ADVERTISEMENT

ಕನಕಪುರ | ಉತ್ತಮ ದಾಖಲಾತಿ; ಕಲಿಕೆಗಿಲ್ಲ ಸೂಕ್ತ ಕೊಠಡಿ

ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ

ಬರಡನಹಳ್ಳಿ ಕೃಷ್ಣಮೂರ್ತಿ
Published 29 ಜೂನ್ 2024, 5:12 IST
Last Updated 29 ಜೂನ್ 2024, 5:12 IST
   

ಕನಕಪುರ: ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳು ಉತ್ತಮವಾಗಿದ್ದರೂ ಮಕ್ಕಳ ಕೊರತೆಯಿಂದ ಶಾಲೆ ಮುಚ್ಚಲಾಗುತ್ತಿದೆ. ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ಮಕ್ಕಳ ಹಾಜರಾತಿ ಇದ್ದರೂ ಶಾಲೆ ಕೊಠಡಿಗಳು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳು ಭಯದಲ್ಲೇ ಪಾಠ ಕೇಳಬೇಕಾಗಿದೆ.

ನಾರಾಯಣಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ ಇದು. ಮಕ್ಕಳು ಕೊಠಡಿ ಕೊರತೆ ಜತೆಗೆ ಬೀಳುವ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಬೇಕಿದೆ. ಈ ಶಾಲೆಯು 1965ರಲ್ಲಿ 1ನೇ ತರಗತಿ ಸಣ್ಣ ಕೊಠಡಿಯಲ್ಲಿ ಪ್ರಾರಂಭವಾಯಿತು. 7ನೇ ತರಗತಿವರೆಗೂ ಇದೆ. ಎರಡು ಹೆಂಚಿನ ಮನೆ, ಎರಡು ಆರ್‌ಸಿಸಿ ಕಟ್ಟಡವಿದೆ. ನಾರಾಯಣಪುರ ಕ್ಲಸ್ಟರ್ ಕೇಂದ್ರವಾಗಿರುವುದರಿಂದ ಇಲ್ಲಿ ಸಿಆರ್‌ಪಿ ಕೇಂದ್ರ ‌ಇದೆ.

ನಾರಾಯಣಪುರ, ಮುನೇಶ್ವರನದೊಡ್ಡಿ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಳ್ಳಿ,, ಅರಗಾಡು, ಕಲ್ಕೆರೆದೊಡ್ಡಿ, ಕುಂಬಾಡಿದೊಡ್ಡಿ, ಡಾಕ್ಟರ್ ದೊಡ್ಡಿ ಗ್ರಾಮಗಳಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರುತ್ತಾರೆ.

ADVERTISEMENT

ಪ್ರೌಢಶಾಲೆಗೆ 8 ಕಿಲೋಮೀಟರ್ ಕನಕಪುರ, ಇಲ್ಲವೇ 8.ಕಿಮೀ ಕೋಡಿಹಳ್ಳಿಗೆ ಹೋಗಬೇಕಿದೆ. ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಳ್ಳಿ, ಅರಗಾಡು, ಮುನೇಶ್ವರನದೊಡ್ಡಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಾಗಿವೆ. ಬೇರೆ ಕಡೆ ರಸ್ತೆ ಸಂಪರ್ಕವಿಲ್ಲ. ನಾರಾಯಣಪುರಕ್ಕೆ ಮಾತ್ರ ರಸ್ತೆ ಸಂಪರ್ಕವಿದೆ. ಇಲ್ಲಿ ಓದುವವರು ಅರಣ್ಯ ವಾಸಿಗಳು ಮತ್ತು ಕೂಲಿ ಕಾರ್ಮಿಕರ ಮಕ್ಕಳು.

ಈಗಿರುವ ಹಿರಿಯ ಪ್ರಾಥಮಿಕ ಶಾಲೆ ಜತೆಗೆ ಪ್ರೌಢಶಾಲೆ ಇಲ್ಲಿ ಪ್ರಾರಂಭಿಸಿದರೆ ಸುತ್ತಮುತ್ತಲ 6 ಕಿ.ಮೀವರೆಗಿನ ಗ್ರಾಮಗಳ ಮಕ್ಕಳಿಗೆ ಅನುಕೂಲ ಆಗಲಿದೆ. ಖಾಸಗಿ ಶಾಲೆಗಳ ಭರಾಟೆಯಲ್ಲೂ ನಾರಾಯಣಪುರ ಸರ್ಕಾರಿ ಶಾಲೆಯು ಹೆಚ್ಚಿನ ಹಾಜರಾತಿಯೊಂದಿಗೆ ನಡೆಯುತ್ತಿದೆ.

ಇಲ್ಲಿನ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ. ಶಿಕ್ಷಕರು ಕಾಳಜಿಯಿಂದ ದಾನಿಗಳ ನೆರವು ಪಡೆದು ಪ್ರತಿವರ್ಷ ಶಾಲೆಗೆ ಬಣ್ಣ ಮಾಡಿಸುವುದರಿಂದ ಸದ್ಯದ ಮಟ್ಟಿಗೆ ಶಾಲೆ ಹೊರಗಡೆಯಿಂದ ನೋಡಲು ಸುಂದರವಾಗಿದೆ. ಆದರೆ, ಒಳಗಡೆ ಶಾಲೆ ಕಟ್ಟಡ ಪೂರ್ಣ ಹಾಳಾಗಿದೆ.

 ಶಿಕ್ಷಣ ಇಲಾಖೆ ಗಮನಹರಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ಪೋಷಕರು ಮತ್ತು ಗ್ರಾಮಸ್ಥರ ಒತ್ತಾಯವಾಗಿದೆ.

ಹೊಸದಾಗಿ ನಿರ್ಮಿಸಿಕೊಡಿ

ಈ ಶಾಲೆಯಲ್ಲಿ ಶಿಕ್ಷಕರು ಕಾಳಜಿಯಿಂದ ಶಿಕ್ಷಣ ಕೊಡುವುದರಿಂದ ಸುತ್ತಮುತ್ತಲ ಹಳ್ಳಿಗಳಿಂದ ಇಲ್ಲಿಗೆ ಮಕ್ಕಳು ಬರುತ್ತಿದ್ದಾರೆ. ಬಡವರು ಮತ್ತು ಅರಣ್ಯ ವಾಸಿಗಳ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯನ್ನು ಬಿಟ್ಟರೆ ಅವರಿಗೆ ಬೇರೆ ಶಾಲೆ ಇಲ್ಲ. ಸರ್ಕಾರ ನಮ್ಮೂರಿನ ಹಿರಿಯ ಪ್ರಾಥಮಿಕ ಶಾಲೆಯನ್ನು ಹೊಸದಾಗಿ ನಿರ್ಮಿಸಿ ಕೊಡಬೇಕು.

ಮುನಿರಾಜು, ಹಿರಿಯ ವಿದ್ಯಾರ್ಥಿ ನಾರಾಯಣಪುರ

ಕೊರಡಿ ಕೊರತೆ

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 40 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಳೆಯದಾದ 2 ಹೆಂಚಿನ ಮನೆ, 2 ಆರ್‌ಸಿಸಿ ಕಟ್ಟಡವಿದೆ. ಕೊಠಡಿ ಕೊರತೆಯಿಂದ ಸಿಆರ್‌ಪಿ ಕಟ್ಟಡದಲ್ಲಿ ತರಗತಿ  ನಡೆಸಲಾಗುತ್ತದೆ.  ಸಿಆರ್‌ಪಿ ಕಟ್ಟಡ ಶಿಥಿಲವಾಗಿದೆ. ಕೊಠಡಿಗಳಿಲ್ಲದೆ ಶಿಥಿಲಗೊಂಡಿರುವ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.

ಸಿದ್ದರಾಜು ಎಸ್‌ಡಿಎಂಸಿ ಅಧ್ಯಕ್ಷ, ನಾರಾಯಣಪುರ

ಉತ್ತಮ ದಾಖಲಾತಿ

ಚಾವಣಿ ಹೆಂಚುಗಳು ಹಾಳಾಗಿವೆ. ಸುತ್ತಲ 6ಕಿಲೋ ಮೀಟ
ರ್‌ ದೂರದ ಗ್ರಾಮಗಳಿಂದ ಇಲ್ಲಿಗೆ ಮಕ್ಕಳು ಬರುತ್ತಿದ್ದು ದಾಖಲಾತಿ ಉತ್ತಮವಾಗಿದೆ. ಕೊಠಡಿ ಹಾಳಾಗಿರುವ ಬಗ್ಗೆ ಪೋಷಕರು ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಬಿಇಒ ಗಮನಕ್ಕೆ ತಂದು, ಶಿಥಿಲಗೊಂಡ ಕೊಠಡಿ ಬಗ್ಗೆ ವರದಿ ಸಲ್ಲಿಸಲಾಗಿದೆ.

ಹೊನ್ನಗಂಗಪ್ಪ, ಪ್ರಭಾರ ಸಿಆರ್‌ಪಿ

ಸಿಸಿಟಿವಿ ಕ್ಯಾಮೆರಾ ಅಳವಡಿಸಿ

ಕೊಠಡಿ ಮತ್ತು ಚಾವಣಿ ಹಾಳಾಗಿದೆ. ಹೊಸದಾಗಿ ನಿರ್ಮಾಣ ಮಾಡಲು ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಲಾಗಿದೆ. ಇತ್ತೀಚೆಗೆ ಶಾಲೆಯಲ್ಲಿ ಕಳ್ಳತನವಾಗಿದ್ದು ಅಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ.

ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರು, ನಾರಾಯಣಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.