ADVERTISEMENT

ರಾಮನಗರ | ಶಿಥಿಲ ಶಾಲೆ- ದುರಸ್ತಿಗೆ ಒತ್ತು; ಹೊಸ ಕಟ್ಟಡಕ್ಕಿಲ್ಲ ಅಸ್ತು

ರಾಮನಗರ ತಾಲ್ಲೂಕು: 24 ಶಾಲಾ ಕಟ್ಟಡ ದುರಸ್ತಿಗೆ ಕೇವಲ ₹54.24 ಲಕ್ಷ!

ಓದೇಶ ಸಕಲೇಶಪುರ
Published 9 ಜುಲೈ 2024, 5:04 IST
Last Updated 9 ಜುಲೈ 2024, 5:04 IST
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ರಾಮನಗರ ತಾಲ್ಲೂಕಿನ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳ ಕುರಿತು ವಿಶೇಷ ವರದಿಯ ತುಣುಕು
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ರಾಮನಗರ ತಾಲ್ಲೂಕಿನ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳ ಕುರಿತು ವಿಶೇಷ ವರದಿಯ ತುಣುಕು   

ರಾಮನಗರ: ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲಾ ಕಟ್ಟಡಗಳ ಕಾರಣಕ್ಕಾಗಿಯೇ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಥಿಲವಾಗಿರುವ ಕಟ್ಟಡಗಳ ಪೈಕಿ ಕೆಲವು ದುರಸ್ತಿಗೆ ಅರ್ಹವಾಗಿದ್ದರೆ, ಇನ್ನುಳಿದವುಗಳು ಶಾಲೆ ನಡೆಸಲು ಸುರಕ್ಷಿತವಾಗಿಲ್ಲ. ಅಂತಹ ಕಟ್ಟಡಗಳನ್ನು ಅಥವಾ ಕೊಠಡಿಗಳನ್ನು ಕೆಡವಿ ಆದ್ಯತೆ ಮೇರೆಗೆ ಹೊಸದಾಗಿ ನಿರ್ಮಿಸಬೇಕಿದೆ.

ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿರುವ ಇಂತಹ ಶಿಥಿಲ ಶಾಲಾ ಕಟ್ಟಡಗಳ ವಿಷಯದಲ್ಲಿ ಶಿಕ್ಷಣ ಇಲಾಖೆಯ ಕಣ್ಣು ಮಂಜಾಗಿದೆ. ಹೌದು, ಇಲಾಖೆಯು ರಾಮನಗರ ತಾಲ್ಲೂಕಿನಲ್ಲಿರುವ ಶಿಥಿಲ ಕಟ್ಟಡಗಳಿಗೆ ಮುಕ್ತಿ ಕೊಡಲು ತಯಾರಿಸಿರುವ ಕ್ರಿಯಾಯೋಜನೆ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಹಳೆ ಶಾಲೆಗಳ ದುರಸ್ತಿಗಷ್ಟೇ ಒತ್ತು ನೀಡಲಾಗಿದೆ. ಆದರೆ, ಹೊಸ ಕಟ್ಟಡ ಅಥವಾ ಕೊಠಡಿಗೆ ಆದ್ಯತೆ ಕೊಟ್ಟಿಲ್ಲ.

ದುರಸ್ತಿಗೆ ₹54.24 ಲಕ್ಷ: ‘ರಾಮನಗರ ಬ್ಲಾಕ್‌ ವ್ಯಾಪ್ತಿಯಲ್ಲಿರುವ ಶಾಲೆಗಳ ಪೈಕಿ, ಸುಮಾರು 24 ಶಾಲೆಗಳನ್ನು ದುರಸ್ತಿಗೆ ಗುರುತಿಸಲಾಗಿದೆ. ಶಾಲೆಗಳಿಗೆ ಭೇಟಿ ನೀಡಿ 2023–24ನೇ ಸಾಲಿನಲ್ಲಿ ಅವುಗಳ ದುರಸ್ತಿಗೆ ಒಟ್ಟು ₹54.24 ಲಕ್ಷ ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದೆ’ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶಾಲಾ ಕಟ್ಟಡದ ಕಾಂಕ್ರೀಟ್ ಕಿತ್ತು ಹೋಗಿರುವುದು, ಮುರಿದಿರುವ ಕಿಟಕಿ–ಬಾಗಿಲು ರಿಪೇರಿ, ಪೇಂಟಿಂಗ್, ಹಾನಿಗೊಂಡ ಗೋಡೆ ಸರಿಪಡಿಸಿರುವುದು, ಹೆಂಚು ಬಿದ್ದು ಚಾವಣಿಯಿಂದ ನೀರು ಸೋರುತ್ತಿದ್ದರೆ ದುರಸ್ತಿ ಅಥವಾ ಆರ್‌ಸಿಸಿಗೆ ಪ್ಲಾಸ್ಟರಿಂಗ್ ಮಾಡುವುದು, ಸಿಮೆಂಟ್ ನೆಲ ಅಥವಾ ಟೈಲ್ಸ್ ಕಿತ್ತು ಹೋಗಿದ್ದರೆ ಸರಿಪಡಿಸುವುದು ಸೇರಿದಂತೆ ವಿವಿಧ ರೀತಿಯ ದುರಸ್ತಿ ಕಾರ್ಯಕ್ಕೆ ಅನುಗುಣವಾಗಿ ಪ್ರತಿ ಶಾಲೆಗೆ ಇಂತಿಷ್ಟು ಲಕ್ಷ ಮೊತ್ತವನ್ನು ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

‘ಅತ್ಯಂತ ಹಳೆಯದಾಗಿರುವ ಶಿಥಿಲ ಹೊಸ ಕಟ್ಟಡಗಳನ್ನು ಕೆಲವೆಡೆ ಈಗಾಗಲೇ ಕೆಡವಲಾಗಿದೆ. ಇನ್ನೂ ಕೆಲವನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕಿದೆ. ಈ ಕುರಿತು ಮತ್ತೊಂದು ಕ್ರಿಯಾಯೋಜನೆ ತಯಾರಿಸಿ ಕಳಿಸಲಾಗಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಸೇರಿದಂತೆ ಇಲಾಖೆಯ ಅನುದಾನದಲ್ಲೂ ಕಟ್ಟಡ ನಿರ್ಮಿಸುವ ಆಲೋಚನೆ ಇದೆ’ ಎಂದು ತಿಳಿಸಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ರಾಮನಗರ ತಾಲ್ಲೂಕಿನ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳ ಕುರಿತು ವಿಶೇಷ ವರದಿಯ ತುಣುಕುಗಳು 
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ರಾಮನಗರ ತಾಲ್ಲೂಕಿನ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳ ಕುರಿತು ವಿಶೇಷ ವರದಿಯ ತುಣುಕು
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
ಉಮೇಶ್ ಜಿ. ಗಂಗವಾಡಿ ಅಧ್ಯಕ್ಷ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ

ರಾಮನಗರ ತಾಲ್ಲೂಕು ಕ್ರಿಯಯೋಜನೆ ವಿವರ

ತಾಲ್ಲೂಕಿನ ಹಳೆಯ ಮತ್ತು ಶಿಥಿಲ ಶಾಲಾ ಕಟ್ಟಡಗಳ ದುರಸ್ತಿಗೆ ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಕಳಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ದುರಸ್ತಿ ಕೆಲಸ ಆರಂಭಿಸಲಾಗುವುದು
– ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
‘ಶಾಲೆ ಮುಚ್ಚುವ ಹುನ್ನಾರ’
‘ರಾಮನಗರ ತಾಲ್ಲೂಕಿನಲ್ಲಿ ಸುಮಾರು ಕನಿಷ್ಠ 30 ವರ್ಷದಿಂದ ಸುಮಾರು 50 ವರ್ಷ ಮೀರಿದ ಹಳೆಯ ಶಾಲಾ ಕಟ್ಟಡಗಳಿವೆ. ವರ್ಷಗಳಿಂದ ಸೋರುತ್ತಿರುವ ಗೋಡೆಗಳು ಬಿರುಕಾಗಿರುವ ನೆಲ ಹದಗೆಟ್ಟಿರುವ ವರ್ಷಗಳಿಂದ ಬಣ್ಣ ಕಾಣದ ಶಾಲೆಗಳನ್ನು ಬೇಕೆಂದೇ ದುರಸ್ತಿ ಮಾಡದೆ ಕಡೆಗಣಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿರುವ ಈ ಶಾಲೆಗಳನ್ನು ಮುಂದೊಂದು ದಿನ ವಿದ್ಯಾರ್ಥಿಗಳಿಲ್ಲ ಎಂಬ ನೆಪವೊಡ್ಡಿ ಮುಚ್ಚುವ ಹುನ್ನಾರವನ್ನು ಶಿಕ್ಷಣ ಇಲಾಖೆಯೇ ಮಾಡುತ್ತಿದೆ. ಶಾಲೆಗಳ ದಾಖಲಾತಿ ಕುಸಿತಕ್ಕೆ ಕಾರಣವಾಗಿರುವ ಕಟ್ಟಡ ಸಮಸ್ಯೆ ಮೂಲಸೌಕರ್ಯ ಶಿಕ್ಷಕರ ಕೊರತೆಯನ್ನು ಪರಿಹರಿಸಿದರೆ ಈ ಶಾಲೆಗಳು ಕ್ರಮೇಣ ವಿದ್ಯಾರ್ಥಿಗಳನ್ನು ಸೆಳೆಯಲಿವೆ. ಇಲಾಖೆ ಈ ಕುರಿತು ಗಮನ ಹರಿಸಬೇಕಿದೆ’ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಜಿ. ಗಂಗವಾಡಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.