ADVERTISEMENT

‘ನಾನೇ ಎನ್‌ಡಿಎ ಅಭ್ಯರ್ಥಿ’ ಎಂಬ ಯೋಗೇಶ್ವರ್ ಹೇಳಿಕೆಗೆ ಎಚ್‌ಡಿಕೆ ವ್ಯಂಗ್ಯ

ಟಿಕೆಟ್ ಬಗ್ಗೆ ಯಾರು, ಏನು ಬೇಕಾದರೂ ಹೇಳಬಹುದು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 12:43 IST
Last Updated 17 ಅಕ್ಟೋಬರ್ 2024, 12:43 IST
ಎಚ್‌ಡಿಕೆ
ಎಚ್‌ಡಿಕೆ   

ಬಿಡದಿ (ರಾಮನಗರ): ‘ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಕುರಿತು ಯಾರು, ಏನು ಬೇಕಾದರು ಹೇಳಬಹುದು. ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಬೇಕಷ್ಟೆ. ಇದರಲ್ಲಿ ಯಾವುದೇ ದುಡುಕಿಲ್ಲ. ರಾಜಕೀಯ ವಾಸ್ತವಾಂಶಗಳ ಲೆಕ್ಕಾಚಾರ ಮಾಡಿ ಎರಡೂ ಪಕ್ಷಗಳ ಹಿರಿಯ ನಾಯಕರು ಅಭ್ಯರ್ಥಿಯನ್ನು ತೀರ್ಮಾನಿಸುತ್ತೇವೆ’ ಎಂದು ಜೆಡಿಎಸ್ ಅಧ್ಯಕ್ಷರು ಆಗಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ನಾನೇ ಎನ್‌ಡಿಎ ಅಭ್ಯರ್ಥಿ’ ಎಂಬ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೇಳಿಕೆ ಕುರಿತು ಬಿಡದಿಯ ಕೇತಗಾನಹಳ್ಳಿಯಲ್ಲಿ ಗುರುವಾರ ನಡೆದ ಪಕ್ಷದ ಸಭೆಗೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಿಕೆಟ್ ಕುರಿತು ರಾಜ್ಯ ಬಿಜೆಪಿಯ ನಾಯಕರಾದ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್‌ ಜೊತೆ ಮಾತನಾಡಿದ್ದೇನೆ. ಪ್ರಮುಖರು ಸೇರಿ ನಾಡಿದ್ದು ಚರ್ಚಿಸಿ ನಿರ್ಧರಿಸೋಣ ಎಂದಿದ್ದೇನೆ’ ಎಂದರು.

‘ಮೂರೂ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ, ನಮ್ಮ ಸಂಘಟನೆ ಹಾಗೂ ಪಾತ್ರ ಏನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಶಿಗ್ಗಾವಿ ಮತ್ತು ಸಂಡೂರಿನಲ್ಲಿ ನಮ್ಮ ಪಾತ್ರ ಕಡಿಮೆ ಇರಬಹುದು. ಆದರೆ, ಒಂದೊಂದು ಮತವೂ ಮುಖ್ಯವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಎ. ಮಂಜು, ಮಾಜಿ ಶಾಸಕರಾದ ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ಎಚ್.ಕೆ. ಕುಮಾರಸ್ವಾಮಿ, ಎ. ಮಂಜುನಾಥ್, ಶ್ರೀಕಂಠೇಗೌಡ ಹಾಗೂ ಇತರರು ಇದ್ದರು.

‘ಜಿಟಿಡಿಗೆ ಒಂದೊಂದು ಸಲ ಹೀಗಾಗುತ್ತೆ’

ಚುನಾವಣಾ ಚಟುವಟಿಕೆಗಳಿಂದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ದೂರ ಉಳಿಯುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ‘ಆ ರೀತಿ ಏನಿಲ್ಲ. ನಾವಿನ್ನೂ ಕಮಿಟಿ ಸಭೆಯನ್ನೇ ಕರೆದಿಲ್ಲ. ಅವರಿಗೆ ಒಂದೊಂದು ಸಲ ಹೀಗಾಗುತ್ತೆ. ಬಳಿಕ ಅವರೇ ತೀರ್ಮಾನಿಸಿಕೊಂಡು ಯಾವ ಸಮಯಕ್ಕೆ ಬರಬೇಕೊ ಬರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.