ADVERTISEMENT

ಹಾರೋಬೆಲೆ: 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಚಾಲನೆ

ಹತ್ತು ಎಕರೆ ಜಮೀನಿನ ವೆಚ್ಚ ಭರಿಸಿದ ಶಾಸಕ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 7:09 IST
Last Updated 26 ಡಿಸೆಂಬರ್ 2019, 7:09 IST
114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಶಾಸಕ ಡಿ.ಕೆ. ಶಿವಕುಮಾರ್ ಬುಧವಾರ ಚಾಲನೆ ನೀಡಿದರು
114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಶಾಸಕ ಡಿ.ಕೆ. ಶಿವಕುಮಾರ್ ಬುಧವಾರ ಚಾಲನೆ ನೀಡಿದರು   

ರಾಮನಗರ: ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ 114 ಅಡಿ ಎತ್ತರದ ಏಕಶಿಲೆಯ ಏಸುಕ್ರಿಸ್ತರ ಪ್ರತಿಮೆ ನಿರ್ಮಾಣಕ್ಕೆ ಕ್ರಿಸ್‌ಮಸ್‌ ದಿನವಾದ ಬುಧವಾರ ಶಾಸಕ ಡಿ.ಕೆ. ಶಿವಕುಮಾರ್‌ ಶಿಲಾನ್ಯಾಸ ನೆರವೇರಿಸಿದರು.

ಏಸುವಿನ ಪ್ರತಿಮೆಯ ಬಲಪಾದದ ಕಲ್ಲಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪ್ರತಿಮೆ ನಿರ್ಮಾಣಕ್ಕಾಗಿ 10 ಎಕರೆ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಜಮೀನು ಖರೀದಿಗೆ ತಗುಲುವ ವೆಚ್ಚವನ್ನು ಸ್ವತಃ ಡಿ.ಕೆ. ಶಿವಕುಮಾರ್ ಭರಿಸಿದ್ದು, ಸರ್ಕಾರಕ್ಕೆ ಹಣ ಪಾವತಿಸಿದ್ದಾರೆ. ಜಮೀನಿನ ದಾಖಲೆಗಳ ಪತ್ರವನ್ನು ಪ್ರತಿಮೆ ನಿರ್ಮಾಣ ಟ್ರಸ್ಟ್‌ಗೆ ಇದೇ ಸಂದರ್ಭ ಅವರು ಹಸ್ತಾಂತರ ಮಾಡಿದರು. ಪಕ್ಕದಲ್ಲೇ ಇರುವ ಪ್ರತಿಮೆ ಮಾದರಿಯನ್ನು ಅವರು ವೀಕ್ಷಿಸಿದರು. ಸಂಸದ ಡಿ.ಕೆ. ಸುರೇಶ್‌, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಟ್ರಸ್ಟಿನ ಚಿನ್ನರಾಜು ಉಪಸ್ಥಿತರಿದ್ದರು.

ಈ ಪ್ರತಿಮೆಯು ಒಟ್ಟು 114 ಅಡಿ ಎತ್ತರ ಇರಲಿದೆ. ಇದರ ಪೈಕಿ 13 ಅಡಿ ಎತ್ತರದವರೆಗೆ ಮೆಟ್ಟಿಲುಗಳು ಇರಲಿವೆ. ಈ ಮೆಟ್ಟಿಲು ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಏಕ ಗ್ರಾನೈಟ್‌ ಶಿಲೆಯಲ್ಲಿ ನಿರ್ಮಾಣ ಆಗಲಿರುವ ಈ ಪ್ರತಿಮೆಯು ವಿಶ್ವದಲ್ಲೇ ಏಸುವಿನ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗಿದೆ. ಹಾರೋಬೆಲೆ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ವಾಸವಿದ್ದು, ಅಲ್ಲಿಯೇ ಪ್ರತಿಮೆ ನಿರ್ಮಾಣ ಆಗುತ್ತಿದೆ.

ADVERTISEMENT
ಕಪಾಲಿ ಬೆಟ್ಟದಲ್ಲಿ ನಿರ್ಮಾಣ ಆಗಲಿರುವ ಏಸು ಪ್ರತಿಮೆ ಮಾದರಿಯನ್ನು ಶಾಸಕ ಡಿ.ಕೆ. ಶಿವಕುಮಾರ್‌ ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.