ರಾಮನಗರ: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯು ಜಿಲ್ಲೆಯಲ್ಲಿ ಶೇ 89.07ರಷ್ಟು ಪ್ರಗತಿ ಸಾಧಿಸಿದೆ. ಯೋಜನೆಯಡಿ ಇದುವರೆಗೆ 2,62,223 ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಮಾಸಿಕ ₹ 2 ಸಾವಿರ ನೇರ ಪಾವತಿಯಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಈ ಯೋಜನೆಗೆ, ಜುಲೈ 20ರಂದು ರಾಜ್ಯದಾದ್ಯಂತ ಚಾಲನೆ ನೀಡಲಾಗಿತ್ತು. ಉದ್ದೇಶಿತ ಯೋಜನೆಗೆ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ 2,94,399 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದುವರೆಗೆ 2,62,223 ಮಹಿಳೆಯರು ನೋಂದಣಿ ಮಾಡಿಕೊಂಡು, ಸರ್ಕಾರದ ₹2 ಸಾವಿರ ಹಣವನ್ನು ಸ್ವೀಕರಿಸಿದ್ದಾರೆ.
ಕನಕಪುರ ಮುಂದೆ
ಯೋಜನೆಗೆ ಕನಕಪುರ ತಾಲ್ಲೂಕಿನಲ್ಲಿ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಇಲ್ಲಿ ಗುರುತಿಸಿದ್ದ 73,761 ಫಲಾನುಭವಿಗಳ ಪೈಕಿ 67,632 ಮಂದಿಗೆ ಹಣ ಪಾವತಿಯಾಗಿದೆ. ಐದು ತಾಲ್ಲೂಕುಗಳ ಪೈಕಿ ಕನಕಪುರವೇ ಮುಂದಿದ್ದು ಶೇ 91.69 ಪ್ರಗತಿ ಸಾಧಿಸಿದೆ.
ಜಿಲ್ಲಾ ಕೇಂದ್ರವಾಗಿರುವ ರಾಮನಗರವು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಪ್ರಗತಿಯಲ್ಲಿ ಹಿಂದುಳಿದಿದೆ. ಇಲ್ಲಿ 69,911 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಶೇ 87.75ರಷ್ಟು ಮಂದಿಗೆ ಅಂದರೆ 61,345 ಮಂದಿಗೆ ಯೋಜನೆಯ ಲಾಭ ಸಿಕ್ಕಿದೆ. ಗುರಿ ಸಾಧನೆಯಲ್ಲಿ ನಗರ ಪ್ರದೇಶಕ್ಕಿಂತ, ಗ್ರಾಮೀಣ ಭಾಗವೇ ಮುಂದಿದೆ. ನಗರದಲ್ಲಿ ಶೇ 85.15ರಷ್ಟು ಸಾಧನೆಯಾಗಿದ್ದರೆ, ಗ್ರಾಮೀಣದಲ್ಲಿ ಶೇ 90.29ರಷ್ಟು ಸಾಧನೆಯಾಗಿದೆ.
ಗುರಿಯಲ್ಲಿ ಇಳಿಕೆ
ಗೃಹಲಕ್ಷ್ಮಿಗೆ ಜುಲೈ ತಿಂಗಳಲ್ಲಿ ಚಾಲನೆ ಸಿಕ್ಕ ಸಂದರ್ಭದಲ್ಲಿ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಒಟ್ಟು 2,98,870 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಈ ಸಂಖ್ಯೆ 2,94,399 ಇಳಿಕೆಯಾಗಿದೆ. ವಿವಿಧ ಕಾರಣಗಳಿಗಾಗಿ 4,471 ಫಲಾನುಭವಿಗಳು ಪಟ್ಟಿಯಿಂದ ಹೊರಗುಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.