ADVERTISEMENT

ರಾಮನಗರದಲ್ಲಿ ಬೆಂಗಳೂರಿನ ಕಸ ವಿಲೇವಾರಿ?

100 ಎಕರೆ ಸರ್ಕಾರಿ ಜಾಗ ಹುಡುಕಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 21:08 IST
Last Updated 14 ಅಕ್ಟೋಬರ್ 2023, 21:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಮನಗರ: ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರ್ಕಾರ, ಅಲ್ಲಿ ನಿತ್ಯ ಉತ್ಪತ್ತಿಯಾಗುವ ಟನ್‌ಗಟ್ಟಲೆ ಕಸವನ್ನು ಹೊರಗಿನ ಜಿಲ್ಲೆಗಳಲ್ಲಿ ವಿಲೇವಾರಿ ಮಾಡಲು ಚಿಂತನೆ ನಡೆಸಿದೆ. ಅದಕ್ಕಾಗಿ, ರಾಮನಗರ ಜಿಲ್ಲೆಯಲ್ಲಿ 100 ಎಕರೆ ಜಾಗವನ್ನು ಗುರುತಿಸಲು ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯೊಂದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಕಸ ವಿಲೇವಾರಿ ಘಟಕಗಳನ್ನು ಹೊರವಲಯದ ನಾಲ್ಕು ದಿಕ್ಕುಗಳಿಗೆ ಸ್ಥಳಾಂತರಿಸುವ ಯೋಜನೆ ಇದೆ. ಅದರಲ್ಲೂ ಕಲ್ಲು –ಬಂಡೆಗಳು ಇರುವ ಕಡೆ ವಿಲೇವಾರಿ ಮಾಡುವುದರಿಂದ ಕಸ ದುರ್ವಾಸನೆ ಬೀರುವುದು ತಪ್ಪುತ್ತದೆ ಎಂದಿದ್ದರು.

ADVERTISEMENT

ಅದರ ಬೆನ್ನಲ್ಲೇ, ರಾಜಧಾನಿಗೆ 32 ಕಿ.ಮೀ. ದೂರವಿರುವ ರಾಮನಗರ ಜಿಲ್ಲೆಯ ಬಿಡದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗ ಗುರುತಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಇದರ ಜೊತೆಗೆ, ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದಲ್ಲೂ ಹುಡುಕಾಟ ನಡೆದಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ‘ಈ ಕುರಿತು ಅಧಿಕೃತವಾಗಿ ಯಾವುದೇ ಸೂಚನೆ ನಮಗೆ ಬಂದಿಲ್ಲ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.