ADVERTISEMENT

ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 6:20 IST
Last Updated 19 ಸೆಪ್ಟೆಂಬರ್ 2024, 6:20 IST
ಹಾರೋಹಳ್ಳಿಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಕುಂದುಕೊರತೆ ಸಭೆ ನಡೆಯಿತು.
ಹಾರೋಹಳ್ಳಿಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಕುಂದುಕೊರತೆ ಸಭೆ ನಡೆಯಿತು.   

ಹಾರೋಹಳ್ಳಿ: ಕೈಗಾರಿಕಾ ಪ್ರದೇಶದ ಉದ್ಯಮಿಗಳೊಂದಿಗೆ ಸಭೆ ನಡೆಸಿ ಜಮೀನು ಕಳೆದುಕೊಂಡ ಕುಟುಂಬಗಳ ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹ ಮಾಡಲಾಯಿತು.

ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ತಹಸೀಲ್ದಾರ್ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆ ಯಲ್ಲಿ ಹಲವಾರು ದೂರುಗಳು ಕೇಳಿ ಬಂದಿದ್ದು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಬಡವರ ಬಳಿ ಸುಲಿಗೆಯೇ ನಡೆಯುತ್ತಿದೆ.ಇನ್ನು ಹಾರೋಹಳ್ಳಿ ಈಗಾಗಲೇ ತಾಲೂಕಾಗಿದೆ ಆಸ್ಪತ್ರೆಯನ್ನೂ ಸಹ ಮೇಲ್ದರ್ಜೆಗೇರಿಸಿ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಸಹ ಮಾಡಬೇಕಿತ್ತು. ಆದರೆ ಅದ್ಯಾವುದನ್ನು ಸರಕಾರ ಮಾಡದ ಕಾರಣ ಸಣ್ಣ ಪುಟ್ಟ ಸಮಸ್ಯೆಗಳಿಗೂ ದೊಡ್ಡ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದ್ದು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ದಲಿತ ಮುಖಂಡರಾದ ಜಿ.ಗೋವಿಂದಯ್ಯ, ತುಂಗಣಿ ಉಮೇಶ್ ಆಗ್ರಹಿಸಿದರು.

ಹಾರೋಹಳ್ಳಿ ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕು. ಅಂಗಡಿ ಮಳಿಗೆಗಳನ್ನು ಹರಾಜು ನಡೆಸಿ ದಲಿತರಿಗೆ ಮೀಸಲು ಕಲ್ಪಿಸಬೇಕು. ಅಲ್ಲದೇ ದಲಿತರಿರುವ ಪ್ರತಿ ಗ್ರಾಮಕ್ಕೂ ಸ್ಮಶಾನ ನಿರ್ಮಿಸಿ ಮೂಲಭೂತ ಸೌಲಭ್ಯಳನ್ನು ಒದಗಿಸಬೇಕು ಎಂದು ಮುಖಂಡರಾದ ಕೋಟೆ ಕುಮಾರ್ ಮತ್ತು ಅಶೋಕ್ ಆಗ್ರಹಿಸಿದರು.

ADVERTISEMENT

ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಸಾರ್ವಜನಿಕ ಹೋರಾಟ ಮಾಡುವ ಹಲವು ದಲಿತ ಮುಖಂಡರ ಮೇಲೆ ರೌಡಿಶೀಟ್ ಹಾಕಲಾಗಿದೆ. ಅವುಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು, ಬಹುಮುಖ್ಯವಾಗಿ ದಲಿತರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲವಿದೆ, ಎಸ್.ಸಿ.ಸಮುದಾಯದಲ್ಲಿ ಹಲವಾರು ಜಾತಿಗಳು ಬರುತ್ತವೆ, ಬೋವಿ, ಲಂಬಾಣಿ ಎನ್ನುವಂತಹ ಸಮುದಾಯಗಳಿಗೆ ನಿಖರ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಆದರೆ ದಲಿತ ಸಮುದಾಯದಲ್ಲಿ ಆದಿಕರ್ನಾಟಕ, ಆದಿದ್ರಾವಿಡ ಸಮುದಾಯದ ಜಾತಿಗಳಿಗೆ ಪ್ರಮಾಣಪತ್ರ ನೀಡುವಾಗ ಗೊಂದಲದಲ್ಲಿದ್ದು ಅವರಿಗೂ ಸಹ ನಿಖರವಾದ ಜಾತಿಯನ್ನು ನಮೂದಿಸಿ ಪ್ರಮಾಣಪತ್ರವನ್ನು ನೀಡಬೇಕು ಎಂದರು.

ಆಸ್ಕೃಶ್ಯತೆ ತಾಂಡವ; ಇನ್ನು ಮರಳವಾಡಿಯಲ್ಲಿ ಆಸ್ಕೃಶ್ಯತೆ ತಾಂಡವವಾಡುತ್ತಿದ್ದು. ದೊಡ್ಡ ಮರಳವಾಡಿ ಗಣೇಶ ದೇವಸ್ಥಾನ ಬಳಿಯ ಛತ್ರದಲ್ಲಿ ದಲಿತರಿಗೆ ಮದುವೆ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಅವಕಾಶವಿಲ್ಲ ,ಈ ಬಗ್ಗೆ ತಾಲೂಕು ಆಡಳಿತ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಹೋಬಳಿ ಕೇಂದ್ರವಾದ ಮರಳವಾಡಿಯಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಿಸುವ ಕೆಲಸ ಮಾಡಬೇಕು ಎಂದು ಮರಳವಾಡಿ ಮಂಜು ಆಗ್ರಹಿಸಿದರು.

ಕಾಡಂಚಿನ ಪ್ರದೇಶದಲ್ಲಿ ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಮೇಡಮಾರನಹಳ್ಳಿಯಿಂದ ಕೆಂಚುಗಾರನಹಳ್ಳಿ ರಸ್ತೆ ಆಗಲೀಕರಣದ

ಜಾಗವು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಲ್ಲವಾದ್ದರಿಂದ ಜನರಿಗೆ ತೊಂದರೆಯಾಗುತ್ತಿದ್ದು ತ್ವರಿತವಾಗಿ ಪರಿಶೀಲನೆ ನಡೆಸಿ ಅವರಿಗೆ ದಾಖಲಾತಿ ನೀಡಬೇಕೆಂದು ಒತ್ತಾಯ ಮಾಡಲಾಯಿತು.

ಇದೇ ವೇಳೆ ತಹಸೀಲ್ದಾರ್ ಆರ್. ಸಿ ಶಿವಕುಮಾರ್ ಮಾತನಾಡಿ, ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದ್ದು ಆದ್ಯತೆ ಮೇರೆಗೆ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿ ಶ್ವೇತಬಾಯಿ, ಜನಜಾಗೃತಿ ಉಸ್ತುವಾರಿ ಸಮಿತಿ ಶಿವಕುಮಾರ್, ಸಹಾಯಕ ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಅಯೂಬ್ ಪಾಷ,ಮೇಡಮಾರನಹಳ್ಳಿ ಮುತ್ತುರಾಜು,ಶ್ರೀನಿವಾಸ್, ರಿಪಬ್ಲಿಕನ್ ಸೇನೆಜಿಲ್ಲಾಧ್ಯಕ್ಷ ಬೆಣಚುಕಲ್‌ದೊಡ್ಡಿ ರುದ್ರೇಶ್, ಕೋಟೆ ಪ್ರಕಾಶ್,ಶಶಿ ಭಾರ್ಗವ್,ಸುರೇಶ್,ಸಿದ್ದರಾಜು,ನವೀನ್, ಸೇರಿದಂತೆ ತಾಲುಕಿನ ವಿವಿಧ ದಲಿತ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.