ADVERTISEMENT

ಚನ್ನಪಟ್ಟಣ ಉಪಚುನಾವಣೆ | ಟಿಕೆಟ್‌ ಕೈ ತಪ್ಪುವುದು ಹೊಸದಲ್ಲ: ಯೋಗೇಶ್ವರ್

ಪಕ್ಷ ಕೈಬಿಟ್ಟಾಗ ಜನ ಕೈ ಹಿಡಿದಿದ್ದಾರೆ * ಟಿಕೆಟ್ ಸಿಗದಿದ್ದರೆ ಬೆಂಬಲಿಗರ ನಿರ್ಧಾರದಂತೆ ಮುಂದಿನ ನಡೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 21:38 IST
Last Updated 16 ಅಕ್ಟೋಬರ್ 2024, 21:38 IST
ಚನ್ನಪಟ್ಟಣ ತಾಲ್ಲೂಕಿನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದರು
ಚನ್ನಪಟ್ಟಣ ತಾಲ್ಲೂಕಿನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದರು   

ಚನ್ನಪಟ್ಟಣ (ರಾಮನಗರ): ‘ಟಿಕೆಟ್ ಕೈ ತಪ್ಪುವುದು ನನಗೆ ಹೊಸದೇನಲ್ಲ. 1999ರಲ್ಲಿ ಮೊದಲ ಚುನಾವಣೆಯಲ್ಲೂ ಟಿಕೆಟ್ ಕೈ ತಪ್ಪಿತ್ತು. ಆಗ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದೆ. ರಾಜಕೀಯ ಪಕ್ಷಗಳಿಂದ ಅನ್ಯಾಯ ಆದಾಗಲೆಲ್ಲ ಜನ ನನ್ನ ಕೈ ಹಿಡಿದಿದ್ದಾರೆ. ಹಿಂದಿನಂತೆ ಈಗಲೂ ಚನ್ನಪಟ್ಟಣ ಜನ ನನ್ನ ಕೈ ಬಿಡುವುದಿಲ್ಲ’ ಎಂದು ಬಿಜೆಪಿ–ಜೆಡಿಎಸ್ ಮೈತ್ರಿ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.  

ತಾಲ್ಲೂಕಿನ ಕೂಡ್ಲೂರು ರಸ್ತೆಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಈ ಉಪ ಚುನಾವಣೆಯಲ್ಲಿ ನಾನೇ ಮೈತ್ರಿ ಅಭ್ಯರ್ಥಿಯಾಗುವೆ. ಇನ್ನೆರಡು ದಿನದಲ್ಲಿ ನನ್ನ ಹೆಸರು ಘೋಷಣೆಯಾಗಲಿದೆ’ ಎಂದು ಹೇಳಿದರು.

‘ಪಕ್ಷ ಟಿಕೆಟ್ ನೀಡದಿದ್ದರೆ ನಮ್ಮ ಕಾರ್ಯಕರ್ತರ ಒತ್ತಾಸೆಯಂತೆ ನಿರ್ಧಾರ ಕೈಗೊಳ್ಳುವೆ. ಪಕ್ಷದ ವರಿಷ್ಠರೂ ಭರವಸೆ ಕೊಟ್ಟಿದ್ದಾರೆ. ಆತಂಕ ಬೇಡ, ಒಂದೆರಡು ದಿನ ಕಾಯಿರಿ’ ಎಂದು ಕಾರ್ಯಕರ್ತರು, ಬೆಂಬಲಿಗರಿಗೆ ಕಿವಿಮಾತು ಹೇಳಿದರು.

ADVERTISEMENT

‘ನಾನೆಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಹಾಗಾಗಿಯೇ, ಜೆಡಿಎಸ್ ಮತ್ತು ಕಾಂಗ್ರೆಸ್‌ ಪಕ್ಷದವರೂ ನಾನೇ ಅಭ್ಯರ್ಥಿಯಾಗಬೇಕು ಎನ್ನುತ್ತಿದ್ದಾರೆ. ಸ್ವತಂತ್ರವಾಗಿಯಾದರೂ ನನ್ನನ್ನು ಎಂಎಲ್‌ಎ ಮಾಡಲು ಎಲ್ಲರೂ ಸಿದ್ಧರಾಗಿದ್ದಾರೆ. ಹಾಗಂತ ದುಡುಕಿ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ’ ಎಂದು ಯೋಗೇಶ್ವರ್‌ ಹೇಳಿದರು.

ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ‘ಮೈತ್ರಿ ಟಿಕೆಟ್‌ ಕೈ ತಪ್ಪಿ ಸ್ವತಂತ್ರವಾಗಿ ಸ್ಪರ್ಧಿಸಿದರೂ ನಾವು ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.

ಸಭೆಯುದ್ದಕ್ಕೂ ಯೋಗೇಶ್ವರ್ ಪರ ಘೋಷಣೆ, ಜೈಕಾರ ಮೊಳಗಿದವು. ಕೆಲವರು ‘ಮುಂದಿನ ಎಂಎಲ್‌ಎ ಯೋಗೇಶ್ವರ್‌ಗೆ ಜಯವಾಗಲಿ’ ಎಂದು ಕೂಗಿ ಅಭಿಮಾನ ಮೆರೆದರು. 

ಪಕ್ಷದ ಕಾರ್ಯಕರ್ತರು ಹಾಗೂ ಯೋಗೇಶ್ವರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಿಜೆಪಿಯ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳೆಲ್ಲರೂ ಭಾಗವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಬ್ಯಾನರ್ ಮಾತ್ರ ಎದ್ದು ಕಾಣುತ್ತಿತ್ತು.

ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ತುಳಿಯುತ್ತಿದ್ದಾರೆಂದು ನಾನು ಹೇಳಿಲ್ಲ. ಮೈತ್ರಿಯಾದ ಮೇಲೂ ಪರಸ್ಪರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದಿದ್ದೇನೆ. ಎಚ್‌ಡಿಕೆ ಪ್ರಜ್ಞಾವಂತರಿದ್ದು ಎಲ್ಲರನ್ನೂ ಸಮಾಧಾನಪಡಿಸಿ ನನಗೇ ಟಿಕೆಟ್ ಕೊಡಲಿದ್ದಾರೆ
ಸಿ.ಪಿ. ಯೋಗೇಶ್ವರ್ ಬಿಜೆಪಿ–ಜೆಡಿಎಸ್ ಮೈತ್ರಿ ಟಿಕೆಟ್ ಆಕಾಂಕ್ಷಿ

ಹೈವೋಲ್ಟೇಜ್‌ ಕ್ಷೇತ್ರವಲ್ಲ...

‘ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಸಿ.ಎಂ ಆಗುವುದಕ್ಕೆ ಒಂದೇ ಮೆಟ್ಟಿಲಿದೆ. ಮುಂದಿನ ಸಿ.ಎಂ ಆಗುವತ್ತ ಗಮನ ಹರಿಸಿರುವ ಅವರು ಚನ್ನಪಟ್ಟಣಕ್ಕೆ ಯಾಕೆ ಬರುತ್ತಾರೆ? ಹಿಂದೆ ಕ್ಷೇತ್ರದ ಒಂದಿಷ್ಟು ಭಾಗ ಪ್ರತಿನಿಧಿಸುತ್ತಿದ್ದ ಕಾರಣ ಇಲ್ಲಿನ ಋಣ ತೀರಿಸಲು ‘ನಾನೇ ಅಭ್ಯರ್ಥಿ’ ಎನ್ನುತ್ತಾ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದರ ಕೂಡ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಎರಡು ಸಲ ಸಿ.ಎಂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಅವರು ಮಾಡುವುದಕ್ಕೆ ಸಾಕಷ್ಟು ಕೆಲಸಗಳಿವೆ. ಮೂರನೇ ಸಲವೂ ಅವರು ಸಿ.ಎಂ ಆಗುವ ಸಂದರ್ಭ ಬಂದರೆ ನಾವು ಬೆಂಬಲಿಸೋಣ. ಈ ಇಬ್ಬರೂ ನಾಯಕರು ಚನ್ನಪಟ್ಟಣ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಈ ಕ್ಷೇತ್ರ ಹೈ ವೋಲ್ಟೆಜ್ ಕ್ಷೇತ್ರವಲ್ಲ. ನಾನೇ ಇಲ್ಲಿ ಅಭ್ಯರ್ಥಿಯಾಗಿ ಗೆಲ್ಲುವೆ’ ಎಂದು ಯೋಗೇಶ್ವರ್ ಹೇಳಿದರು. ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಸೇರಿದ ತಾಲ್ಲೂಕಿನ ಕೂಡ್ಲೂರು ರಸ್ತೆಯ ಶಿಶಿರ ಹೋಂ  ಸ್ಲೇ ಯಲ್ಲಿ ಈ ಸಭೆ ಆಯೋಜಿಸಲಾಗಿತ್ತು.

ಬಾಡೂಟಕ್ಕೆ ಅಧಿಕಾರಿಗಳ ತಡೆ

ಸಭೆ ನಡೆದ ಹೋಂ ಸ್ಟೇ ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ವ್ಯವಸ್ಥೆ ಮಾಡಿದ್ದ ಬಾಡೂಟಕ್ಕೆ ತಡೆಯೊಡ್ಡಿದ ಚುನಾವಣಾಧಿಕಾರಿಗಳು ಬಡಿಸಲು ಸಿದ್ಧವಾಗಿದ್ದ ಆಹಾರ ವಶಪಡಿಸಿಕೊಂಡರು. ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿದರು. ಉಪ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರನೇ ದಿನವೇ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಯೋಗೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸುವವರಿಗೆ ಕುರಿ ಮತ್ತು ಕೋಳಿ ಮಾಂಸದೂಟದ ವ್ಯವಸ್ಥೆ ಮಾಡಲಾಗಿತ್ತು. ಸಭೆ ಮುಗಿಯುತ್ತಿದ್ದಂತೆ ಪಕ್ಕದ ಅಡುಗೆ ಮನೆಯಿಂದ ಮೂಗಿಗೆ ಬಡಿಯುತ್ತಿದ್ದ ಬಾಡೂಟ ಸವಿಯಲು ಕಾರ್ಯಕರ್ತರು ಊಟದ ಕೋಣೆಯತ್ತ ಧಾವಿಇದರು. ಆಗ ಅವರನ್ನು ತಡೆದ ಪೊಲೀಸರು ನೀತಿ ಸಂಹಿತೆ ಇರುವುದರಿಂದ ಊಟವನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು. ಸ್ಥಳಕ್ಕೆ ಬಂದ ಚುನಾವಣಾಧಿಕಾರಿ ಪಿ.ಕೆ. ಪಿನೋಯ್ ಚನ್ನಪಟ್ಟಣ ತಹಶೀಲ್ದಾರ್ ನರಸಿಂಹಮೂರ್ತಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಹಾಗೂ ಪೊಲೀಸರು ಅಡುಗೆ ಕೋಣೆ ಮತ್ತು ಊಟದ ಕೋಣೆಗೆ ಬೀಗ ಜಡಿದರು. ಇದರಿಂದ ಕೆರಳಿದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಊಟಕ್ಕೆ ಅವಕಾಶ ನೀಡಬಹುದು ಎಂದು ಮಧ್ಯಾಹ್ನ 2.30ರವರೆಗೆ ಕಾದು ಕಡೆಗೆ ಮನೆಯತ್ತ ಹೆಜ್ಜೆ ಹಾಕಿದರು.

ತುಕಾರಾಂ ಪತ್ನಿಗೆ ಟಿಕೆಟ್‌ ಬೇಡ ಎಂದ ಅತೃಪ್ತ ಕಾಂಗ್ರೆಸ್ ನಾಯಕರು

ತೋರಣಗಲ್ಲು(ಬಳ್ಳಾರಿ): ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಂಸದ ತುಕಾರಾಂ ಪತ್ನಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಬುಧವಾರ ತೋರಣಗಲ್‌ನಲ್ಲಿ ಸಭೆ ಸೇರಿದ ತಾಲೂಕಿನ ಅತೃಪ್ತ ನಾಯಕರು ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮಾಜಿ ಸದಸ್ಯರು, ಸಂಡೂರು, ತೋರಣಗಲ್‌, ಕುರುಕುಪ್ಪದ ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಸೇರಿದ್ದ ಈ ಸಭೆಯಲ್ಲಿ ತುಕಾರಾಂ ಅವರ ಕುಟುಂಬ ಹೊರತುಪಡಿಸಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯ ಕೇಳಿ ಬಂತು. ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಸಂತೋಷ್‌ ಲಾಡ್‌ ಅವರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದರು.

‘ಪಕ್ಷ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡದೇ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ಕೊಡಬೇಕು. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಬೇಕು. ಇ.ತುಕಾರಾಂ ನಾಲ್ಕು ಬಾರಿ ಶಾಸಕರು, ಸಚಿವರು ಮತ್ತು ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ಮತ್ತೆ ಅವರ ಕುಟುಂಬದವರಿಗೆ ಟಿಕೆಟ್‌ ಕೊಟ್ಟರೆ ಸರಿಯಾಗದು’ ಎಂದು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ತುಮಟಿ ಲಕ್ಷ್ಮಣ ಹೇಳಿದರು.

‘ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಧ್ಯೇಯವಿದೆ. ಅದರಂತೆ ನಮ್ಮ ಹಕ್ಕುಗಳನ್ನು ಪಡೆಯಲು ನಾವೆಲ್ಲರೂ ಸಭೆ ಸೇರಿದ್ದೇವೆ. ಸಂತೋಷ ಲಾಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಶಿಷ್ಟ ಪಂಗಡದ ಬೇರೆ ವ್ಯಕ್ತಿಗೆ ಅವಕಾಶ ನೀಡಬೇಕು’ ಎಂದು ಸಂಡೂರಿನ ಕಾಂಗ್ರೆಸ್‌ ಮುಖಂಡ ಜಯಣ್ಣ ಒತ್ತಾಯಿಸಿದರು.

3 ದಿನದಲ್ಲಿ ಅಭ್ಯರ್ಥಿಗಳು ಅಂತಿಮ

ಬೆಂಗಳೂರು: ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ, ಮೂರು ದಿನದಲ್ಲಿ ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕ್ಷೇತ್ರಗಳಿಗೆ ಮೂರು ತಂಡಗಳು ಹೋಗಿ ಸ್ಥಳೀಯರ ಅಭಿಪ್ರಾಯ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಶಿಗ್ಗಾವಿಯಲ್ಲಿ ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಛೆ ಇಲ್ಲ. ಪ್ರಸ್ತಾವವನ್ನೂ ಇಟ್ಟಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಆಗಿದೆ. ನನ್ನ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ’ ಎಂದರು. ‘ಶಿಗ್ಗಾವಿ‌ ನಾನು ಪ್ರತಿನಿಧಿಸುವ ಕ್ಷೇತ್ರ. ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಮ್ಮ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯರ ಅಭಿಪ್ರಾಯ ಪಡೆದಿದ್ದಾರೆ. ನನಗೆ ಸಿಕ್ಕಿದ್ದ ಸುಮಾರು 36 ಸಾವಿರ ಗೆಲುವಿನ ಅಂತರ ಈ ಬಾರಿಯೂ ಸಿಗುವ ನಂಬಿಕೆ ಇದೆ’ ಎಂದು ಬೊಮ್ಮಾಯಿ ಹೇಳಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪರ್ಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಹೊರಗಿನವರ ಸ್ಪರ್ಧೆ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನಿಸಬೇಕು. 50ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ’ ಎಂದರು.

ಯೋಗೇಶ್ವರ್ ಪರ ಮಾತು: ‘ನಾವು ಐದಾರು ಜನ ಬಿಜೆಪಿ ಮುಖಂಡರು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಿ.ಪಿ. ಯೋಗೇಶ್ವರ್ ಸ್ಪರ್ಧೆಯ ಬಗ್ಗೆ ಅವರಿಗೆ ಕೇಳಿದ್ದೇವೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟನ್ನು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿಯವರು ಸೇರಿ ತೀರ್ಮಾನ ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.