ADVERTISEMENT

ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ

12 ಕಡೆ ಕ್ಯಾಮೆರಾ ಅಳವಡಿಕೆ; ದಂಡಾಸ್ತ್ರ ಪಯೋಗಿಸಲು ಮುಂದಾದ ನಗರಸಭೆ

ಓದೇಶ ಸಕಲೇಶಪುರ
Published 28 ಸೆಪ್ಟೆಂಬರ್ 2024, 4:57 IST
Last Updated 28 ಸೆಪ್ಟೆಂಬರ್ 2024, 4:57 IST
ರಾಮನಗರದ ಅರ್ಕಾವತಿ ಬಡಾವಣೆಯಲ್ಲಿದ್ದ ಕಸದ ಬ್ಲಾಕ್‌ಸ್ಪಾಟ್‌ ಸ್ವಚ್ಛಗೊಳಿಸಿ, ಕಸ ಎಸೆಯದಂತೆ ಸೂಚನಾ ಫಲಕ ಬರೆಯುತ್ತಿರುವ ಸಿಬ್ಬಂದಿ
ರಾಮನಗರದ ಅರ್ಕಾವತಿ ಬಡಾವಣೆಯಲ್ಲಿದ್ದ ಕಸದ ಬ್ಲಾಕ್‌ಸ್ಪಾಟ್‌ ಸ್ವಚ್ಛಗೊಳಿಸಿ, ಕಸ ಎಸೆಯದಂತೆ ಸೂಚನಾ ಫಲಕ ಬರೆಯುತ್ತಿರುವ ಸಿಬ್ಬಂದಿ   

ರಾಮನಗರ: ಕಸದ ಬ್ಲಾಕ್‌ಸ್ಪಾಟ್‌ಗಳಾಗಿರುವ ರಸ್ತೆ ಬದಿ, ಖಾಲಿ ನಿವೇಶನ, ಕಟ್ಟಡದ ಕಾಂಪೌಂಡ್, ಸಾರ್ವಜನಿಕ ಸ್ಥಳ ಸೇರಿದಂತೆ ನಿತ್ಯ ಕಸದ ರಾಶಿ ಎದ್ದು ಕಾಣುವ ಸ್ಥಳಗಳನ್ನು ಗುರುತಿಸಿರುವ ನಗರಸಭೆಯು, ಇದೀಗ ಅಂತಹ ಸ್ಥಳಗಳ ಮೇಲೆ ಕ್ಯಾಮೆರಾ ನಿಗಾ ಇಟ್ಟು ಬ್ಲಾಕ್‌ಸ್ಪಾಟ್‌ಗಳನ್ನು ನಿವಾರಿಸಲು ಹೆಜ್ಜೆ ಇಟ್ಟಿದೆ.

ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುವ ಜೊತೆಗೆ, ಸಾರ್ವಜನಿಕ ಉದ್ಯಾನ ಮತ್ತು ರಸ್ತೆಗಳನ್ನು ಸ್ವಚ್ಛವಾಗಿಡಲು ಹಲವು ಕ್ರಮಗಳನ್ನು ನಗರಸಭೆ ಕೈಗೊಂಡಿದೆ. ಹಾದಿ–ಬೀದಿಯಲ್ಲಿ ಕಸದ ರಾಶಿ ಕಣ್ಣಿಗೆ ರಾಚದಂತೆ ನಿತ್ಯ ತೆರವುಗೊಳಿಸಿ ವಿಲೇವಾರಿ ಮಾಡುವ ಜೊತೆಗೆ, ಪ್ರತಿ ಮನೆಯಿಂದಲೂ ನಿತ್ಯ ನಗರಸಭೆ ವಾಹನಗಳಿಗೆ ಕಸ ಹಾಕುವಂತೆ ಸೂಚನೆ ನೀಡಿದೆ.

12 ಕ್ಯಾಮೆರಾ ಅಳವಡಿಕೆ: ‘ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಸದ್ಯ 30ಕ್ಕೂ ಹೆಚ್ಚು ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ, 12 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉಳಿದ ಜಾಗಗಳಿಗೂ ಹಂತಹಂತವಾಗಿ ಅಳವಡಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬ್ಲಾಕ್‌ಸ್ಪಾಟ್‌ ಅನ್ನು ಸ್ವಚ್ಛಗೊಳಿಸಿ ಅಲ್ಲಿ ಸೂಚನಾ ಫಲಕ ಅಳವಡಿಸಿ, ಆ ಜಾಗದಲ್ಲಿ ರಂಗೋಲಿ ಬಿಡಿಸಿ ಸಿಂಗರಿಸಲಾಗಿದೆ. ಕಸ ಎಸೆದರೆ ದಂಡ ವಿಧಿಸುವ ಎಚ್ಚರಿಕೆಯನ್ನು ಫಲಕ ಒಳಗೊಂಡಿದೆ. ವಾರ್ಡ್‌ವಾರು ಗುರುತಿಸಿರುವ ಬ್ಲಾಕ್‌ಸ್ಪಾಟ್‌ಗಳಲ್ಲಿ ಮತ್ತೆ ಕಸದ ರಾಶಿ ಬೀಳದಂತೆ ನೋಡಿಕೊಳ್ಳುವ ಹೊಣೆಯನ್ನು ಆರೋಗ್ಯ ನಿರೀಕ್ಷಕರು, ಮೇಸ್ತ್ರಿಗಳು ಹಾಗೂ ಪೌರ ಕಾರ್ಮಿಕರಿಗೆ ವಹಿಸಲಾಗಿದೆ’ ಎಂದರು.

ರಸ್ತೆ ಸ್ವಚ್ಛತೆಗೆ ದಿನ ನಿಗದಿ: ‘ನಗರಸಭೆ ವ್ಯಾಪ್ತಿಯಲ್ಲಿ 6 ಕಿ.ಮೀ. ಉದ್ದ ಹೆದ್ದಾರಿ ಇದ್ದು, ಕೆಲವೆಡೆ ಕಸದ ರಾಶಿ ಕಂಡುಬಂದಿದೆ. ಹಾಗಾಗಿ, ಪ್ರತಿ ಗುರುವಾರ ಹೆದ್ದಾರಿಯನ್ನು ಸ್ವಚ್ಛಗೊಳಿಸಲಾಗುವುದು. ಜೊತೆಗೆ, ನಗರದಲ್ಲಿರುವ ಉದ್ಯಾನಗಳನ್ನು ಪ್ರತಿ 2ನೇ ಮತ್ತು 4ನೇ ಶನಿವಾರ ಸ್ವಚ್ಛಗೊಳಿಸಲಾಗುವುದು’ ಎಂದು ತಿಳಿಸಿದರು.

ಇತ್ತೀಚೆಗೆ ನಗರಸಭೆಗೆ ವರ್ಗಾವಣೆಯಾಗಿ ಬಂದಿರುವ ಪೌರಾಯುಕ್ತ ಡಾ. ಜಯಣ್ಣ ಅವರು, ಘನತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಕಚೇರಿ ಬಿಟ್ಟು ಕದಲದ ಅಧಿಕಾರಿಗಳು, ಇದೀಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ.

ರಾಮನಗರದಲ್ಲಿ ಕಸದ ಬ್ಲಾಕ್‌ಸ್ಪಾಟ್‌ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದ ಪೌರ ಕಾರ್ಮಿಕರು
ರಾಮನಗರದ ಶ್ರೀರಾಮ ಚಿತ್ರಮಂದಿರ ಸಮೀಪದ ಬ್ಲಾಕ್‌ಸ್ಪಾಟ್‌ ಜಾಗದಲ್ಲಿದ್ದ ಕಸ ತೆರವುಗೊಳಿಸಿ ಸ್ಥಳೀಯರಿಗೆ ತಿಳಿವಳಿಕೆ ನೀಡಿದ ನಗರಸಭೆಯ ಸಿಬ್ಬಂದಿ

ದೂರು ನೀಡಲು ಸಿಬ್ಬಂದಿ

ಕಾರ್ಡ್ ಹಂಚಿಕೆ ಬ್ಲಾಕ್‌ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಿ ಸೂಚನಾ ಫಲಕ ಅಳವಡಿಸುತ್ತಿರುವ ನಗರಸಭೆ ಅಧಿಕಾರಿಗಳು ಸ್ಥಳದಲ್ಲಿ ಸ್ಥಳೀಯರನ್ನು ಸೇರಿಸಿ ತಿಳಿವಳಿಕೆ ನೀಡುತ್ತಿದೆ. ಜೊತೆಗೆ ವಾರ್ಡ್ ವ್ಯಾಪ್ತಿಯಲ್ಲಿ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ದೂರು ನೀಡಲು ಪರಿಸರ ಎಂಜಿನಿಯರ್ ಆರೋಗ್ಯ ನಿರೀಕ್ಷಕ ಮೇಸ್ತ್ರಿಯ ಹೆಸರು ಹಾಗೂ ಅವರ ಸಂಪರ್ಕ ಸಂಖ್ಯೆ ಒಳಗೊಂಡ ಕಾರ್ಡ್ ಅನ್ನು ಸ್ಥಳೀಯರಿಗೆ ವಿತರಿಸುತ್ತಿದೆ. ಕಸ ಸಂಗ್ರಹಿಸುವ ವಾಹನ ಬಾರದಿದ್ದರೆ ಬ್ಲಾಕ್‌ಸ್ಪಾಟ್‌ಗಳಲ್ಲಿ ಮತ್ತೆ ಕಸ ಕಂಡುಬಂದರೆ ಅಥವಾ ತ್ಯಾಜ್ಯಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಸಾರ್ವಜನಿಕರು ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ಕಸದ ಬ್ಲಾಕ್‌ಸ್ಪಾಟ್‌ಗಳಲ್ಲಿ ಮೊದಲ ಸಲ ಕಸ ಎಸದರೆ ತಿಳಿವಳಿಕೆ ನೀಡಲಾಗುವುದು. ಎರಡನೇ ಸಲ ಎಸೆದರೆ ₹500 ದಂಡ ಮೂರನೇ ಸಲ ಎಸೆದರೆ ₹5 ಸಾವಿರ ದಂಡ ಹಾಗೂ 4ನೇ ಸಲ ಎಸೆದರೆ ಪ್ರಕರಣ ದಾಖಲಿಸಲಾಗುವುದು
-ಡಾ. ಜಯಣ್ಣ, ಪೌರಾಯುಕ್ತ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.