ADVERTISEMENT

ವರಮಹಾಲಕ್ಷ್ಮಿ ಹಬ್ಬ: ಕನಕಾಂಬರ ಹೂ ಕೆ.ಜಿ ಗೆ ₹1,500

ವರಮಹಾಲಕ್ಷ್ಮಿ ಹಬ್ಬ ‘ದುಬಾರಿ’; ಹಣ್ಣುಗಳ ದರವೂ ಏರುಗತಿಯಲ್ಲಿ

ಓದೇಶ ಸಕಲೇಶಪುರ
Published 23 ಆಗಸ್ಟ್ 2023, 5:16 IST
Last Updated 23 ಆಗಸ್ಟ್ 2023, 5:16 IST
ರಾಮನಗರದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಮಹಿಳೆಯರು ಹೂವು, ಹಣ್ಣು ಖರೀದಿಸಿದರು
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಮಹಿಳೆಯರು ಹೂವು, ಹಣ್ಣು ಖರೀದಿಸಿದರು ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬಕ್ಕೆ ದಿನಗಣನೆಯಾಗುತ್ತಿರುವ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣಿನ ದರ ಗಗನಕ್ಕೇರಿದೆ. ನಾಗಲೋಟದ ಈ ದರದಿಂದಾಗಿ, ಸಂಪತ್ತಿನ ಅಧಿದೇವತೆಯ ಹಬ್ಬವು ಗ್ರಾಹಕರಿಗೆ ದುಬಾರಿ ಎನಿಸಲಿದೆ.

ಹೂವುಗಳ ಪೈಕಿ ಕನಕಾಂಬರ ದರ ಕೆ.ಜಿ.ಗೆ ₹1,500ಕ್ಕೆ ಏರಿಕೆಯಾಗಿದೆ. ಮಲ್ಲಿಗೆ ₹250ರಿಂದ ₹500ರ ಗಡಿ ತಲುಪಿದೆ. ಹಾರಗಳ ದರವೂ ಹೆಚ್ಚಳವಾಗಿದೆ. ₹60 ಇದ್ದ ಚಿಕ್ಕ ಹಾರದ ದರ ₹150ಕ್ಕೆ ಹಾಗೂ ದೊಡ್ಡ ಹಾರವು ₹300ರಿಂದ ₹500ಕ್ಕೆ ಏರಿಕೆಯಾಗಿದೆ.

ಆಷಾಢ ಮಾಸ ಕಳೆದು ಅಧಿಕ ಶ್ರಾವಣ ಮಾಸ ಬಂದಿದ್ದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಎರಡು ತಿಂಗಳಿಂದ ಹೂವುಗಳ ದರವೂ ಇಳಿಮುಖವಾಗಿತ್ತು. ಹಬ್ಬದ ವಾರ ಆರಂಭವಾಗುತ್ತಿದ್ದಂತೆ, ಒಂದೇ ದಿನದಲ್ಲಿ ಬೆಲೆಯು ದುಪ್ಪಟ್ಟಾಗಿದೆ. ಇದರ ಜೊತೆಗೆ, ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.

ADVERTISEMENT

ಹಬಕ್ಕೆ ಹೂವಿನಷ್ಟೇ ಹಣ್ಣುಗಳಿಗೂ ಬೇಡಿಕೆ ಹೆಚ್ಚು. ಹಾಗಾಗಿ, ಹೂವಿನ ದರದ ಜೊತೆಗೆ ಹಣ್ಣುಗಳ ದರವೂ ಏರುಗತಿಯಲ್ಲಿ ಸಾಗಿದೆ. ಪ್ರತಿ ಕೆ.ಜಿ.ಗೆ ₹180 ಇದ್ದ ಸೇಬಿನ ದರ ಇದೀಗ ₹250ಕ್ಕೆ ಹೆಚ್ಚಳವಾಗಿದೆ. ಏಲಕ್ಕಿ ಬಾಳೆಹಣ್ಣು ₹120ರಿಂದ ₹160ಕ್ಕೆ ಜಿಗಿದಿದೆ. ಜೋಡಿ (2) ಪೈನಾಪಲ್ ಹಣ್ಣಿನ ದರ ₹60ರಿಂದ ₹100 ಆಗಿದೆ.

ಶಾಕ್ ಆಗೋದು ಖಚಿತ: ‘ಪೂಜೆಗಾಗಿ ಹೂವು ಮತ್ತು ಹಣ್ಣು ಖರೀದಿ ಮಾರುಕಟ್ಟೆಗೆ ಬರುವವರಿಗೆ ದರ ಕೇಳಿದರೆ ಶಾಕ್ ಆಗುವುದು ಖಚಿತ. ನೆನ್ನೆ ಖರೀದಿಸಿದಾಗ ಇದ್ದ ದರವು, ಇಂದು ದುಪ್ಪಟ್ಟಾಗಿರುವುದು ಜೀಬಿಗೂ ಕತ್ತರಿ ಬೀಳುವಂತೆ ಮಾಡಿದೆ’ ಎಂದು ಗ್ರಾಹಕರಾದ ಸುಲೋಚನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದರೂ, ಹಬ್ಬದ ಅನಿವಾರ್ಯತೆಯಿಂದಾಗಿ ಖರೀದಿಯಿಂದ ಹಿಂದೆ ಸರಿಯವಂತಿಲ್ಲ. ವರ್ಷಕ್ಕೊಮ್ಮೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿ, ಸಂಪತ್ತಿಗಾಗಿ ಪ್ರಾರ್ಥಿಸುವುದನ್ನು ತಪ್ಪಿಸುವುದಿಲ್ಲ. ಯಾವಾಗಲೂ ಹೂವುಗಳಿಗೆ ಇದೇ ದರ ಇರುವುದಿಲ್ಲವಲ್ಲ. ಹಾಗಾಗಿ, ನಾವೂ ಅಡ್ಜೆಸ್ಟ್ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕೀಳದೆ ಬಿಡುತ್ತಾರೆ: ‘ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಂದ ಹೂವುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂಬ ಕಾರಣಕ್ಕಾಗಿ ರೈತರು ಹಬ್ಬಕ್ಕೆ ಮುಖ್ಯವಾಗಿ ಬಳಸುವ ಕನಕಾಂಬರ, ಸೇವಂತಿಗೆ ಹಾಗೂ ಗುಲಾಬಿಯನ್ನು ಹೆಚ್ಚಾಗಿ ಕೀಳದೆ ಹಾಗೆಯೇ ಬಿಟ್ಟಿರುತ್ತಾರೆ. ಇದರಿಂದಾಗಿ, ಮಾರುಕಟ್ಟೆಯಲ್ಲಿ ಸ್ವಲ್ಪ ಅಭಾವ ಉಂಟಾಗುತ್ತದೆ’ ಎಂದು ಹೆಸರು ಹೇಳಲಿಚ್ಚಿಸದ ವ್ಯಾಪಾರಿಯೊಬ್ಬರು ತಿಳಿಸಿದರು.

‘ಹಬ್ಬದ ವಾರ ಬಂದಾಗ ಹೂವಿಗೆ ಬೇಡಿಕೆ ಹೆಚ್ಚುತ್ತದೆ. ಇದೇ ಸಂದರ್ಭಕ್ಕಾಗಿ ಕಾಯುವ ರೈತರು, ಹೂವು ಕೀಳತೊಡಗುತ್ತಾರೆ. ಬೇಡಿಕೆ ಹೆಚ್ಚಳದ ಜೊತೆಗೆ ದರವು ಏರಿಕೆಯಾಗುತ್ತದೆ. ಗ್ರಾಹಕರಿಗೆ ಸ್ವಲ್ಪ ಹೊರೆ ಎನಿಸಿದರೂ, ಹಬ್ಬದ ನೆಪದಲ್ಲಿ ಖರೀದಿಸುತ್ತಾರೆ. ವಿವಿಧ ಕಾರಣಗಳಿಗಾಗಿ ವರ್ಷದ ಬೇರೆ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ರೈತರಿಗೆ ಹಬ್ಬದ ನೆಪದಲ್ಲಿ ಒಂದಿಷ್ಟು ಲಾಭವಾಗುತ್ತದೆ’ ಎಂದರು.

ಶರತ್ ಹೂವಿನ ವ್ಯಾಪಾರಿ
ಅಂಬರೀಷ್ ಹಣ್ಣಿನ ವ್ಯಾಪಾರಿ
ಹೂವಿನ ದರವನ್ನು ಕೇಳಿ ಆಶ್ಚರ್ಯ ವ್ಯಕ್ತಪಡಿಸುತ್ತಿರುವ ಗ್ರಾಹಕರು ಒಂದು ಕೆ.ಜಿ ಖರೀದಿಸುವ ಬದಲು ಅರ್ಧ ಕೆ.ಜಿ. ಖರೀದಿಸಿ ಕೊಂಡು ಹೋಗುತ್ತಿದ್ದಾರೆ
ಶರತ್ ಹೂವಿನ ವ್ಯಾಪಾರಿ ರಾಮನಗರ
ಈ ಸಂದರ್ಭದಲ್ಲಿ ಹಣ್ಣುಗಳ ಪೂರೈಕೆ ಸ್ವಲ್ಪಮಟ್ಟಿಗೆ ಕಡಿಮೆ ಇರಲಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಳವಾಗಿರುವುದರಿಂದ ದರವೂ ಏರಿಕೆಯಾಗಿದೆ
ಅಂಬರೀಷ್ ಹಣ್ಣಿನ ವ್ಯಾಪಾರಿ ರಾಮನಗರ

‘ದರ ಇಷ್ಟಕ್ಕೇ ನಿಲ್ಲುವುದಿಲ್ಲ’ ‘ವರಮಹಾಲಕ್ಷ್ಮಿ ಹಬ್ಬದ ವಾರ ಈಗಷ್ಟೇ ಆರಂಭವಾಗಿದೆ. ಹಬ್ಬದ ದಿನವಾದ ಶುಕ್ರವಾರದವರೆಗೂ ಹೂವು ಮತ್ತು ಹಣ್ಣಿನ ವ್ಯಾಪಾರ ಜೋರಾಗಿ ಇರಲಿದೆ. ಹಾಗಾಗಿ ಈ ದರ ಇಷ್ಟಕ್ಕೇ ನಿಲ್ಲುವುದಿಲ್ಲ. ಹಬ್ಬದ ದಿನದ ಹೊತ್ತಿಗೆ ಹೂವು ಮತ್ತು ಹಣ್ಣುಗಳ ದರ ಮತ್ತಷ್ಟು ಏರಿಕೆಯಾಗುತ್ತದೆ’ ಎಂದು ಹೂವಿನ ಹೋಲ್ ಸೇಲ್ ವ್ಯಾಪಾರಿ ವೆಂಕಟೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.