ಚನ್ನಪಟ್ಟಣ: ರಾಜ್ಯದಲ್ಲಿ ಉಪ ಚುನಾವಣೆ ಮುಗಿದ ನಂತರ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಗೃಹಲಕ್ಷ್ಮಿ ಯೋಜನೆ ಹಣ ಜಮೆ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಸುಳ್ಳೇರಿ, ಅಕ್ಕೂರು, ಅಂಬಾಡಹಳ್ಳಿ, ಸೋಗಾಲ, ಹಾರೋಕೊಪ್ಪ, ಇಗ್ಗಲೂರು ಗ್ರಾಮದಲ್ಲಿ ಭಾನುವಾರ ನಿಖಿಲ್ ಪರ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಎಬ್ಬಿಸಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ. ಆದರೆ, ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಪರಿಮಿತವಾಗಿ ಚುನಾವಣಾ ಅಕ್ರಮ ಎಸಗುತ್ತಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ₹1,600 ಕೋಟಿಯಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪ್ರತಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಇಷ್ಟು ಹಣ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಒತ್ತಾಸೆಯಿಂದ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ ಎಂದರು.
ಕಾಂಗ್ರೆಸ್‌ನವರು ಬಿಜೆಪಿಯಿಂದ ಸ್ಪರ್ಧಿಸಬೇಕಾದ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು. ಹಾಗಂತ ಎಲ್ಲರನ್ನೂ ನಂಬಿಸಿದರು. ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಇದ್ದಕ್ಕಿದ್ದ ಹಾಗೆ ತಮ್ಮ ತೀರ್ಮಾನ ಬದಲಾಯಿಸಿ ಮತ್ತೊಬ್ಬ ಸ್ನೇಹಿತರನ್ನು ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.
ಶಾಸಕ ಸಮೃದ್ಧಿ ಮಂಜುನಾಥ್, ಶರಣಗೌಡ ಕಂದಕೂರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಸ್ಥಳೀಯ ಮುಖಂಡರು ಹಾಜರಿದ್ದರು.
ತೇಜಸ್ವಿ ಸೂರ್ಯ ಮತಯಾಚನೆ: ಚನ್ನಪಟ್ಟಣ ನಗರ ವ್ಯಾಪ್ತಿಯ ಚಿಕ್ಕಮಳೂರು, ಮಂಗಳವಾರಪೇಟೆ, ಮರಳುಹೊಲ, ಕುವೆಂಪುನಗರ 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೊನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್ ಸೇರಿದಂತೆ ಹಲವೆಡೆ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಜೊತೆ ಸಂಸದ ತೇಜಸ್ವಿ ಸೂರ್ಯ ಭಾನುವಾರ ಮತಯಾಚನೆ ಮಾಡಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಗರದ ಯುಜಿಡಿ ಕಾಮಗಾರಿಗೆ ಕುಮಾರಸ್ವಾಮಿ ₹97ಕೋಟಿ ಬಿಡುಗಡೆ ಮಾಡಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ. ನಗರದಲ್ಲಿ ಕುಮಾರಸ್ವಾಮಿ ಅವರು ಪದವಿ ಕಾಲೇಜು, ಬಾಲಕರ ಕಾಲೇಜು, ಬಾಲಕಿಯರ ಕಾಲೇಜು ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.
ತೇಜಸ್ವಿ ಸೂರ್ಯ ಮಾತನಾಡಿ, ‘ದೇವೇಗೌಡರ ಕುಟುಂಬದ ಆಶೀರ್ವಾದ ಹಾಗೂ ನನ್ನ ಕ್ಷೇತ್ರದ ಜನರಿಂದ ನಾನು ಸಂಸದನಾಗಿ ಆಯ್ಕೆಯಾಗಿದ್ದೇನೆ. ನಿಖಿಲ್ ಕುಮಾರಸ್ವಾಮಿ ಯುವ ನಾಯಕ. ಸಮಾಜ ಹಾಗೂ ಕ್ಷೇತ್ರಕ್ಕೆ ಒಳ್ಳೆಯ ಅಭಿವೃದ್ಧಿ ಮಾಡುವ ಕನಸು ಇಟ್ಟುಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಯುವಕರ ಧ್ವನಿಯಾಗಿ ಕೆಲಸ ಮಾಡುತ್ತಾರೆ’ ಎಂದರು.
ಮಾಜಿ ಶಾಸಕ ಎ.ಮಂಜುನಾಥ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಮುಖಂಡರ ಬಿರುಸಿನ ಪ್ರಚಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿಕೂಟದ ನಾಯಕರಾದ ಪ್ರತಿಪಕ್ಷ ಆರ್.ಅಶೋಕ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ದಶವಾವರ ಮಾಕಳಿ ನಾಗವಾರ ಗ್ರಾಮಗಳಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು. ಕುಮಾರಸ್ವಾಮಿ ಮಾತನಾಡಿ ’ನಾನು ಚುನಾವಣೆ ಹೊತ್ತಿನಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ಅಭಿವೃದ್ಧಿ ವಿಷಯ ಬಂದಾಗ ಅದನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ನಾವೆಲ್ಲಾ ಮೈತ್ರಿ ನಾಯಕರು. ಚನ್ನಪಟ್ಟಣ ಅಭಿವೃದ್ಧಿಗೆ ಬದ್ಧರಾಗಿದ್ದೇವೆ‘ ಎಂದು ಘೋಷಣೆ ಮಾಡಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ರಾಜ್ಯದಲ್ಲಿ ಆಡಳಿತದ ವಿಚಾರಕ್ಕೆ ಬಂದರೆ ಶೂನ್ಯ ಪರಿಸ್ಥಿತಿ ಇದೆ. ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದೆ. ರಾಜ್ಯದ ಮುಖ್ಯಮಂತ್ರಿಯೇ ಆರೋಪಿ ಸ್ಥಾನದಲ್ಲಿದ್ದಾರೆ. ಮೂಡಾ ನಿವೇಶನಗಳನ್ನು ಕಬಳಿಸಿದ್ದಾರೆ. ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದರು. ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶಾಸಕ ಸಿ.ಎನ್.ಬಾಲಕೃಷ್ಣ ಆರ್ ಪಿಐ ರಾಷ್ಟ್ರೀಯ ನಾಯಕ ವೆಂಕಟಸ್ವಾಮಿ ಮಾಜಿ ಸಂಸದ ಮುನಿಸ್ವಾಮಿ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಲಿಂಗಮ್ಮ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.