ADVERTISEMENT

ರಾಮನಗರ: ಹಬ್ಬಕ್ಕೆ ಕಳೆಗಟ್ಟಿದ ಮಾರುಕಟ್ಟೆ

ವರಮಹಾಲಕ್ಷ್ಮಿ ಹಬ್ಬ ಇಂದು: ದುಬಾರಿಯಾದ ಹೂವು–ಹಣ್ಣು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 8:46 IST
Last Updated 25 ಆಗಸ್ಟ್ 2023, 8:46 IST
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಾಮನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಮಾರುಕಟ್ಟೆಯಲ್ಲಿ ಮಹಿಳೆಯರು ಹೂ ಖರೀದಿಸಿದರು
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಾಮನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಮಾರುಕಟ್ಟೆಯಲ್ಲಿ ಮಹಿಳೆಯರು ಹೂ ಖರೀದಿಸಿದರು   

ರಾಮನಗರ: ಶುಭ ಶುಕ್ರವಾರದಂದು ನಡೆಯಲಿರುವ ಸಂಪತ್ತಿನ ಅಧಿದೇವತೆ ವರ ಮಹಾಲಕ್ಷ್ಮಿಯ ಹಬ್ಬದ ಅಂಗವಾಗಿ, ಗುರುವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ನಗರದ ಹಳೇ ಬಸ್ ನಿಲ್ದಾಣದ ಬಳಿಯ ಹೂವು ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣಿನ ದರ ದುಬಾರಿಯಾಗಿದ್ದರೂ, ಜನ ಪೂಜೆಗೆ ಅಗತ್ಯವಿರುವಷ್ಟು ಖರೀದಿ ಮಾಡಿದರು.

ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಸಹ ಸಾಮಗ್ರಿ ಖರೀದಿಯ ಭರಾಟೆ ಜೋರಾಗಿತ್ತು. ದೇವರ ಮಂಟಪ ಅಲಂಕರಿಸಲು ಮತ್ತು ಮನೆ ಮುಂದೆ ತೋರಣ ಕಟ್ಟಲು ರಸ್ತೆ ಬದಿ ಬಾಳೆದಿಂಡು, ಮಾವಿನ ಸೊಪ್ಪು, ಹೂವು ಹಾಗೂ ಹಣ್ಣುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಕಬ್ಬಿನ ಸೋಗೆಗೆ ₹10– ₹20, ಬಾಳೆಕಂದು ಮತ್ತು ಮಾವಿನ ಸೊಪ್ಪುಗಳ ಕಟ್ಟಿಗೆ ₹10– ₹20ರವರೆಗೆ ಮಾರಾಟವಾಯಿತು.

ADVERTISEMENT

‘ಹಬ್ಬದ ಅಂಗವಾಗಿ ಹೂವು ಮತ್ತು ಹಣ್ಣಿನ ದರ ಗಗನಕ್ಕೇರಿದೆ. ಪ್ರತಿ ಸಲವೂ ಇದು ಮಾಮೂಲಿಯಾಗಿದೆ. ಆದರೂ, ಹಬ್ಬಕ್ಕೆ ಎಷ್ಟು ಬೇಕೋ ಅಷ್ಟನ್ನು ಖರೀದಿಸಲೇಬೇಕಿದೆ. ದರ ಏರಿಕೆಯಾಗಿದೆ ಎಂದು ಹಬ್ಬ ಆಚರಿಸುವುದನ್ನು ಬಿಡುವುದಕ್ಕೆ ಆಗುವುದಿಲ್ಲ’ ಎಂದು ಗ್ರಾಹಕಿ ರಾಧಾ ಹೇಳಿದರು.

‘ಹೂವಿನ ದರ ಹೆಚ್ಚಾಗಿದೆ. ಗ್ರಾಹಕರಿಗೆ ಸ್ವಲ್ಪ ಹೊರೆ ಎನಿಸಿದರೂ, ಹಬ್ಬದ ನೆಪದಲ್ಲಿ ಖರೀದಿಸುತ್ತಾರೆ. ವಿವಿಧ ಕಾರಣಗಳಿಗಾಗಿ ವರ್ಷದ ಬೇರೆ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ರೈತರಿಗೆ ಹಬ್ಬದ ನೆಪದಲ್ಲಿ ಒಂದಿಷ್ಟು ಲಾಭವಾಗುತ್ತದೆ. ಹಬ್ಬ ಮುಗಿದ ಎರಡ್ಮೂರು ದಿನದಲ್ಲಿ ದರ ಇಳಿಕೆಯಾಗಲಿದೆ’ ಎಂದು ವ್ಯಾಪಾರಿ ಶರತ್ ಹೇಳಿದರು.

ಪೂಜೆಗೆ ಸಿದ್ಧತೆ: ಹಬ್ಬದಂದು ದೇವಾಲಯಗಳಲ್ಲೂ ವಿಶೇಷ ಪೂಜೆ ನೆರವೇರುತ್ತವೆ. ಅದಕ್ಕಾಗಿ, ದೇವಸ್ಥಾನಗಳಲ್ಲಿ ಪೂಜೆಗೆ ತಯಾರಿ ನಡೆಯಿತು. ಭಕ್ತರು ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದರ ಜೊತೆಗೆ ಹೊಸ ಬಟ್ಟೆಗಳನ್ನು ಧರಿಸಿ ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಾಮನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಮಾರುಕಟ್ಟೆಯಲ್ಲಿ ಜನ ಬಾಳೆಹಣ್ಣು ಖರೀದಿಸಿದರು

ಕನಕಾಂಬರ ಹೂ ಕೆ.ಜಿ.ಗೆ ₹ 2500

ಎರಡು ದಿನದ ಹಿಂದೆಯಷ್ಟೇ ಪ್ರತಿ ಕೆ.ಜಿ ಗೆ ₹1500 ಇದ್ದ ಕನಕಾಂಬರ ಗುರುವಾರ ₹2500ಕ್ಕೆ ಏರಿಕೆಯಾಗಿದೆ. ಅದೇ ರೀತಿ ಮಳ್ಳೆ ಹೂ ₹1200 ಮಲ್ಲಿಗೆ ₹2 ಸಾವಿರ ಕಾಕಡ ₹800 ಗುಲಾಬಿ ₹300 ಮಾರಿಗೋಲ್ಡ್ ₹300 ಹಾಗೂ ಮಲ್ಲಿಗೆ ಹಾರ ಒಂದಕ್ಕೆ ₹800–1000ಕ್ಕೆ ಮಾರಾಟವಾಗುತ್ತಿತ್ತು.  ಸೇಬಿನ ದರ ₹200-260 ಪಚ್ಚಬಾಳೆ ₹50-70 ಏಲಕ್ಕಿ ಬಾಳೆಹಣ್ಣು ₹130-160 ಕಿತ್ತಳೆ ₹160-200 ಮೂಸಂಬಿ ₹90-130 ದ್ರಾಕ್ಷಿ ₹190- 220ಕ್ಕೆ ಏರಿಕೆಯಾಗಿದೆ.

ವರಮಹಾಲಕ್ಷ್ಮಿ ಹಬ್ಬ; ಖರೀದಿ ಜೋರು

ಕನಕಪುರ: ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಗುರುವಾರ ನಗರದಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಎಲ್ಲಿ ನೋಡಿದರೂ ಜನವೋ ಜನ. ಎಂ.ಜಿ.ರಸ್ತೆ ಸೇರಿದಂತೆ ಚನ್ನಬಸಪ್ಪ ವೃತ್ತ ಅರಣ್ಯ ಇಲಾಖೆ ಮುಂಭಾಗ ಹೂವಿನ ಮಾರುಕಟ್ಟೆ ಅರ್ಕಾವತಿ ರಸ್ತೆಯಲ್ಲಿ ಪೂಜಾ ಸಾಮಗ್ರಿಗಳು ಸೇರಿದಂತೆ ಹಬ್ಬದ ವಸ್ತುಗಳ ಮಾರಾಟ ನಡೆಯಿತು.

ಹಣ್ಣು ತರಕಾರಿ ಹೂವುಗಳ ಬೆಲೆ ದುಪ್ಪಟ್ಟಾಗಿದ್ದರೂ; ಗ್ರಾಹಕರು ಖರೀದಿಸಿದರು. ಸಕಲ ಸಿದ್ಧತೆ ಕುದೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಳೆಹಣ್ಣು ಹೂವು ತರಹೇವಾರಿ ಹಣ್ಣುಗಳು ತಾವರೆ ಹೂವಿನ ಧಾರಣೆ ದುಬಾರಿಯಾಗಿದೆ. ಮನೆಗಳಲ್ಲಿ ಕಳಶ ಇಡುವವರು ಲಕ್ಷ್ಮಿಗೆ ಉಡಿಸಲು ಸೀರೆ ಕುಪ್ಪಸ ಲಕ್ಷ್ಮಿ ಮುಖವಾಡ ಅಲಂಕಾರಿಕ ವಸ್ತುಗಳು ಬಾಳೆದಿಂಡು ಖರೀದಿಸಿದರು.

ಬೇಲದ ಹಣ್ಣು ಬೆಂಗಳೂರು ನೀಲಿ ದ್ರಾಕ್ಷಿ ಅನಾನಸ್‌ ಸೀತಾಫಲ ಸೀಬೆ ಸೇಬು ಮೂಸಂಬಿ ಕಿತ್ತಳೆ ತೆಂಗಿನಕಾಯಿ ಹಾಗೂ ಬಾಳೆಹಣ್ಣು ಖರೀದಿಗೆ ಜನರು ಮುಗಿಬಿದ್ದರು. ಸಿಹಿ ತಿನಿಸಿನ ಮಾರಾಟವೂ ಭರ್ಜರಿಯಾಗಿ ನಡೆದಿದೆ ಎಂದು ವ್ಯಾಪಾರಿ ಮಂಜುನಾಥ್ ಹೇಳಿದರು.

‘ವರಮಹಾಲಕ್ಷ್ಮಿ ಹಬ್ಬವನ್ನು ತಪ್ಪದೇ ಆಚರಿಸುತ್ತೇವೆ. ಹೂವು–ಹಣ್ಣು ದುಬಾರಿಯಾಗಿದೆ ಎಂದು ಹಬ್ಬವನ್ನು ಮಾಡದಿರಲು ಸಾಧ್ಯವಿಲ್ಲ. ಎಷ್ಟೇ ಕಷ್ಟವಾದರೂ ಹಬ್ಬ ಆಚರಿಸುತ್ತೇವೆ’ ಎನ್ನುತ್ತಾರೆ ಕುದೂರಿನ ಆಶಾ.

ವ್ಯಾಪಾರ–ವಹಿವಾಟು ನೀರಸ

ಮಾಗಡಿ: ಪಟ್ಟಣದಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನ ಬೀದಿ ಬದಿ ಹೂವು ಹಣ್ಣು ತರಕಾರಿ ಮಾರಾಟ ನೀರಸವಾಗಿತ್ತು. ಮಾರುಕಟ್ಟೆ ಇಲ್ಲದಿದ್ದರಿಂದ ಬೀದಿ ಬದಿಯಲ್ಲಿಯೇ ವ್ಯಾಪಾರಸ್ಥ ಮಹಿಳೆಯರು ಗ್ರಾಹಕರಿಗಾಗಿ ಕಾದು ಕುಳಿತಿದ್ದರು. ಅಂಗಡಿಗಳ ಮುಂದೆ ಬಿಕೊ ಎನ್ನುವಂತಿತ್ತು.

ಹೂವು ಮಾರಾಟ ಮಾಡುವ ಜಯಮ್ಮ ರಂಗಸ್ವಾಮಿ ಮಾತನಾಡಿ ‘ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಹೂವು ಬೆಳೆದಿಲ್ಲ. ಬೆಂಗಳೂರಿನಿಂದ ದುಬಾರಿ ಬೆಲೆಗೆ ತಂದಿದ್ದೇವೆ. ಕೊಳ್ಳುವವರು ಹಿಂಜರಿಯುತ್ತಿದ್ದಾರೆ. ವ್ಯಾಪಾರ ಕೈಕಚ್ಚುವ ಆತಂಕ ಎದುರಾಗಿದೆ’ ಎಂದರು.

ತಾವರೆ ಹೂವು ಖರೀದಿಸಿದ ಜ್ಯೋತಿಪಾಳ್ಯದ ಭಾಗ್ಯಮ್ಮ ಮಾತನಾಡಿ ‘ವರಮಹಾಲಕ್ಷ್ಮೀ ಅಲಂಕಾರ ಪ್ರಿಯೆ. ಬೆಲೆ ಏರಿಕೆಯಾಗಿದ್ದರೂ ಪೂಜೆ ಮಾಡಿ ಹಬ್ಬ ಆಚರಿಸಲೇ ಬೇಕು. ಹಬ್ಬಕ್ಕೆ ₹ 10 ಸಾವಿರ ಖರ್ಚು ಮಾಡಿದ್ದರೂ ಸಹ ಬೇಕಾದ ಹೂವು–ಹಣ್ಣು ಖರೀದಿಸುವುದು ಕಷ್ಟವಾಗಿದೆ’ ಎಂದರು.

ಹಣ್ಣು ಮಾರಾಟಗಾರ ರಂಗನಾಥ್‌ ಮಾತನಾಡಿ ‘ತಾಲ್ಲೂಕಿನಲ್ಲಿ ಮಳೆಯಾಗದಿದ್ದರಿಂದ ಜನರ ಕೈಯಲ್ಲಿ ಹಣವಿಲ್ಲ. ವರಮಹಾಲಕ್ಷ್ಮಿ ಹಬ್ಬ ಹಿಂದೆಂದೂ ಈ ರೀತಿ ಕಳೆಗುಂದಿರಲಿಲ್ಲ. ಹಣ್ಣಿನ ಮಾರಾಟ ಕುಸಿದಿದೆ’ ಎಂದು ಹೇಳಿದರು. ಪಚ್ಚಬಾಳೆ ಹಣ್ಣು ಕೆ.ಜಿ ಗೆ ₹60 ಏಲಕ್ಕಿ ಬಾಳೆ ₹150 ಸೇಬು ₹220 ತಾವರೆಹೂವು ಒಂದಕ್ಕೆ ₹65ರಂತೆ ಬಿಕರಿಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.