ಚನ್ನಪಟ್ಟಣ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.
ತಾಲ್ಲೂಕಿನ ಸಂತೆ ಮೊಗೇನಹಳ್ಳಿ, ಮಳೂರು ಪಟ್ಟಣ, ಚಕ್ಕೆರೆ ಹಾಗೂ ಮತ್ತೀಕೆರೆ ಭಾಗಗಳಲ್ಲಿ ಶನಿವಾರ ನಿಖಿಲ್ ಕುಮಾರಸ್ವಾಮಿ ಪರ ಸತತ ಐದನೇ ದಿನ ಪ್ರಚಾರ ನಡೆಸಿ ಮಾತನಾಡಿದರು. ಈ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಎಲ್ಲ ರೀತಿಯಲ್ಲಿಯೂ ಜನರನ್ನು ಶೋಷಣೆ ಮಾಡುತ್ತಿದೆ. ಇಂತಹ ಸರ್ಕಾರ ಇರಬಾರದು. ಇದ್ದರೆ ಜನರಿಗೆ ಒಳ್ಳೆಯದಾಗುವುದಿಲ್ಲ ಎಂದು ಗುಡುಗಿದರು.
ಕಾಂಗ್ರೆಸ್‌ನಿಂದ ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಸಾಧ್ಯವಿಲ್ಲ. ನಿಖಿಲ್ ಕುಮಾರಸ್ವಾಮಿ ಗೆದ್ದರೆ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹೋರಾಟ ನಡೆಸಿ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳು ಜನರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿವೆ. ಇವುಗಳನ್ನು ಬಹಳ ಕಾಲ ನಿಭಾಯಿಸಲು ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಅಗ್ಗದ ಭರವಸೆ ಕೊಟ್ಟು ಜನರ ಭಾವನೆ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ದುರ್ಬಲ ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬಲಪಡಿಸಬೇಕು ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಿಜೆಪಿ ಮತ್ತು ಜೆಡಿಎಸ್ ಹಿರಿಯ ಮುಖಂಡರು ಭಾಗವಹಿಸಿದ್ದರು.
ಚಕ್ಕೆರೆ ಗ್ರಾಮದಲ್ಲಿ ನಡೆದ ಪ್ರಚಾರ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ನಿಖಿಲ್ ಭಾಗವಹಿಸಿದ್ದರು. ಗ್ರಾಮದಲ್ಲಿ ಬೃಹತ್ ಹಣ್ಣಿನ ಹಾರ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಮಹಾರಾಜರ ವಂಶಸ್ಥರಾ: ಶಾಲೆಗೆ 25 ಎಕರೆ ದಾನ ನೀಡೀದ್ದೇನೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅಷ್ಟು ಜಮೀನು ದಾನ ಮಾಡಲು ಅವರೇನು ಮಹಾರಾಜರ ವಂಶಸ್ಥರಾ? ಎಂದು ಲೇವಡಿ ಮಾಡಿದರು.
ತಾಲ್ಲೂಕಿನ ಮುಕುಂದ ಗ್ರಾಮದಲ್ಲಿ ಶನಿವಾರ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಲ್ಲಿ ಜಮೀನು ಕೊಟ್ಟಿದ್ದಾರೆ? 25ಎಕರೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ. ನಾನೂ ಸಂತೋಷ ಪಡುತ್ತೇನೆ. ಸುಳ್ಳು ಹೇಳಲು ಇತಿಮಿತಿ ಇರಬೇಕು’ ಎಂದು ಟೀಕಿಸಿದರು.
‘ನಾನು ಮುಖ್ಯಮಂತ್ರಿಯಾಗುವ ಮೊದಲು ಎಷ್ಟು ಕಾಲೇಜು, ಪ್ರೌಢಶಾಲೆ ಇದ್ದವು? ನನ್ನ 20 ತಿಂಗಳ ಆಡಳಿತದಲ್ಲಿ ಎಷ್ಟಾದವು ಎಂಬುದಕ್ಕೆ ದಾಖಲೆಗಳೇ ಮಾಹಿತಿ ಕೊಡುತ್ತವೆ. ಯಾರಾದರೂ ತೆಗೆದು ನೋಡಬಹುದು. ಶಿಕ್ಷಣ ಕ್ಷೇತ್ರಕ್ಕೆ ಆ ವ್ಯಕ್ತಿ ಕೊಡುಗೆ ಏನು? ಸಾತನೂರು, ಕನಕಪುರ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಏನು ಮಾಡಿದ್ದಾರೆ. ಪಟ್ಟಿ ಮಾಡಲಿ. ಅವರ ತವರೂರು ದೊಡ್ಡಾಲಹಳ್ಳಿಯಲ್ಲಿ ಮತಗಳ ಲೀಡ್ ಬರುತ್ತಿಲ್ಲ ಯಾಕೆ? ಇವರು 25 ಎಕರೆ ಕೊಟ್ಟಿದ್ದಾರೋ ಅಥವಾ 25 ಗುಂಟೆ ಕೊಟ್ಟಿದ್ದಾರೋ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.
‘ಮೇಕೆದಾಟು ಯೋಜನೆಗೆ ಮೊದಲು ಅವರ ಮಿತ್ರಪಕ್ಷ ಡಿಎಂಕೆಯನ್ನು ಒಪ್ಪಿಸಲಿ. ಕೇಂದ್ರ ಸರ್ಕಾರ ಒಪ್ಪಿಸುವ ಭಾರ ನಮ್ಮದು. ಅವರ ಮಿತ್ರಪಕ್ಷ ಕ್ಯಾತೆ ತೆಗೆದುಕೊಂಡು ಕೂತಿದೆಯಲ್ಲ. ಅದರ ಬಗ್ಗೆ ಅವರು ಮೊದಲು ಬಾಯಿ ತೆರೆಯಲಿ’ ಎಂದರು.
ತಾಲ್ಲೂಕಿನ ಹುಲುವಾಡಿ, ಆಣಿಗೆರೆ, ಎಚ್.ಬ್ಯಾಡರಹಳ್ಳಿ, ತೌಟನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು, ಹೊನ್ನಾಯಕನಹಳ್ಳಿ, ಅರಳಾಪುರ, ಮೊಮ್ಮನಾಯನಹಳ್ಳಿ, ಬೇವೂರು ಮಂಡ್ಯ, ಗೌಡಗೆರೆ, ಕದರಮಂಗಲ, ಮಾಗನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಮಾರಸ್ವಾಮಿ ಬಿರುಸಿನ ಪ್ರಚಾರ ನಡೆಸಿದರು.
ಅಮ್ಮಳ್ಳಿದೊಡ್ಡಿ, ಬಿ.ವಿ.ಹಳ್ಳಿ, ದ್ಯಾವಪಟ್ಟಣ, ಅರಳಾಳುಸಂದ್ರ, ಚಕ್ಕೆರೆ, ನಗರದ ಬಸವನಗುಡಿ ಸರ್ಕಲ್, ಕೆಲವು ಮುಸ್ಲಿಂ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದರು. ಚಕ್ಕೆರೆ ಗ್ರಾಮದಲ್ಲಿ ನಿಖಿಲ್ ಅವರಿಗೆ ರೈತರು ಕೊಡುಗೆಯಾಗಿ ನೇಗಿಲು ನೀಡಿದರು.
ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಎರಡೂ ಪಕ್ಷಗಳ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ಯಾವುದೇ ನಾಯಕ ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದೇ?ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಇತಿಹಾಸ ಮರೆಮಾಚಲು ಸಾಧ್ಯವಿಲ್ಲ
ಸಿ.ಪಿ.ಯೋಗೇಶ್ವರ್ ಆರು ವರ್ಷದ ಮೇಲೆ ಒಂದು ಪಕ್ಷದಲ್ಲಿ ಇರಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಬಿಜೆಪಿಗೆ ಮೋಸ ಮಾಡಿ ಹೋದ ವ್ಯಕ್ತಿ ನಿಮ್ಮ ಸೇವೆ ಮಾಡುತ್ತಾರಾ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕಿನ ಕನ್ನಿದೊಡ್ಡಿಯಲ್ಲಿ ಶನಿವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಡಿ.ಕೆ.ಸುರೇಶ್ ಅವರು ಮೂರು ಬಾರಿ ಸಂಸದರಾಗಿದ್ದರು. ಚನ್ನಪಟ್ಟಣಕ್ಕೆ ಅವರ ಕೊಡುಗೆ ಏನು ? ಇಷ್ಟು ದಿನ ಚನ್ನಪಟ್ಟಣ ತಾಲ್ಲೂಕು ಇದೆ ಎಂಬುದೇ ಕಾಂಗ್ರೆಸ್‌ಗೆ ಗೊತ್ತಿರಲಿಲ್ಲ. ಈಗ ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಏಕೆ ಇದೆಲ್ಲ ಮಾಡಲಿಲ್ಲ. ತೆರವಾದ ಮೇಲೆ ಚನ್ನಪಟ್ಟಣ ನೆನಪಾಯಿತೆ ಎಂದು ವಾಗ್ದಾಳಿ ನಡೆಸಿದರು. ಇಗ್ಗಲೂರು ಬ್ಯಾರೇಜ್ ಗೂ ದೇವೇಗೌಡರಿಗೂ ಏನು ಸಂಬಂಧ ಇಲ್ಲ ಅಂತಾರೆ. ಇಗ್ಗಲೂರು ಬ್ಯಾರೇಜ್ ಸ್ಥಳ ಪರಿಶೀಲನೆ ಪೋಟೊ ಬಿಡುಗಡೆಯಾಗಿದೆ. ಇತಿಹಾಸವನ್ನು ಯಾರು ಮರೆಮಾಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.