ADVERTISEMENT

ರಾಮನಗರ: ಅಧೋಗತಿ ತಲುಪಿದ ಬಾನಂದೂರಿನ ಶಾಲೆ

ಶಿಥಿಲಾವಸ್ಥೆ ತಲುಪಿದ ಹಳೆಯ ಕಟ್ಟಡ; ಮಳೆಗೆ ಸೋರುವ ಚಾವಣಿ, ತೂತು ಬಿದ್ದಿರುವ ಗೋಡೆ

ಓದೇಶ ಸಕಲೇಶಪುರ
Published 25 ಜೂನ್ 2024, 5:23 IST
Last Updated 25 ಜೂನ್ 2024, 5:23 IST
<div class="paragraphs"><p>ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ</p></div>

ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

   

ರಾಮನಗರ: ದೇಶವೇ ಪೂಜ್ಯ ಭಾವನೆಯಿಂದ ನೋಡುವಂತಹ ಆದಿಚುಂಚನಗಿರಿ ಮಹಾ ಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಜನಿಸಿದ ಊರಿನ ಶಾಲೆ ಅಧೋಗತಿ ತಲುಪಿದೆ. ಚುಂಚಶ್ರಿ ಹೆಸರಿನ ಮುಕುಟದ ಜೊತೆಗೆ, ಜಾನಪದ ಮೇರುಗಾಯಕ ಬಾನಂದೂರು ಕೆಂಪಯ್ಯ ಅವರಂತಹ ಪ್ರಸಿದ್ಧ ಕಲಾವಿದರು ಊರಿನ ಕೀರ್ತಿಯನ್ನು ರಾಜ್ಯದುದ್ದಕ್ಕೂ ಪಸರಿಸಿದ್ದಾರೆ.

ಇಷ್ಟೆಲ್ಲಾ ಹಿರಿಮೆಗಳಿದ್ದರೂ ಈ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಊರಿನಲ್ಲಿ ಮೊದಲಿಗೆ ಸ್ಥಾಪನೆಯಾಗಿದ್ದ ಶಾಲೆಯಲ್ಲಿ ಓದಿದ್ದ ಚುಂಚಶ್ರೀ ಅವರು, ನಂತರ ನೂತನ ಶಾಲಾ ಕಟ್ಟಡವನ್ನು 48 ವರ್ಷಗಳ ಹಿಂದೆ 1976ರಲ್ಲಿ ಲೋಕಾರ್ಪಣೆ ಮಾಡಿದ್ದರು. ಆ ಕಟ್ಟಡವೀಗ ಪಾಳು ಕಟ್ಟಡದಂತೆ ಭಾಸವಾಗುತ್ತಿದೆ.

ADVERTISEMENT

ಸುಮಾರು 600 ಮನೆಗಳೊಂದಿಗೆ 2,500ರಷ್ಟು ಜನಸಂಖ್ಯೆ ಇರುವ ಬಾನಂದೂರು ಬಿಡದಿ ಪುರಸಭೆ ವ್ಯಾಪ್ತಿಗೆ ಸೇರಿದೆ. ಊರಿಗೆ ಹೊಂದಿಕೊಂಡಂತೆ ಬಿಡದಿ ಕೈಗಾರಿಕಾ ಪ್ರದೇಶವಿರುವುದರಿಂದ ಇಲ್ಲಿ ಭೂಮಿಗೆ ಚಿನ್ನದ ಬೆಲೆ. ಬಿಡದಿ ಸ್ವಲ್ಪ ದೂರವಿರುವುದರಿಂದ ಊರಿನ ಬಡವರಿಗೆ ಸರ್ಕಾರಿ ಶಾಲೆಯೇ ಆಸರೆ.

ಬೀಳುವ ಆತಂಕ: ಹಳೆಯದಾದ ಹೆಂಚಿನ ಕಟ್ಟಡದ ಚಾವಣಿಯಿಂದ ಮಳೆ ನೀರು ಸೋರಿ ಗೋಡೆಗಳು ಅಲ್ಲಲ್ಲಿ ತೂತು ಬಿದ್ದಿವೆ. ಬಿಳಿ ಗೋಡೆಗಳ ಬಣ್ಣ ಬದಲಾಗಿದೆ. ಒಡೆದಿರುವ ಹೆಂಚುಗಳ ಮಧ್ಯೆ ಬೇಸಿಗೆಯಲ್ಲಿ ಬಿಸಿಲು ಕೊಠಡಿ ಪ್ರವೇಶಿಸಿದರೆ, ಮಳೆಗಾಲದಲ್ಲಿ ಸೋರುವ ನೀರಿಗೆ ತರಗತಿ ಬಚ್ಚಲು ಮನೆಯಾಗುತ್ತದೆ.

ಪ್ರತಿ ಮಳೆಗಾಲದಲ್ಲೂ ಶಾಲೆಯ ಕಾಂಪೌಂಡ್‌ ಕುಸಿಯುತ್ತಾ ಬಂದಿದೆ. ಕಿಟಕಿ, ಬಾಗಿಲುಗಳು ಬಿರುಕು ಬಿಟ್ಟಿವೆ. ಗೋಡೆಗಳಲ್ಲಿ ಬಣ್ಣ ಮತ್ತು ಕಾಂಕ್ರೀಟ್ ಚಕ್ಕೆ ಕಿತ್ತು ಬರುತ್ತಿದೆ. ಚಾವಣಿಗೆ ಹಾಕಿರುವ ಮರದ ಪಕಾಸುಗಳು ಕೆಲವೆಡೆ ಗೆದ್ದಲು ಹಿಡಿದಿವೆ. ಗಾಳಿ–ಮಳೆಗೆ ಹೆಂಚು ನೆಲ ಕಚ್ಚುತ್ತಲೇ ಇವೆ.

ಶಿಥಿಲಾವಸ್ಥೆ ತಲುಪಿರುವ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ದಾಖಲಾತಿ ಕುಸಿತ: ಒಂದು ಕಾಲದಲ್ಲಿ ಅಕ್ಕಪಕ್ಕದ ಊರುಗಳ ವಿದ್ಯಾರ್ಥಿಗಳ ಪ್ರಮುಖ ಕಲಿಕಾ ಕೇಂದ್ರವಾಗಿದ್ದ ಶಾಲೆಯಲ್ಲಿ ಇದೀಗ, ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ಸುರಕ್ಷತೆಯ ಗ್ಯಾರಂಟಿ ಇಲ್ಲದ ಶಾಲೆಗೆ ಹೇಗೆ ಕಳಿಸುವುದು ಎಂದುಕೊಂಡು ಪೋಷಕರು ಪಕ್ಕದಲ್ಲಿರುವ ಬಿಜಿಎಸ್ ಮತ್ತು ವಿದ್ಯಾ ವಿನಾಯಕ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.

‘ಒಂದರಿಂದ ಏಳನೇ ತರಗತಿವರೆಗೆ ಇರುವ ಶಾಲೆಯಲ್ಲಿ ಕಳೆದ ವರ್ಷ 33 ವಿದ್ಯಾರ್ಥಿಗಳಿದ್ದರು. ಸದ್ಯ ಆ ಸಂಖ್ಯೆ 26ಕ್ಕೆ ಇಳಿಕೆಯಾಗಿದೆ. ಶಾಲೆಯ ಶಿಥಿಲಾವಸ್ಥೆ ತಲುಪಿರುವುದಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಮಂಜೂರಾಗಿರುವ ನಾಲ್ವರು ಶಿಕ್ಷಕರ ಪೈಕಿ ಸದ್ಯ ಇಬ್ಬರು ಕಾಯಂ, ಮತ್ತೊಬ್ಬರು ಅತಿಥಿ ಶಿಕ್ಷಕರಿದ್ದಾರೆ. ಮಳೆ ಬಂದರೆ ಮಕ್ಕಳನ್ನು ಮತ್ತು ಪುಸ್ತಕ ಸೇರಿದಂತೆ ಕಲಿಕಾ ಪರಿಕರಗಳನ್ನು ನೆನೆಯದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ತನುಜಾ ಹೇಳಿದರು.

ಅಡ್ಡಿಯಾದ ಪ್ರತಿಷ್ಠೆ: ಶಾಲೆ ಅಭಿವೃದ್ಧಿಗೆ ಸ್ಥಳೀಯ ರಾಜಕೀಯ ಪ್ರತಿಷ್ಠೆಯೇ ಅಡ್ಡಿಯಾಗಿದೆ. ಇಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಬಣ ರಾಜಕೀಯದಿಂದಾಗಿ ಹೊಸ ಶಾಲಾ ಕಟ್ಟಡದ ವಿಷಯ ನನೆಗುದಿಗೆ ಬಿದ್ದಿದೆ. ಜೆಡಿಎಸ್‌ನವರು ಶಾಸಕರಾಗಿದ್ದಾಗ ಶಾಲೆ ಕಟ್ಟಲು ಪ್ರಯತ್ನ ಮಾಡಿದರೆ ಕಾಂಗ್ರೆಸ್‌ನವರು ಅಡ್ಡಿಪಡಿಸುತ್ತಾರೆ. ಅದೇ ರೀತಿ, ಕಾಂಗ್ರೆಸ್‌ನವರು ಮುಂದಾದಾಗ ಜೆಡಿಎಸ್‌ನವರು ತಡೆಯೊಡ್ಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

ಶಾಲಾಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಕೆಲ ಕಂಪನಿಗಳು ಮುಂದೆ ಬಂದು, ವಾಪಸ್ ಹೋದವು. ಹೊಸ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆಗೆಂದು ಬಂದಿದ್ದ ಶಾಸಕ ಎಚ್‌.ಸಿ. ಬಾಲಕೃಷ್ಣ ಊರಿನವರ ರಾಜಕೀಯಕ್ಕೆ ಬೇಸತ್ತು, ಬುದ್ದಿ ಹೇಳಿ ವಾಪಸ್ಸಾದರು. ಬೆರಳೆಣಿಕೆಯ ಮಕ್ಕಳಿರುವ ಸರ್ಕಾರಿ ಶಾಲೆ ನಮ್ಮೂರಿಗೆ ಬೇಡ ಎಂದು ಕೆಲವರು ಹೇಳಿದ್ದರು. ಇದೀಗ, ಶಿಕ್ಷಣ ಇಲಾಖೆ ಮತ್ತು ಹಳೆ ವಿದ್ಯಾರ್ಥಿಗಳು ಕಟ್ಟಡ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಮುಂದೇನಾಗುತ್ತದೊ ಕಾದು ನೋಡೋಣ ಎಂದರು.

ಕಟ್ಟಡ ಕೆಡವಲಿ, ನಾವೇ ಕಟ್ಟಿಕೊಳ್ಳುತ್ತೇವೆ

‘ನಮ್ಮೂರ ಶಾಲೆ ಉಳಿಸಿಕೊಳ್ಳುವ ಸಲುವಾಗಿ, ಹಳೆ ವಿದ್ಯಾರ್ಥಿಗಳು ಪಣ ತೊಟ್ಟಿದ್ದೇವೆ. ಶಾಲೆಯ ಜಮೀನಿನ ಮಾಲೀಕರಿಗೆ ನಾವೇ ಹಣ ಸಂಗ್ರಹಿಸಿ ಕೊಟ್ಟು ಸರ್ಕಾರದ ಹೆಸರಿಗೆ ಜಾಗ ನೋಂದಣಿ ಮಾಡಿಸಿದ್ದೇವೆ. ಶಿಕ್ಷಣ ಇಲಾಖೆಯಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಊರಿನಲ್ಲೇ ಹಲವು ಅಡೆತಡೆಗಳಾದವು. ಇದರಿಂದ ಬೇಸತ್ತು ನಾವೇ ಸುಮಾರು ₹50 ಲಕ್ಷದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದೇವೆ. ಇಲಾಖೆಯವರು ಹಳೆ ಕಟ್ಟಡ ಕೆಡವಲು ಅನುಮತಿ ಕೊಟ್ಟರೆ, ನಿರ್ಮಾಣ ಕೆಲಸ ಶುರು ಮಾಡುತ್ತೇವೆ. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕೂಡ ಮಾಡಿದ್ದೇವೆ. ಶಾಲೆಯಲ್ಲಿ ಓದಿದವರು ವೈದ್ಯರು, ಎಂಜಿನಿಯರ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿದ್ದಾರೆ. ನಮ್ಮ ಪ್ರಯತ್ನಕ್ಕೆ ಅವರೂ ಕೈ ಜೋಡಿಸಲು ಮುಂದಾಗಿದ್ದಾರೆ. ಶಾಲೆ ಅಕ್ಕಪಕ್ಕ ಖಾಸಗಿ ಶಾಲೆಗಳಿದ್ದರೂ ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳು ಬರುತ್ತಾರೆ. ಜೊತೆಗೆ ನಮ್ಮ ಹಿರಿಯರ ನೆನಪಿಗಾದರೂ ಶಾಲೆ ಉಳಿಸಬೇಕಿದೆ’ ಎಂದು ಹೇಳಿದರು’ ಎಂದು ಶಾಲೆಯ ಹಳೆ ವಿದ್ಯಾರ್ಥಿ ಶಿವಕುಮಾರ್ ಬಿ.ಎನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸುರಕ್ಷತೆಯ ಗ್ಯಾರಂಟಿ ಬೇಕಿದೆ

‘ಶಾಲೆಗೆ ಬರುವ ಮಕ್ಕಳಿಗೆ ಸುರಕ್ಷತೆಯ ಗ್ಯಾರಂಟಿ ಇಲ್ಲದಷ್ಟು ಕಟ್ಟಡ ಶಿಥಿಲವಾಗಿದೆ. ಕಿಟಕಿ, ಬಾಗಿಲು, ಗೋಡೆ, ಚಾವಣಿ ಎಲ್ಲವೂ ಶಿಥಿಲವಾಗಿ ಹಾನಿಗೊಂಡಿವೆ. ಇಂತಹ ಶಾಲೆಗಳಿಗೆ ಯಾವ ಪೋಷಕರು ತಾನೇ ತಮ್ಮ ಮಕ್ಕಳನ್ನು ಕಳಿಸಲು ಇಚ್ಛಿಸುತ್ತಾರೆ. ಕಟ್ಟಡದ ದುರಸ್ತಿ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮದಲ್ಲಿ ಪ್ರಯತ್ನ ನಡೆಯುತ್ತಲೇ ಇದೆ. ನಾವೂ ಪ್ರಯತ್ನ ಮಾಡಿದ್ದೇವೆ. ಇದುವರೆಗೂ ಕೈಗೂಡಿಲ್ಲ. ನಾವೆಲ್ಲರೂ ಓದಿರುವ ಶಾಲೆ ಬಡವರಿಗೆ ಆಸರೆಯಾಗಿ ಉಳಿಯಬೇಕು. ನಮ್ಮ ಶಾಲೆಗೆ ಯಾವಾಗ ಹೊಸ ರೂಪ ಸಿಗುತ್ತದೊ ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಶಾಲಾ ಮೇಲ್ವಿಚಾರಣೆ ಮತ್ತು ನಿರ್ವಹಣಾ ಸಮಿತಿ ಸದಸ್ಯ ನಾಗರಾಜು ಹೇಳಿದರು.

ಹೊಸ ಕಟ್ಟಡಕ್ಕೆ ಶೀಘ್ರ ಕ್ರಿಯಾಯೋಜನೆ: ಬಿಇಒ

‘ಶಾಲೆಯಲ್ಲಿ 2 ಕೊಠಡಿ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಮಂಜೂರಾಗಿತ್ತು. ಆದರೆ, ಹೊಸ ಕಟ್ಟಡ ನಿರ್ಮಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಕೊಠಡಿ ನಿರ್ಮಾಣ ಕೈ ಬಿಡಲಾಯಿತು. ಇದೀಗ, ಹೊಸ ಕಟ್ಟಡಕ್ಕೆ ಇಲಾಖೆಯಿಂದ ಅನುದಾನ ಬಂದಿದೆ. 3 ಕೊಠಡಿ, ಶೌಚಾಲಾಯ ಹಾಗೂ ಅಡುಗೆ ಮನೆಯನ್ನೊಳಗೊಂಡ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಕ್ರಿಯಾಯೋಜನೆ ರೂಪಿಸಲಾಗುವುದು’ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದ ಹಳೆಯದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ರೂಪ ಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು
ಗಂಗಾಧರ್, ಸ್ಥಳೀಯರು
ಶಿಥಿಲಾವಸ್ಥೆ ತಲುಪಿರುವ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ನಂಜುಂಡಿ, ಸ್ಥಳೀಯರುಗಂಗಾಧರ್, ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.