ADVERTISEMENT

ಹಾರೋಹಳ್ಳಿ: ಡಾಂಬರು ಕಾಣದ ರಸ್ತೆ, ಗಬ್ಬು ನಾರುವ ಚರಂಡಿ, ಉರಿಯದ ಬೀದಿದೀಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 5:43 IST
Last Updated 14 ಅಕ್ಟೋಬರ್ 2024, 5:43 IST
ಮೂಲ ಸೌಕರ್ಯ ವಂಚಿತ ರಂಗನಾಥ ಬಡಾವಣೆಯ ಬೋರಯ್ಯನ ಬೀದಿ
ಮೂಲ ಸೌಕರ್ಯ ವಂಚಿತ ರಂಗನಾಥ ಬಡಾವಣೆಯ ಬೋರಯ್ಯನ ಬೀದಿ   

ಹಾರೋಹಳ್ಳಿ: ಡಾಂಬರು ಕಾಣದ ರಸ್ತೆಗಳು, ಗಬ್ಬು ನಾರುವ ಚರಂಡಿಗಳು, ನೀರು ಬಾರದ ನಲ್ಲಿಗಳು, ಉರಿಯದ ಬೀದಿದೀಪಗಳು...

–ಇದ್ಯಾವುದೋ ಯೋಗ್‌ರಾಜ್‌ ಭಟ್‌ ಸಿನಿಮಾದ ಡೈಲಾಗ್‌ ಅಲ್ಲ. ಹಾರೋಹಳ್ಳಿಯ ರಂಗನಾಥ ಬಡಾವಣೆಯ ಸ್ಥಿತಿ. ನಾಗರಿಕ ಸಮಾಜ ವಾಸ ಮಾಡಲ ಬೇಕಾದ ಕನಿಷ್ಠ ಮೂಲಸೌಕರ್ಯವು ಇಲ್ಲದೆ ಇಲ್ಲಿನ ಜನ ಹೈರಾಣರಾಗಿದ್ದಾರೆ.

ಹಾರೋಹಳ್ಳಿ ಪಟ್ಟಣದ ರಂಗನಾಥ ಬಡಾವಣೆಯಲ್ಲಿ ಒಂದು ಸುವ್ಯವಸ್ಥೆ ರಸ್ತೆ ಇಲ್ಲ. ಇರುವ ಅವೈಜ್ಞಾನಿಕ ಸಣ್ಣ ಚರಂಡಿಯಲ್ಲಿ ಕಸ ತುಂಬಿಕೊಂಡು ಕೊಳಚೆ ನೀರು ಹರಿಯದೆ ಗಬ್ಬು ನಾರುತ್ತಿದೆ. ಬಡಾವಣೆಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುವುದಿಲ್ಲ. ಇನ್ನೂ ಸಂಜೆಯಾದರೆ ಇಡೀ ಪಟ್ಟಣವೇ ಕತ್ತಲಲ್ಲಿ ಮುಳುಗುತ್ತದೆ.

ADVERTISEMENT

ಇಲ್ಲಿನ ಬೋರಯ್ಯ ಬೀದಿ, ಜಯರಾಜ್ ಬೀದಿ, ರಮೇಶ್ ಬೀದಿಗಳಲ್ಲಿ ರಸ್ತೆ, ಒಳ ಚರಂಡಿ ವ್ಯವಸ್ಥೆ ಇಲ್ಲ. ಬೀದಿದೀಪ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಈ ಬಡಾವಣೆ ಕೊಳಚೆ ಪ್ರದೇಶವಾಗಿ ಮಾರ್ಪಡುತ್ತದೆ. ಸೌಕರ್ಯ ಮತ್ತು ಅಭಿವೃದ್ಧಿ ಎಂಬುದು  ಇಲ್ಲಿನ ನಿವಾಸಿಗಳಿಗೆ ಮರಿಚೀಕೆಯಾಗಿದೆ.

ಬಡಾವಣೆ ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿದೆ. ಆದರೆ, ಈ ತನಕ ಅಡ್ಡ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳಿಗೆ ಡಾಂಬರು ಹಾಕಿಲ್ಲ. ಜನ ಕಚ್ಚಾರಸ್ತೆಯಲ್ಲೇ ಓಡಾಡಬೇಕು. ವಿವಿಧ ಕಾಮಗಾರಿಗಾಗಿ ಮಣ್ಣಿನ ರಸ್ತೆ ಅಗೆದು ಹಾಗೇ ಬಿಟ್ಟಿದ್ದಾರೆ. ಈಗ ಅದು ಕೆಸರು ಗದ್ದೆಯಾಗಿದೆ. ಶಾಲಾ ಮಕ್ಕಳ ವಾಹನ ಹಾಗೂ ಸಾರ್ವಜನಿಕರು ಸಂಚರಿಸಲು ಹರ ಸಾಹಸ ಪಡುವಂತಾಗಿದೆ. ವೃದ್ಧರು, ಮಕ್ಕಳು ಓಡಾಡಲು ಆಗುತ್ತಿಲ್ಲ.

ಚರಂಡಿ ವ್ಯವಸ್ಥೆಯಿಲ್ಲ: ಬಡಾವಣೆಯಲ್ಲಿ ಕೊಳೆಚೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶಗಳಲ್ಲಿ ಹರಿಯುತ್ತಿದೆ. ಮನೆ ಮುಂದೆ ಕೊಳಚೆ ನೀರು ನಿಲ್ಲುತ್ತಿದ್ದು, ಗಲೀಜು ತಾಂಡವವಾಡುತ್ತಿದೆ. ಇರುವ ಚರಂಡಿಯಲ್ಲಿ ರಾಶಿ, ಗಿಡ ಗಂಟಿಗಳು ಬೆಳೆದು ನಿಂತು ವಿಷ ಜಂತುಗಳ ತಾಣವಾಗಿದೆ.

ರಂಗನಾಥ ಬಡಾವಣೆಯ ಖಾಲಿ ಜಾಗಗಳಲ್ಲಿ ಗಿಡ ಗಂಟೆಗಳು ಬೆಳೆದಿದ್ದು, ಹಾವು ಇತರೆ ಜಂತುಗಳ ವಾಸಸ್ಥಾನವಾಗಿದೆ. ರಂಗನಾಥ ಬಡಾವಣೆಯ ಹಲವು ಬೀದಿಗಳಲ್ಲಿ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರು ಇಕ್ಕಟ್ಟಿನ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಡಾವಣೆಯ ಬೀದಿದೀಪಗಳು ಆಗಾಗ್ಗೆ ಕೆಟ್ಟು ಹೋಗುತ್ತವೆ. ಇದರಿಂದ ರಾತ್ರಿ ಬಳಿಕ ಹೊರಗೆ ಓಡಾಡುವುದು ಕಷ್ಟವಾಗಿದೆ. ಈ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದು, ಇಲ್ಲಿ ತನಕ ಯಾವ ಅಧಿಕಾರಿಯೂ ಬಡಾವಣೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ದೂರುತ್ತಾರೆ ಸ್ಥಳೀಯ ನಿವಾಸಿಗಳು.

ರಂಗನಾಥ ಬಡಾವಣೆಗೆ ಮೂಲ ಸೌಕರ್ಯ ಒದಗಿಸಿ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಲಾಗುವುದು
ಶ್ವೇತಾಬಾಯಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಬಡಾವಣೆ ನಿರ್ಮಾಣವಾಗಿ ದಶಕಗಳೇ ಕಳರದರೂ ರಸ್ತೆ ಚರಂಡಿ ನಿರ್ಮಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಯ ಒದಗಿಸಬೇಕು.
ಮೋಹನ್ ರಾವ್ ಬಡಾವಣೆ ನಿವಾಸಿ
ಮೂಲ ಸೌಲಭ್ಯ ಒದಗಿಸಿಕೊಡುವಂತೆ ಹಲವು ಸಲ ಲಿಖಿತ ಮತ್ತು ಮೌಕಿಖವಾಗಿ ಪಟ್ಟಣ ಪಂಚಾಯಿತಿಗೆ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ದರ್ಶನ್ ಬಡಾವಣೆ ನಿವಾಸಿ
ಬಡಾವಣೆಯಲ್ಲಿ ಕೆಲವರು ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳು ಓಡಾಡಲು ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಒತ್ತುವರಿ ತೆರವುಗೊಳಿಸಬೇಕು.
ಶಶಿಧರ್ ಬಡಾವಣ ನಿವಾಸಿ

ಆಧಿಕಾರಿ ಜನಪ್ರತಿನಿಧಿಗಳ ಅಸಡ್ಡೆ

ಅಲ್ಲಿಯ ನಿವಾಸಿಗಳು ಲಿಖಿತವಾಗಿ ಮತ್ತು ಮೌಕಿಖವಾಗಿ ಪಟ್ಟಣ ಪಂಚಾಯಿತಿ  ಕಚೇರಿಗೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುವುದು ಜನರ ಅಳಲು.

ಚುನಾವಣೆ ವೇಳೆ ರಸ್ತೆ ದುರಸ್ತಿ ಡಾಂಬರೀಕರಣ ಚರಂಡಿ ಬೀದಿ ದೀಪ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡುವ ಎಲ್ಲ ಪಕ್ಷಗಳ ಜನ ಪ್ರತಿನಿಧಿಗಳು ಚುನಾಚಣೆ ಬಳಿಕ ಇತ್ತ ಸುಳಿಯುವುದಿಲ್ಲ. ಈಗ ಸಮಸ್ಯೆಗೆ ಕಿವಿಯಾಗುವವರು ಯಾರು ಎಂಬುದು ರಂಗನಾಥ ಬಡಾವಣೆಯ ನಿವಾಸಿಗಳ ಪ್ರಶ್ನೆ.

ತೆರಿಗೆ ಮಾತ್ರ ಬೇಕು ಪ್ರತಿ ವರ್ಷ ಪಟ್ಟಣ ಪಂಚಾಯಿತಿ ನಿಗದಿಪಡಿಸಿರುವ ಎಲ್ಲ ರೀತಿಯ ತೆರಿಗೆಗಳನ್ನು ಇಲ್ಲಿನ ನಿವಾಸಿಗಳು ತಪ್ಪದೆ ಪಾವತಿಸುತ್ತಿದ್ದಾರೆ.  ಆದರೆ ಬಡಾವಣೆಗೆ ಸೌಕರ್ಯಕ್ಕೆ ಕಲ್ಪಿಸುತ್ತಿಲ್ಲ. ಜನರಿಂದ ತೆರಿಗೆ ಭರಿಸಿಕೊಳ್ಳುವ ಪಟ್ಟಣ ಪಂಚಾಯಿತಿ ಪ್ರತಿ ವರ್ಷ ಸಿದ್ಧಪಡಿಸುವ ಕ್ರಿಯಾಯೋಜನೆಯಲ್ಲಿ ಮಾತ್ರ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.