ರಾಮನಗರ: ಶಿಕ್ಷಕರ ಸಂಘದ ಕಾರ್ಯಕ್ರಮಕ್ಕೆ ಇಲ್ಲಿನ ವಿಜಯನಗರದ ಸರ್ಕಾರಿ ಶಾಲೆಯ ಅಕ್ಷರ ದಾಸೋಹ ಅಡುಗೆ ಮನೆಯ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಉಪಾಹಾರ ತಯಾರಿಸಿರುವ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವರದಿ ನೀಡಿದ್ದಾರೆ.
ರಾಮನಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವಿಜಯನಗರ ಶಾಲೆ ಮುಖ್ಯ ಶಿಕ್ಷಕ ವೀರಭದ್ರಯ್ಯ ಆಯ್ಕೆಯಾಗಿದ್ದಾರೆ. ಅವರ ಪದಗ್ರಹಣ ಸಮಾರಂಭವನ್ನು ಗುರುಭವನದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಶಾಲೆಯ ಅಡುಗೆ ಮನೆಯಲ್ಲಿ ಉಪ್ಪಿಟ್ಟು ಮತ್ತು ಕೇಸರಿಬಾತ್ ಉಪಾಹಾರ ತಯಾರಿಸಲಾಗುತ್ತಿತ್ತು.
ಸ್ಥಳಕ್ಕೆ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ರಾಜಶೇಖರ ಮತ್ತು ಸಹಾಯಕ ಅಧಿಕಾರಿ ಸಂತೋಷ್ ಭೇಟಿ ನೀಡಿದಾಗ, ನಿಯಮಬಾಹಿರವಾಗಿ ಅನ್ಯ ಉದ್ದೇಶಕ್ಕೆ ಅಡುಗೆ ಮನೆಯನ್ನು ಬಳಸಿಕೊಂಡಿರುವುದು ಕಂಡುಬಂತು. ಅಡುಗೆ ತಯಾರಿಸುತ್ತಿದ್ದ ಶಾಲೆಯ ಸಿಬ್ಬಂದಿ ಹಾಗೂ ಇತರರಿಂದ ಅಧಿಕಾರಿಗಳು ಮಾಹಿತಿ ಪಡೆದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜಶೇಖರ, ‘ಕಾರ್ಯಕ್ರಮಕ್ಕಾಗಿ ಹೊರಗಡೆಯಿಂದ ಸಾಮಾನು ತಂದು ಉಪ್ಪಿಟ್ಟು ಮತ್ತು ಕೇಸರಿ ಬಾತ್ ಸಿದ್ದಪಡಿಸಲಾಗುತ್ತಿತ್ತು ಎಂದು ಶಿಕ್ಷಕರು ಮತ್ತು ಸಿಬ್ಬಂದಿ ಹೇಳಿದ್ದಾರೆ. ನಾವು ಸಹ ರವೆ ಮತ್ತು ಶಾವಿಗೆ ವಿತರಿಸುವುದಿಲ್ಲ. ಆದರೆ, ಅಡುಗೆ ಮನೆ ಹಾಗೂ ಇತರ ಪರಿಕರಗಳನ್ನು ಬಳಸಿಕೊಂಡಿರುವುದು ಕಂಡುಬಂದಿದೆ’ ಎಂದರು.
‘ಸ್ಥಳ ಭೇಟಿ ವೇಳೆ ನಮ್ಮ ಗಮನಕ್ಕೆ ಬಂದಿದ್ದನ್ನು, ಶಿಕ್ಷಕರು ಹಾಗೂ ಸಿಬ್ಬಂದಿ ನೀಡಿರುವ ಹೇಳಿಕೆಯನ್ನು ಆಧರಿಸಿ ವರದಿ ತಯಾರಿಸಲಾಗುವುದು. ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಅವರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.
‘ಶಿಸ್ತು ಕ್ರಮಕ್ಕೆ ಶಿಫಾರಸು’
‘ಶಾಲೆಯ ಅಕ್ಷರ ದಾಸೋಹದ ಅಡುಗೆ ಕೊಠಡಿ ಇರುವುದು ವಿದ್ಯಾರ್ಥಿಗಳಿಗೆ ಮಾತ್ರ. ಅದನ್ನು ಅನ್ಯ ಕಾರ್ಯಕ್ರಮಕ್ಕೆ ಬಳಸಿದ್ದು ತಪ್ಪು. ವಿಜಯನಗರ ಶಾಲೆಯ ಅಡುಗೆ ಕೊಠಡಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅಡುಗೆ ಮನೆ ಬಳಸಿರುವುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನೀಡುವ ವರದಿ ಮೇರೆಗೆ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ದುರ್ಬಳಕೆಗೆ ಕಡಿವಾಣ ಅಗತ್ಯ’
‘ಸರ್ಕಾರಿ ಶಾಲೆಗಳ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಶಿಕ್ಷಕರಿಂದಾಗಿಯೇ ಶಾಲೆಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಶಿಕ್ಷಣ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಲಾವಧಿಯಲ್ಲೇ ಖಾಸಗಿ ಕಾರ್ಯಕ್ರಮದಲ್ಲಿ ಶಿಕ್ಷಕರು ಸೇರಿರುವುದು ತಪ್ಪು. ಹಾಗಾಗಿ ಅಡುಗೆ ಕೊಠಡಿ ದುರ್ಬಳಕೆ ಮಾಡಿಕೊಂಡವರ ಹಾಗೂ ಕರ್ತವ್ಯದ ಅವಧಿಯಲ್ಲಿ ಕಾರ್ಯಕ್ರಮಕ್ಕೆ ಬಂದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಜಿ. ಗಂಗವಾಡಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.