ಚನ್ನಪಟ್ಟಣ: ಡಿ.ಕೆ. ಸಹೋದರರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಸಿ.ಪಿ. ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲಾಗಿದೆ. ಅವರಿಗೆ ಇಂತಹ ದುರ್ದೈವ ಬರಬಾರದಿತ್ತು ಎಂದು ಮಾಜಿ ಸಚಿವ ಸಾರಾ ಮಹೇಶ್ ಲೇವಡಿ ಮಾಡಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಜೆಡಿಎಸ್ ಮುಖಂಡರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಯೋಗೇಶ್ವರ್ ಅವರನ್ನು ನಾವು ಅಭ್ಯರ್ಥಿ ಮಾಡುತ್ತೇವೆ ಎಂದಾಗ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿಗೆ ಇಂತಹ ದುರ್ದೈವ ಬರಬಾರದಿತ್ತು ಎಂದಿದ್ದರು. ಈಗ ಡಿಸಿಎಂ ಅವರಿಗೆ ಯಾವ ದೈವ ಬಂದಿದೆ ಎಂಬುದನ್ನು ಹೇಳಲಿ’ ಎಂದು ಟೀಕಿಸಿದರು.
‘ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದಿದ್ದರು. ತಮ್ಮ ಸಹೋದರ ಡಿ.ಕೆ. ಸುರೇಶ್ ಅಭ್ಯರ್ಥಿ ಆಗುತ್ತಾರೆ ಎಂದುಕೊಂಡಿದ್ದೆವು. ಆದರೆ ಈಗ ಯೋಗೇಶ್ವರ್ ಅವರನ್ನು ಕರೆತಂದಿದ್ದಾರೆ. ಆದರೆ ಯೋಗೇಶ್ವರ್ ವಿರುದ್ಧ ಸಾಕಷ್ಟು ಆರೋಪಗಳಿವೆ. ಇದಕ್ಕೆಲ್ಲ ಜನರೆ ತೀರ್ಪು ನೀಡುತ್ತಾರೆ’ ಎಂದು ಹೇಳಿದರು.
‘ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರ ಒತ್ತಡದಿಂದ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಅಭ್ಯರ್ಥಿ ಆರೋಪ ಮುಕ್ತವಾಗಿದ್ದಾರೆ. ಹಾಗಾಗಿ ಯುವ ನಾಯಕನನ್ನು ಗೆಲ್ಲಿಸಲು ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿ.ಎಂ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಮಾಡಿರುವ ಕೆಲಸಗಳು, ಕಾರ್ಯಕರ್ತರ ಬಲವೇ ನಮಗೆ ಶ್ರೀರಕ್ಷೆ. ಜನರಿಗೆ ಬದಲಾವಣೆ ಬೇಕಿದೆ. ಹಾಗಾಗಿ ಜನರೇ ತೀರ್ಮಾನ ಮಾಡುತ್ತಾರೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೃಷ್ಣಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.