ADVERTISEMENT

ಮಾಗಡಿ: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:22 IST
Last Updated 4 ಜುಲೈ 2024, 14:22 IST
ಮಾಗಡಿಯ ಅಗಲಕೋಟೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಮಾಗಡಿಯ ಅಗಲಕೋಟೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು   

ಮಾಗಡಿ: ತಾಲ್ಲೂಕಿನ ಅಗಲಕೋಟೆ ಗ್ರಾಮ ಪಂಚಾಯಿತಿ 2023-24ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ನಡೆಯಿತು.

ಈ ವೇಳೆ ಅಗಲಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಸಭೆಗಳಿಗೆ ಕಡ್ಡಾಯವಾಗಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿ, ತಮ್ಮ ಇಲಾಖೆಯ ಮಾಹಿತಿ ನೀಡಬೇಕು ಎಂದರು.

ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಗೆ ನೋಡಲ್ ಅಧಿಕಾರಿಗಳೇ ಭಾಗವಹಿಸದಿದ್ದರೆ ಸಭೆ ನಡೆಸುವುದಾದರೂ ಹೇಗೆ. ಅಧಿಕಾರಿಗಳೇ ನೀಡಿದ ದಿನಾಂಕಕ್ಕೆ ಸಭೆ ನನಡೆಸಿದರೂ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ಕಾಮಗಾರಿಗಳು ನಡೆದಿರುತ್ತವೆ. ಅದನ್ನು ಸಾರ್ವಜನಿಕರ ಮುಂದೆ ಸಭೆಯಲ್ಲಿ ತಿಳಿಸಬೇಕು. ಆದರೆ, ಅದನ್ನು ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

‌ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕಿ ಡಿ.ಎಸ್.ಉಮಾ ಮಾತನಾಡಿ, ಅಗಲಕೋಟೆ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅಡಿ 720 ಕಾಮಗಾರಿಗಳನ್ನು ಮಾಡಲಾಗಿದೆ. ಅದರಲ್ಲಿ 10 ಮನೆ, 266 ಫಿಟ್, 66 ದನದ ಕೊಟ್ಟಿಗೆ, 6 ಕೃಷಿ ಹೊಂಡ, 6 ಕೋಳಿ ಶೆಡ್, 5 ಕಲ್ಯಾಣಿ ಅಭಿವೃದ್ಧಿ, 1 ಆಟದ ಮೈದಾನ, 7 ರಸ್ತೆ ಕಾಮಗಾರಿ, 15 ನಾಲೆ ಅಭಿವೃದ್ಧಿ, 8 ಚೆಕ್ ಡ್ಯಾಂ ನಿರ್ಮಾಣ, 1 ಸ್ಮಶಾನ ಅಭಿವೃದ್ಧಿ, 2 ಕೆರೆ ಪುನಶ್ಚೇತನ, 7 ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿವೆ. ಸಾಮಾಜಿಕ ಅರಣ್ಯ ಇಲಾಖೆಯಿಂದ 24 ಕಾಮಗಾರಿ, ತೋಟಗಾರಿಕೆ ಇಲಾಖೆಯಿಂದ 42, ಕೃಷಿ ಇಲಾಖೆಯಿಂದ 35, ರೇಷ್ಮೆ ಇಲಾಖೆಯಿಂದ 14 ಕಾಮಗಾರಿ ಮಾಡಲಾಗಿದೆ ಎಂದರು.

ಸಭೆಗೆ ನೋಡಲ್ ಅಧಿಕಾರಿ ಬಾರದ ಹಿನ್ನಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕಾಟಾಚಾರಕ್ಕೆ ಸಭೆ ಮಾಡಬಾರದು. ಮುಂದಿನ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಭಾಗವಹಿಸುವಂತೆ ಪಿಡಿಒ ಅವರು ಗಮನಹರಿಸಬೇಕು ಎಂದರು.

ಲಲಿತಮ್ಮ, ಗೀತಾ ದಿಲೀಪ್, ಮಂಜುಳಾ, ಆನಂದ್, ಶಿವಣ್ಣ, ದಿನೇಶ್, ಮಧು, ಮನು ಸುರೇಶ್, ಮಹಾಲಕ್ಷ್ಮಿ, ಸುಮಿತ್ರಮ್ಮ, ಮಾದಮ್ಮ, ಪ್ರಭು ಮಹಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.