ಬಿಡದಿ: ಬಿಡದಿಯ ವಾರ್ಡ್ ನಂ.4ರ ಕೆಂಚನಕುಪ್ಪೆ ಗ್ರಾಮಕ್ಕೆ ವಿಲೇವಾರಿಯಾಗದ ತ್ಯಾಜ್ಯ, ನಿರ್ವಹಣೆ ಕಾಣದ ಕಾಲುವೆ ಹಾಗೂ ದುರ್ನಾತ ಸ್ವಾಗತ ಕೋರುತ್ತದೆ.
ಗ್ರಾಮದಲ್ಲಿ ಹರಿಯುವ ನೆಲ್ಲಿಗುಡ್ಡ ಕೆರೆಯ ಕಾಲುವೆಗೆ ಚರಂಡಿ ಕೊಳಚೆ ನೀರು ಸೇರುತ್ತದೆ. ಮತ್ತೊಂದೆಡೆ ಕೆರೆ ಏರಿ ಮೇಲೆ ಕಸ ವಿಲೇವಾರಿಯಾಗದೆ ಗಬ್ಬು ನಾರುತ್ತಿದೆ.
ನೆಲ್ಲಿಗುಡ್ಡ ಕೆರೆಯ ಕಾಲುವೆಯು ಸುಮಾರು 6 ಕಿಲೋಮೀಟರ್ ಉದ್ದವಿದೆ. ಇಲ್ಲಿನ ತಮ್ಮಣ್ಣನದೊಡ್ಡಿ, ಕೆಂಚನಕುಪ್ಪೆ, ಆಲಸಿನ ಮರದ ದೊಡ್ಡಿ, ಗೊಲ್ಲಹಳ್ಳಿ, ಅಂಗರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಹೊಲ, ಗದ್ದೆಗಳಿಗೆ ಇದೇ ಕಾಲುವೆಯಿಂದ ನೀರು ಹರಿಯುತ್ತದೆ.
ಕೆಂಚನಕುಪ್ಪೆ ಗ್ರಾಮದಲ್ಲಿ ಸುಮಾರು ಒಂದು ಕಿಲೋಮೀಟರ್ ಉದ್ದದ ಕಾಲುವೆಯಲ್ಲಿ ಗಿಡ ಗಂಟಿ ಬೆಳೆದು ನಿಂತಿದೆ. ನೀರು ಸರಾಗವಾಗಿ ಹರಿಯದೆ ಕಲುಷಿತಗೊಂಡಿದ್ದು, ಜಾನುವಾರುಗಳು ನೀರು ಕುಡಿಯಲು ಆಗುತ್ತಿಲ್ಲ.
ನಿರ್ವಹಣೆ ಇಲ್ಲದೆ ಕಾಲುವೆಯಲ್ಲಿ ಗಿಡಗಳು ಬೆಳೆದು ನಿಂತಿರುವುದರಿಂದ ಸೊಳ್ಳೆ ಹಾಗೂ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಜನರಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಬಂದಿದೆ.
ನಿವಾಸಿಗಳಿಗೆ ಅರಿವಿನ ಕೊರತೆ: ಸ್ಥಳೀಯ ನಿವಾಸಿಗಳು ಅರಿವಿನ ಕೊರತೆಯಿಂದ ಕಾಲುವೆ ಬಳಿ ಕಸ ಸುರಿಯುತ್ತಿದ್ದಾರೆ. ಇದರಿಂದ ಅವರೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪುರಸಭೆ ಕಾಲುವೆ ಬಳಿ ಕಸ ಸುರಿಯದಂತೆ ಜನರಿಗೆ ಅರಿವು ಮೂಡಿಸಬೇಕು. ಅಲ್ಲದೆ ಕಾಲಕಾಲಕ್ಕೆ ಪುರಸಭೆಯಿಂದ ಸ್ವಚ್ಛಗೊಳಿಸಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ನೆಲ್ಲಿಗುಡ್ಡ ಕೆರೆಯ ಕಾಲುವೆಯು ಪುರಸಭೆ ಅಥವಾ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆಯೋ ಎಂದು ಪರಿಶೀಲಿಸಿ ಚರಂಡಿಯ ನೀರು ಕಾಲುವೆಗೆ ಹರಿಯುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.-ರಮೇಶ್, ಪುರಸಭೆ ಮುಖ್ಯಾಧಿಕಾರಿ
ಚರಂಡಿ ಕೊಳಚೆ ನೀರನ್ನು ಕಾಲುವೆಗೆ ಬಿಟ್ಟಿರುವುದಕ್ಕೆ ಹಾಗೂ ಅದನ್ನು ಸರಿಪಡಿಸಲು ಪುರಸಭೆ ಅಧಿಕಾಗಳಿಗೆ ನೋಟಿಸ್ ನೀಡಿದ್ದೇವೆ. ಕಾಲುವೆಯ ಸ್ವಚ್ಛತೆಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.-ಸೌರವ್, ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ
ಚರಂಡಿ ನೀರು ಕಾಲುವೆ ಹರಿಸುತ್ತಿರುವುದರಿಂದ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ಅಧಿಕಾರಿಗಳು ಗಮನ ಹರಿಸಿ ಶೀಘ್ರ ಪರಿಹಾರ ದೊರಕಿಸಬೇಕು.-ಸುರೇಶ್, ಕೆಂಚನಕುಪ್ಪೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.