ADVERTISEMENT

ರಾಮನಗರ: ಹಣ ಬಿಡುಗಡೆಗೆ ಕಲಾವಿದರ ಆಗ್ರಹ, ಪ್ರತಿಭಟನೆ

ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 5:45 IST
Last Updated 28 ನವೆಂಬರ್ 2023, 5:45 IST
ಜನಪದ ಕಲಾವಿದರ ಪ್ರಾಯೋಜನೆಯ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಎಂದು ಆಗ್ರಹಿಸಿ, ಜನಪದ ಕಲಾವಿದರು ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಜನಪದ ಕಲಾವಿದರ ಪ್ರಾಯೋಜನೆಯ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಎಂದು ಆಗ್ರಹಿಸಿ, ಜನಪದ ಕಲಾವಿದರು ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ರಾಮನಗರ: ಜನಪದ ಕಲಾವಿದರು ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ಪ್ರಾಯೋಜನೆಯ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಜನಪದ ಕಲಾವಿದರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಎದುರು ಬೆಳಿಗ್ಗೆ ಜಮಾಯಿಸಿದ ಕಲಾವಿದರು ಡೋಲು, ತಮಟೆಗಳನ್ನು ಬಾರಿಸುತ್ತಾ ಜಿಲ್ಲಾಧಿಕಾರಿ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ಹೊರಟರು. ಕಲಾವಿದರ ಹಣ ಬಿಡುಗಡೆ ಮಾಡಿ ಎಂಬ ಭಿತ್ತಿಪತ್ರಗಳನ್ನು ಅಂಟಿಕೊಂಡಿಸಿದ್ದ ಪೂಜಾ ಕುಣಿತದ ಕಲಾವಿದರು ಗಮನ ಸೆಳೆದರು.

ಭವನದಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆ, ಎಂ.ಜಿ. ರಸ್ತೆ, ವಾಟರ್ ಟ್ಯಾಂಕ್ ವೃತ್ತ, ಎಸ್‌ಪಿ ಕಚೇರಿ ವೃತ್ತ, ಬೆಂಗಳೂರು–ಮೈಸೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಕಚೇರಿಯ ಪ್ರವೇಶದ್ವಾರ ದಾಟಿದ ಪ್ರತಿಭಟನಾನಿರತ ಕಲಾವಿದರಿಗೆ ಕಚೇರಿಯತ್ತ ಬರಲು ಪೊಲೀಸರು ಬಿಡದೆ ತಡೆದರು.

ADVERTISEMENT

ಅಧಿಕಾರಿಗಳ ಅನುಮತಿ ಇಲ್ಲದೆ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದಾಗ, ‘ನಮ್ಮ ನೋವು ತೋಡಿಕೊಂಡು ಮನವಿ ಸಲ್ಲಿಸಲು ಬಿಡುವುದಿಲ್ಲವೇ?’ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ತಮಟೆ ಮತ್ತು ಡೋಲು ಬಾರಿಸಿ ಪ್ರತಿಭಟಿಸಿದರು. ನಂತರ, ಅಧಿಕಾರಿಗಳ ಅನುಮತಿ ಮೇರೆಗೆ ಕಚೇರಿಯತ್ತ ಹೋಗಿ ಪ್ರತಿಭಟಿಸಲು ಅವಕಾಶ ನೀಡಲಾಯಿತು.

ಕಲಾವಿದರಿಗೆ 2021ನೇ ಸಾಲಿನಲ್ಲಿ₹30 ಲಕ್ಷ ಹಾಗೂ 2022ನೇ ಸಾಲಿನಲ್ಲಿ ₹80 ಲಕ್ಷಕ್ಕೂ ಹೆಚ್ಚು ಹಣ ಬಿಡುಗಡೆಯಾಗಕಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಸಲ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಅಲ್ಲದೆ, ಶಾಸಕರಾದ ಎಚ್.ಸಿ. ಬಾಲಕೃಷ್ಣ ಮತ್ತು ಎಚ್‌.ಎ. ಇಕ್ಬಾಲ್ ಹುಸೇನ್ ಅವರಿಗೂ ಮನವಿ ಸಲ್ಲಿಸಿದ್ದೇವೆ. ಜಿಲ್ಲೆಯವರೇ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜೆಡಿಎಸ್ ಅಧ್ಯಕ್ಷರೂ ಆಗಿರುವ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದೇವೆ. ಆದರೂ, ಪ್ರಯೋಜನವಾಗಿಲ್ಲ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದರು.

ಇಲಾಖೆಯವರು ಹೇಳಿದ್ದಲ್ಲಿಗೆ ಹೋಗಿ ಪ್ರದರ್ಶನ ನೀಡುವ ಕಲಾವಿದರೆ, ಅದರಿಂದ ಬರುವ ಹಣವೇ ಬದುಕಿಗೆ ಆಧಾರವಾಗಿದೆ. ಆದರೆ, ಇಲಾಖೆಯು ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ಹೀಗಾದರೆ, ಕಲಾವಿದರು ಬದುಕುವುದು ಹೇಗೆ? ಜಾನಪದ ಕಲೆಗಳು ಉಳಿಯುವುದಾದರೂ ಹೇಗೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕಲಾವಿದರ ಸಂಘದ ಮಹೇಶ್, ಪುಟ್ಟರಾಜು, ಜಗದೀಶ್, ಅಂಕನಹಳ್ಳಿ ಶಿವಣ್ಣ, ಗೋವಿಂದಯ್ಯ, ಲೋಕೇಶ್, ಸಿದ್ದೇಗೌಡ, ಸಂತೋಷ್, ನಾಗರಾಜು, ರವಿ ಮಾಯಣ್ಣ ಹಾಗೂ ಇತರರು ಇದ್ದರು.

ಕಲಾವಿದರಿಗೆ ಹಣ ಬಿಡುಗಡೆ ಸೇರಿದಂತೆ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಲಾ ತಂಡಗಳ ಕಲಾವಿದರು ರಾಮನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು

ಮಾಸಾಶನ ಪ್ರದರ್ಶನದ ಮೊತ್ತ ಹೆಚ್ಚಿಸಿ
ಸರ್ಕಾರ ಕಲಾವಿದರ ಮಾಶಾಸನವನ್ನು 60 ವರ್ಷದಿಂದ 45 ವರ್ಷಗಳಿಗೆ ಇಳಿಸಬೇಕು. ಕಲಾವಿದರಿಗೆ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಕಲಾವಿದರ ಪರಿಹಾರ ನಿಧಿ ಸ್ಥಾಪಿಸಬೇಕು. ಕಲಾ ತಂಡದ ಪ್ರದರ್ಶನವೊಂದಕ್ಕೆ ನೀಡುತ್ತಿರುವ ₹20 ಸಾವಿರವನ್ನು ₹40 ಸಾವಿರಕ್ಕೆ ಹೆಚ್ಚಿಸಬೇಕು. ಹಾಡುಗಾರರ ತಂಡಕ್ಕೆ ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು. ನಾಟಕ ತಂಡಗಳಿಗೆ ₹30 ಸಾವಿರದಿಂದ ₹50 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಾನಪದ ಕಲಾವಿದರೂ ಅಪಘಾತದಲ್ಲಿ ತೀರಿಕೊಂಡರೆ ₹5 ಲಕ್ಷ ಪರಿಹಾರ ಕೈ–ಕಾಲು ಕಳೆದುಕೊಂಡರೆ ₹2 ಲಕ್ಷ ಪರಿಹಾರ ಒದಗಿಸಬೇಕು. ಕಲಾವಿದರ ಹೆಣ್ಣು ಮಕ್ಕಳ ಮದುವೆಗೆ ₹1 ಲಕ್ಷ ನೆರವು ನೀಡಬೇಕು. ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಾಂಸ್ಕತಿಕ ಭವನವನ್ನು ನಿರ್ಮಿಸಬೇಕು. ಸದ್ಯ ಬಾಕಿ ಇರುವ ಕಲಾವಿದರ ಹಣವನ್ನು ತಿಂಗಳೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.