ADVERTISEMENT

ಮನಸ್ಸಿನ ನೆಮ್ಮದಿಯ ತಾಣ ಈ ಧ್ಯಾನ ಕೇಂದ್ರ

ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಧ್ಯಾನಕ್ಕೆಂದೇ ಮೀಸಲಿದೆ ಮುರಂತಸ್ತಿನ ಕಟ್ಟಡ

ಎಸ್.ರುದ್ರೇಶ್ವರ
Published 7 ಸೆಪ್ಟೆಂಬರ್ 2019, 19:30 IST
Last Updated 7 ಸೆಪ್ಟೆಂಬರ್ 2019, 19:30 IST
ಧ್ಯಾನ ಕೇಂದ್ರದ ಒಳಗೆ ಚಟುವಟಿಕೆಯಲ್ಲಿ ತೊಡಗಿರುವ ಆಸಕ್ತರು
ಧ್ಯಾನ ಕೇಂದ್ರದ ಒಳಗೆ ಚಟುವಟಿಕೆಯಲ್ಲಿ ತೊಡಗಿರುವ ಆಸಕ್ತರು   

ರಾಮನಗರ: ಸಮಾಜದಲ್ಲಿ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರು ಹಲವರಿದ್ದಾರೆ. ಅಂತಹವರಲ್ಲಿ 68 ವರ್ಷ ವಯಸ್ಸಿನ ಎನ್. ಕೃಷ್ಣಪ್ಪ ಸಹ ಒಬ್ಬರು.

ಇವರು ಪೊಲೀಸ್ ಇಲಾಖೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿಯ ನಂತರ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ತಮ್ಮ ಸ್ವಂತ ನಿವೇಶನದಲ್ಲಿ 30X45 ಚ.ಅಡಿ ಅಳತೆಯಲ್ಲಿ ಮೂರು ಅಂತಸ್ತಿನ 'ರಾಮನಗರ ಪಿರಮಿಡ್ ಧ್ಯಾನ ಕೇಂದ್ರ'ವನ್ನು 2017ರಲ್ಲಿ ನಿರ್ಮಿಸಿದ್ದಾರೆ. ಇಲ್ಲಿ ಈಗ ಪ್ರತಿನಿತ್ಯ ನೂರಾರು ಮಂದಿ ಉಚಿತವಾಗಿ ಧ್ಯಾನ, ಯೋಗ ಮಾಡುತ್ತಿದ್ದಾರೆ. ಪ್ರತಿ ಭಾನುವಾರ ನಡೆಯುವ ಸತ್ಸಂಗ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ದಿನದ 24 ಗಂಟೆಯು ಧ್ಯಾನ ಕೇಂದ್ರ ತೆರೆದಿರುತ್ತದೆ. ನಾಗರಿಕರು ಬಿಡುವಿದ್ದಾಗ ಬಂದು ಧ್ಯಾನ ಮಾಡಬಹುದಾಗಿದೆ. ವಯಸ್ಸಾದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಲಿಫ್ಟ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಆಧ್ಯಾತ್ಮದೆಡೆ ಸೆಳೆತ: ‘2012ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದೆ. ಸ್ನೇಹಿತ ರಾಮಲಿಂಗಪ್ಪ ಎಂಬುವರಿಂದ ಧ್ಯಾನ ಮಾಡುವುದರ ಮಹತ್ವ ಗೊತ್ತಾಯಿತು. ನಂತರದ ದಿನಗಳಲ್ಲಿ ಆಂಧ್ರ ಪ್ರದೇಶದಲ್ಲಿರುವ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ (ಪಿಎಸ್ಎಸ್ಎಂ)ನ ಸುಭಾಷ್ ಪತ್ರೀಜಿ ಅವರ ಪರಿಚಯವಾಗಿ ಸಂಪೂರ್ಣವಾಗಿ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡೆ’ ಎಂದು ಎನ್. ಕೃಷ್ಣಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

‘2014ರಲ್ಲಿ ಬಳ್ಳಾರಿಯಲ್ಲಿ 'ಸದಾನಂದ ಯೋಗ ಧ್ಯಾನ ಕೇಂದ್ರ' ನಿರ್ಮಾಣವಾಗಲು ಶ್ರಮಿಸಿ, ಅದರ ಅಧ್ಯಕ್ಷನೂ ಆದೆ. ನಂತರ ನಾನು ಜನಿಸಿದ ರಾಮನಗರದಲ್ಲಿ ಏನಾದರೂ ಮಾಡಬೇಕು ಎಂಬ ಧ್ಯೇಯದಿಂದ ಇಲ್ಲಿ ನನ್ನ ಸ್ವಂತ ನಿವೇಶನದಲ್ಲಿ 'ರಾಮನಗರ ಪಿರಮಿಡ್ ಧ್ಯಾನ ಕೇಂದ್ರ' ನಿರ್ಮಿಸಿದೆ. ಶಾಲಾಕಾಲೇಜುಗಳಿಗೆ ಹೋಗಿ ಧ್ಯಾನ, ಯೋಗ, ಸಸ್ಯಾಹಾರದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಪಿರಮಿಡ್ ಗಳನ್ನು ಬಳಸಿ ಧ್ಯಾನ ಮಾಡಿದರೆ ಆಲೋಚನಾ ರಹಿತ ಸ್ಥಿತಿ ಬೇಗ ಬರುತ್ತದೆ. ಎಲ್ಲ ಧರ್ಮೀಯರನ್ನು ಪಿರಮಿಡ್ ಬೆಸೆಯುತ್ತದೆ. ವಿವಿಧ ಜನಾಂಗಗಳನ್ನೆಲ್ಲ ಒಂದು ಕಡೆ ಸೇರಿಸುವುದೇ ಪಿರಮಿಡ್ ಧ್ಯಾನ ಕೇಂದ್ರದ ಧ್ಯೇಯವಾಗಿದೆ. ಜಾತಿ, ಮತ ಭೇದಗಳಿಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರು ಸೇರಿದಂತೆ ಎಲ್ಲರಿಗೂ ಇಲ್ಲಿ ಅವಕಾಶವಿದೆ. ಪಿರಮಿಡ್‌ಗಳು 'ಧ್ಯಾನ’ಕ್ಕೆ ದಾರಿ ತೋರಿಸುತ್ತವೆ. ಪಿರಮಿಡ್‌ ಕೇವಲ ಧ್ಯಾನಕ್ಕಾಗಿಯೇ ನಿರ್ಮಾಣವಾಗಿದೆ. ಪಿರಮಿಡ್ ಧ್ಯಾನ ಕೇಂದ್ರಗಳನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು’ ಎಂದರು.

ಸಾಮಾನ್ಯರಿಗೆ ಯೋಗ: ‘ಧ್ಯಾನ, ಯೋಗವನ್ನು ಸಾಮಾನ್ಯ ಜನರು ಮಾಡಬಹುದಾಗಿದೆ. ಈ ಮೂಲಕ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಲ್ಲಿ ರೋಗಗಳಿಂದ ಬಳಲುತ್ತಿದ್ದ ಹಲವು ಜನರು ಗುಣಮುಖರಾಗಿದ್ದಾರೆ. ಧ್ಯಾನ, ಯೋಗ, ಸತ್ಸಂಗ ಹಾಗೂ ಸಸ್ಯಾಹಾರದ ಮಹತ್ವವನ್ನು ಎಲ್ಲರೂ ಅರಿತು ಕೊಳ್ಳಬೇಕು’ ಎಂದು ಅವರು ಹೇಳಿದರು.

‘ಏಕಾಗ್ರತೆಯನ್ನು ಸಾಧಿಸಿಕೊಳ್ಳುವುದಕ್ಕೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕು. ನಾವು ಹೇಳಿದಂತೆ ನಮ್ಮ ಮನಸ್ಸು ಕೇಳಬೇಕೇ ವಿನಾ ಮನಸ್ಸು ಹೇಳಿದಂತೆ ನಾವು ಕೇಳಬಾರದು. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವಂತೆ ಮನಸ್ಸಿನ ಆರೋಗ್ಯಕ್ಕೆ ಒತ್ತು ಕೊಡುವುದಿಲ್ಲ. ಮನಸ್ಸನ್ನು ಯಮ, ನಿಯಮ, ಧ್ಯಾನ, ಸತ್ಸಂಗ, ಭಜನೆ, ಪೂಜೆ, ಕರ್ಮ ಯೋಗ, ಸದ್ವಿಚಾರಗಳು, ಪ್ರಾಣಾ ಯಾಮ ಇತ್ಯಾದಿಗಳಿಂದ ಶುದ್ಧಗೊಳಿಸಬಹುದು. ಏಕಾಗ್ರತೆಗೆ ಶುದ್ಧ ಮನಸ್ಸಿರಬೇಕು’ ಎಂದರು.

ಉತ್ತಮ ಪ್ರತಿಕ್ರಿಯೆ
‘ನನಗೆ 78 ವರ್ಷ ವಯಸ್ಸು. ವಿಪರೀತ ಮಂಡಿ ನೋವು ಇತ್ತು. ಧ್ಯಾನ, ಯೋಗ ಮಾಡಲು ಪ್ರಾರಂಭಿಸಿದ ಮೇಲೆ ನೋವು ಕಡಿಮೆಯಾಗಿದೆ. ರಕ್ತದೊತ್ತಡ, ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿದೆ’ ಎಂದು ಬಳೆಪೇಟೆಯ ನಿವೃತ್ತ ಶಿಕ್ಷಕ ಕೆ.ಎಂ. ಶಿವಣ್ಣ ತಿಳಿಸಿದರು.

‘ಕೃಷ್ಣಪ್ಪನವರು ಧ್ಯಾನ ಕೇಂದ್ರವನ್ನು ಸ್ಥಾಪಿಸಿರುವುದರಿಂದ ವಯಸ್ಸಾದವರಿಗೆ ತುಂಬಾ ಅನುಕೂಲವಾಗಿದೆ. ಅವರೆಲ್ಲಾ ಧ್ಯಾನ, ಯೋಗ ಮಾಡುತ್ತಿರುವುದರಿಂದ ರೋಗಗಳು ನಿಯಂತ್ರಣದಲ್ಲಿವೆ. ಜತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿದೆ’ ಎಂದು ಭಾರತ ವಿಕಾಸ ಪರಿಷದ್‌ನ ಬಿ.ಕೆ. ಕೃಷ್ಣಮೂರ್ತಿ ತಿಳಿಸಿದರು.

‘ನನಗೆ ಅನಾರೋಗ್ಯ ಕಾಡುತ್ತಿತ್ತು, ಯಾವುದೇ ಕೆಲಸ ಮಾಡಲು ಉತ್ಸಾಹವಿರಲಿಲ್ಲ. ಧ್ಯಾನ ಕೇಂದ್ರಕ್ಕೆ ಬಂದು ಧ್ಯಾನ, ಯೋಗ ಮಾಡಲು ಪ್ರಾರಂಭಿಸಿದ ಮೇಲೆ ನನ್ನಲ್ಲಿ ಬದಲಾವಣೆಗಳಾಗಿವೆ. ಅಶಾಂತಿ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಸಹಕಾರಿಯಾಯಿತು’ ಎಂದು ಚಿಕ್ಕಬಳ್ಳಾಪುರದ ಶೋಭಾ ತಿಳಿಸಿದರು.

‘ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಧ್ಯಾನ ಸಹಕಾರಿಯಾಗಿದೆ. ದುಶ್ಚಟ, ದುರಾಲೋಚನೆ ನಿವಾರಣೆಗಾಗಿ, ಅಜ್ಞಾನದಂದಿ ಜ್ಞಾನವನ್ನು ಪಡೆಯಲು ಧ್ಯಾನ ಮಾಡುವುದು ಒಳ್ಳೆಯದು’ ಎಂದು ಬೆಂಗಳೂರಿನ ಭಾಗ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.