ರಾಮನಗರ: ನಗರದಲ್ಲಿ ಶನಿವಾರ ಮತ್ತು ಭಾನುವಾರ ಗಣೇಶೊತ್ಸವ ಸಂಭ್ರಮ ಮನೆ ಮಾಡಿತ್ತು. ಬೀದಿಗಳು ಮತ್ತು ಬಡಾವಣೆಗಳಲ್ಲಿ ವಿವಿಧ ಗಣೇಶ ಮಂಡಳಗಳು, ಸಮಿತಿಗಳು, ಯುವಕರ ಸಂಘಗಳು, ಸ್ಥಳೀಯ ಕ್ಷೇಮಾವೃದ್ಧಿ ಸಂಘದವರು ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಗಣೇಶ ಮೂರ್ತಿಗಳು ಗಮನ ಸೆಳೆದವು.
ಗಣೇಶೋತ್ಸವ ಪ್ರಯುಕ್ತ ನಗರದಲ್ಲಿರುವ ಗಣಪತಿ ದೇವಸ್ಥಾನಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡವು. ಗಜಮುಖನಿಗೆ ಮಹಾ ಸಂಕಲ್ಪ ಪೂಜೆ, ಗಂಗಾಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾ ನೈವೇದ್ಯ, ಮಹಾಮಂಗಳಾರತಿ, ಕುಂಕುಮಾರ್ಚನೆ ಮುಂತಾದ ಸೇವೆ ನೆರವೇರಿಸಲಾಯಿತು.
ಭಕ್ತರಿಂದ ದರ್ಶನ: ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತರ ದಂಡು ಜೋರಾಗಿತ್ತು. ಸಾರ್ವಜನಿಕರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಸಂಜೆ ಸೂರ್ಯ ಮರೆಯಾಗುತ್ತಿದ್ದಂತೆ ನಗರದ ಹಲವು ರಸ್ತೆಗಳಲ್ಲಿ ಗಣೇಶ ಮೂರ್ತಿಗಳು ಮೆರಗು ಕಂಡುಬಂತು. ಯುವಜನರು ವಾಹನಗಳಲ್ಲಿ ಗಣೇಶ ಮೂರ್ತಿಯನ್ನು ತಮ್ಮ ಊರು, ಬೀದಿ, ಬಡಾವಣೆಗೆ ಮೆರವಣಿಗೆಯಲ್ಲಿ ಜಯಘೋಷ ಹಾಕುತ್ತಾ ಕೊಂಡೊಯ್ದರು.
ಸಂಜೆ ಪೂಜಾ ವಿಧಾನಗಳಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಭಕ್ತರು ಗಣಪನಿಗೆ ಹಣ್ಣು–ಕಾಯಿ ಹಾಗೂ ಸಿಹಿ ತಂದು ಅರ್ಪಿಸಿ ಪೂಜೆ ಸಲ್ಲಿಸಿದರು. ಪ್ರತಿಷ್ಠಾಪನಾ ಸಮಿತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿ ಗಣಪನನ್ನು ಕೊಂಡಾಡು ಹಾಡುಗಳು ಬೆಳಿಗ್ಗೆಯಿಂದ ರಾತ್ರಿವರೆಗೆ ಮೈಕ್‌ಗಳಲ್ಲಿ ಅನುರಣಿಸಿದವು. ಸಂಜೆ ಪೂಜೆ ಜರುಗುತ್ತಿದ್ದಂತೆ ಪಟಾಕಿ ಹಾಗೂ ಸುಡುಮದ್ದು ಸದ್ದು ಕೇಳಿ ಬಂತು.
ಅರ್ಕಾವತಿ ಬಡಾವಣೆ, ಕಾಯಿಸೊಪ್ಪಿನ ಬೀದಿ, ಚಾಮುಂಡೇಶ್ವರಿ ಬಡಾವಣೆ, ಮುಖ್ಯರಸ್ತೆ, ಐಜೂರು, ಭುವನೇಶ್ವರಿ ನಗರ, ಮಲ್ಲೇಶ್ವರ, ವಿನಾಯಕ ನಗರ, ವಿವೇಕಾನಂದ ನಗರ, ರಾಯರದೊಡ್ಡಿ, ಕೆಂಪೇಗೌಡನದೊಡ್ಡಿ, ಗಾಂಧಿನಗರ ಸೇರಿದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಭಕ್ತರ ಗಮನ ಸೆಳೆದರು.
ವಿಸರ್ಜನೆ: ಕೆಲವರು ಸಂಜೆಯೇ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು. ಹೆಗಲಲ್ಲಿ ಕೇಸರಿ ಶಾಲು ತೊಟ್ಟು, ಗಣೇಶನಿಗೆ ಜೈಕಾರ ಕೂಗುತ್ತಾ ಗಣಪತಿ ಮೂರ್ತಿಯನ್ನು ನಗರದ ಹೊರವಲಯದ ರಂಗರಾಯನದೊಡ್ಡಿ ಕೆರೆ ಬಳಿಯ ಗೌರಿ ಕಲ್ಯಾಣಿಗೆ ಮೆರವಣಿಗೆಯಲ್ಲಿ ತಮಟೆ ನಾದ ಹಾಗೂ ಮೈಕ್ ಹಾಡುಗಳಿಗೆ ಭಕ್ತರು ಕುಣಿಯುವ ದೃಶ್ಯಗಳು ಕಂಡುಬಂದವು. ನಂತರ, ಭಕ್ತಿಯಿಂದ ವಿಘ್ನ ನಿವಾರಕನನ್ನು ವಿಸರ್ಜಿಸಿ ನಮಿಸಿದರು.
ಗೌರಿ–ಗಣೇಶ ಮೂರ್ತಿಗಳನ್ನು ಪರಿಸರಕ್ಕೆ ಹಾನಿ ಉಂಟಾಗದ ರೀತಿಯಲ್ಲಿ ವಿಸರ್ಜಿಸಲು ನಗರಸಭೆ ವತಿಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು. ಮನೆಗಳಲ್ಲಿ ಪೂಜಿಸಿದ ಮೂರ್ತಿಯನ್ನು ಭಕ್ತರು ಸಂಜೆ ಟ್ಯಾಂಕರ್‌ನಲ್ಲಿ ವಿಸರ್ಜನೆ ಮಾಡಿದರು.
ಗಣ್ಯರಿಂದ ದರ್ಶನ
ನಗರಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ವಿವಿಧೆಡೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ದರ್ಶನ ಪಡೆದರು.
ಮುಖ್ಯರಸ್ತೆಯಲ್ಲಿರುವ ದೊಡ್ಡ ಗಣೇಶ ಮೂರ್ತಿ ಛತ್ರದ ಬೀದಿಯಲ್ಲಿ ಅರ್ಕಾವತಿ ವಿದ್ಯಾ ಗಣಪತಿ ಯುವ ಸೇವಾ ಸಂಘ ಪ್ರತಿಷ್ಠಾಪಿರುವ ಗಣೇಶ ಮೂರ್ತಿ ಸೇರಿದಂತೆ ವಿವಿಧ ಮೂರ್ತಿಗಳ ದರ್ಶನ ಪಡೆದರು.
ವಿಸರ್ಜನೆ ಸ್ಥಳದಲ್ಲಿ ಕ್ಯಾಮೆರಾ ನಿಗಾ
‘ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ನಗರಸಭೆಯಿಂದ 60 ಸಮಿತಿಗಳಿಗೆ ಅನುಮತಿ ನೀಡಲಾಗಿದ್ದು ಮೂರ್ತಿಗಳ ವಿಸರ್ಜನೆಗೆ ರಂಗರಾಯನದೊಡ್ಡಿ ಕೆರೆ ಬಳಿಯ ಗೌರಿ ಕಲ್ಯಾಣಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಮೂರ್ತಿಗಳನ್ನು ಭಕ್ತರು ತಮ್ಮ ಬೀದಿಗೆ ಬರುವ ನಗರಸಭೆಯ ಟ್ರಾಕ್ಟರ್‌ಗಳಲ್ಲಿ ವಿಸರ್ಜಿಸಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಗೌರಿ ಕಲ್ಯಾಣಿ ಸುತ್ತ ಬೇಲಿ ಅಳವಡಿಸಿ ಒಂದು ಕಡೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣಿಗೆ ತೆರಳುವ ಮಾರ್ಗದುದ್ದಕ್ಕೂ ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲಾಗಿದ್ದು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗಿದೆ. ಮೂರ್ತಿ ವಿಸರ್ಜನೆ ಮಾಡುವಾಗ ಸಂಬಂಧಪಟ್ಟ ಸಮಿತಿಯ ಭಕ್ತರು ಕಲ್ಯಾಣಿಯ ಮೆಟ್ಟಿಲುಗಳವರೆಗೆ ಮಾತ್ರ ಇಳಿಯಲು ಅವಕಾಶ ಕಲ್ಪಿಸಲಾಗಿದ್ದು ನೀರಿನ ಒಳಕ್ಕೆ ಮೂರ್ತಿಯನ್ನು ಒಯ್ದು ವಿಸರ್ಜಿಸಲು ಪರಿಣಿತ ಈಜುಗಾರರನ್ನು ನಿಯೋಜಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.