ಬಿಡದಿ: ಜಾಗತಿಕ ಮಟ್ಟದಲ್ಲಿ ನುರಿತ ತಂತ್ರಜ್ಞರ ಕೊರತೆ ಇದೆ. ಇದನ್ನು ಉತ್ತಮ ಅವಕಾಶವಾಗಿ ಪರಿಗಣಿಸಿ, ಕೌಶಲಭಿವೃದ್ಧಿ ಮತ್ತು ಶಿಕ್ಷಣ ನೀಡಿ ಜಾಗತಿಕ ಮಟ್ಟಕ್ಕೆ ಉತ್ತಮ ಕೆಲಸಗಾರರನ್ನು ತಯಾರು ಮಾಡುವ ನಿಟ್ಟಿನಲ್ಲಿ ಟಿಕೆಎಂ ಕೆಲಸ ನಿರ್ವಹಿಸುತ್ತಿದೆ ಎಂದು ಟೊಯೊಟ ಕಿರ್ಲೋಸ್ಕರ್ ಮೋಟಾರ್ ಘಟಕದ ಹಣಕಾಸು ಮತ್ತು ಆಡಳಿತ ನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ್ ತಿಳಿಸಿದರು.
ಶುಕ್ರವಾರ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಪುರುಷ ಅಭ್ಯರ್ಥಿಗಳಿಗೆ ಸೀಮಿತವಾಗಿದ್ದ ತರಬೇತಿ ಸೌಲಭ್ಯ ಇದೀಗ ಮಹಿಳಾ ಅಭ್ಯರ್ಥಿಗಳಿಗೂ ವಿಸ್ತಾರವಾಗಿದೆ. ಇಬ್ಬರಿಗೂ ಪ್ರತ್ಯೇಕ ವಸತಿ ವ್ಯವಸ್ಥೆ ಇರಲಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಉತ್ತಮ ಗುಣಮಟ್ಟದ ಕೈಗಾರಿಕಾ ಶಿಕ್ಷಣದ ಜತೆಗೆ ಉಚಿತ ಊಟ, ವಸತಿ, ಶಿಕ್ಷಣದೊಂದಿಗೆ ನೀಡಲಾಗುವುದು ಎಂದರು.
ರಾಜ್ಯದ ಪ್ರತಿ ಜಿಲ್ಲಾ ಕೇಂದ್ರ ಹಾಗೂ ಹಲವು ನಗರಗಳಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳೊಂದಿಗೆ ಕೈಜೋಡಿಸಿ ಆಧುನಿಕ ಕೈಗಾರಿಕೆಗೆ ಪೂರಕವಾದ ಪಠ್ಯಕ್ರಮ, ದೈಹಿಕ ಮತ್ತು ಮಾನಸಿಕ ಸಿದ್ಧತೆ ಹಾಗೂ ವ್ಯಕ್ತಿತ್ವ ವಿಕಸನದೊಂದಿಗೆ 64 ಕೇಂದ್ರಗಳಲ್ಲಿ ರಾಜ್ಯದಾದ್ಯಂತ ತರಬೇತಿ ನೀಡಲಾಗುತ್ತಿದೆ ಎಂದರು.
ಇಲ್ಲಿ ತರಬೇತಿ ಪಡೆದ ಸುಮಾರು 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ಬೇರೆ ಬೇರೆ ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಕಿಲ್ ಇಂಡಿಯಾ ಅಭಿಯಾನ ಮತ್ತಷ್ಟು ಬಲಪಡಿಸಿ ಯುವ ವಿದ್ಯಾರ್ಥಿಗಳನ್ನು ನುರಿತ ಕೆಲಸಗಾರರನ್ನಾಗಿ ಮಾಡಲು ಟಿಕೆಎಂ ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.