕ್ಕೆ ನುಗ್ಗಲು ಯತ್ನಿಸಿ ಪ್ರವೇಶದ್ವಾರದಲ್ಲಿದ್ದ ಗಾಜು ಒಡೆದಿದ್ದಾರೆ. ಆ ಮೂಲಕ ಸರ್ಕಾರಿ ಆಸ್ತಿಗೆ ನಷ್ಟವುಂಟು ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಮೇರೆಗೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ–1984, ಕರ್ನಾಟಕ ಪೊಲೀಸ್ ಕಾಯ್ದೆ–1963 ಸೇರಿದಂತೆ, ದಂಗೆ ಪ್ರಚೋದನೆ, ಹಲ್ಲೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.