ರಾಮನಗರ: ದೇವೇಗೌಡರ ಕುಟುಂಬಕ್ಕೆ ಹ್ಯಾಟ್ರಿಕ್ ಸೋಲು ಹೊಸದಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಹ ಈ ಹಿಂದೆ ರಾಮನಗರ ಜಿಲ್ಲೆಯಲ್ಲಿ ಸತತ ಮೂರು ಸೋಲನುಭವಿಸಿದ್ದರು. ಇದೀಗ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಹ್ಯಾಟ್ರಿಕ್ ಸೋಲುಂಡಿದ್ದಾರೆ.
ಇಬ್ಬರ ಈ ಸತತ ಸೋಲು ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲೇ ಆಗಿದ್ದು ಎಂಬುದು ವಿಶೇಷ.
ಕುಮಾರಸ್ವಾಮಿ ಅವರು ಎರಡು ಸಲ ಕನಕಪುರ ಲೋಕಸಭಾ ಕ್ಷೇತ್ರದಿಂದ ಹಾಗೂ ಮತ್ತೊಮ್ಮೆ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರ, ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.
1996ಕ್ಕೆ ಎಚ್‌ಡಿಕೆ ಪ್ರವೇಶ:
1996ರ ಲೋಕಸಭಾ ಚುನಾವಣೆಯಲ್ಲಿ ಕನಕಪುರದಿಂದ ಸ್ಪರ್ಧಿಸುವುದರೊಂದಿಗೆ ಕುಮಾರಸ್ವಾಮಿ ಜಿಲ್ಲೆ ಪ್ರವೇಶಿಸಿದರು. ಮೊದಲ ಚುನಾವಣೆಯಲ್ಲೇ 4,40,444 ಮತ ಪಡೆದು, ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಎಂ.ವಿ. ಚಂದ್ರಶೇಖರ್ (3,33,040) ವಿರುದ್ಧ 1,07,404 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.
ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಮಚಂದ್ರ ಗೌಡ ಅವರು 2,46,838 ಮತಗಳೊಂದಿಗೆ 3ನೇ ಸ್ಥಾನ ಪಡೆದಿದ್ದರು. ಇದೇ ಅವಧಿಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದ ದೇವೇಗೌಡರು ದೇಶದ ಪ್ರಧಾನಿಯಾಗಿದ್ದು ಇತಿಹಾಸ.
1998ರಲ್ಲಿ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮತ್ತೆ ಕನಕಪುರದಿಂದ ಸ್ಪರ್ಧಿಸಿದರು. ಆಗ ಬಿಜೆಪಿಯಿಂದ ಎಂ.ಶ್ರೀನಿವಾಸ್ ಹಾಗೂ ಕಾಂಗ್ರೆಸ್‌ನಿಂದ ಡಾ.ಡಿ. ಪ್ರೇಮಚಂದ್ರ ಸಾಗರ್ ಕಣಕ್ಕಿಳಿದಿದ್ದರು. ಶ್ರೀನಿವಾಸ್ 4,70,387 ಮತ ಪಡೆದು ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಪ್ರೇಮಚಂದ್ರ ಸಾಗರ್ (4,53,946) ವಿರುದ್ಧ ಗೆದ್ದಿದ್ದರು. ಕುಮಾರಸ್ವಾಮಿ ಅವರು 2,60,859 ಮತಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದರು.
1999ರಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದ್ದರಿಂದ ಮತ್ತೆ ಚುನಾವಣೆ ಎದುರಾಯಿತು. ಆಗಲೂ ಕುಮಾರಸ್ವಾಮಿ ಕಣಕ್ಕಿಳಿದರು. ಆಗ ಕಾಂಗ್ರೆಸ್‌ನಿಂದ ಎಂ.ವಿ. ಚಂದ್ರಶೇಖರ ಮೂರ್ತಿ ಮತ್ತು ಬಿಜೆಪಿಯಿಂದ ಎಂ. ಶ್ರೀನಿವಾಸ್ ಎದುರಾಳಿಗಳಾಗಿದ್ದರು. ಚಂದ್ರಶೇಖರ ಮೂರ್ತಿ 5,32,910 ಮತಗಳೊಂದಿಗೆ ಸಮೀಪ ಸ್ಪರ್ಧಿ ಶ್ರೀನಿವಾಸ್ ವಿರುದ್ಧ ಗೆದ್ದರು. ಕುಮಾರಸ್ವಾಮಿ 1,62,448 ಮತಗಳೊಂದಿಗೆ 3ನೇ ಸ್ಥಾನ ಪಡೆದರು.
ಡಿಕೆಶಿ ವಿರುದ್ಧ ಸೋಲು:
1999ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುತ್ತಿದ್ದ ಸಾತನೂರು ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದರು. ಶಿವಕುಮಾರ್ 56,050 ಮತಗಳೊಂದಿಗೆ ಕುಮಾರಸ್ವಾಮಿ (41,663) ವಿರುದ್ಧ 14,387 ಮತಗಳ ಅಂತರದಲ್ಲಿ ಗೆದ್ದರು.
ತಮ್ಮ ಆರಂಭಿಕ ರಾಜಕೀಯ ಜೀವನದಲ್ಲಿ ಎರಡು ಲೋಕಸಭಾ ಚುನಾವಣೆ ಮತ್ತು ಒಂದು ವಿಧಾನಸಭಾ ಚುನಾವಣೆ ಸೇರಿದಂತೆ ಸತತ ಮೂರು ಚುನಾವಣೆಗಳಲ್ಲಿ ಸೋಲುಂಡ ಕುಮಾರಸ್ವಾಮಿ ಅವರು 2004ರ ಚುನಾವಣೆಗೆ ರಾಮನಗರಕ್ಕೆ ಬಂದು ಗೆದ್ದರು.
2023ರವರೆಗೆ (2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಸ್ಪರ್ಧಿಸಿ ಗೆಲುವು) ಸತತವಾಗಿ ಗೆದ್ದರು. ಇದೇ ಅವಧಿಯಲ್ಲಿ ಜಿಲ್ಲೆಯಿಂದ ಎರಡು ಸಲ ಮುಖ್ಯಮಂತ್ರಿ ಹುದ್ದೆಗೇರಿದ್ದರು.
ನಿಖಿಲ್ ‘ಕೈ’ ಹಿಡಿಯದ ಅದೃಷ್ಟ
2019ರಲ್ಲಿ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಆಗ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರು. ನಟ ಹಾಗೂ ಕಾಂಗ್ರೆಸ್ ನಾಯಕ ಅಂಬರೀಷ್ ಅವರ ಪತ್ನಿ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. 7,03,660 ಮತ ಪಡೆದ ಸುಮಲತಾ ಅವರು ನಿಖಿಲ್ ವಿರುದ್ಧ 1,25,876 ಮತಗಳ ಅಂತರದಿಂದ ಗೆದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ತಾಯಿ ಅನಿತಾ ಕುಮಾರಸ್ವಾಮಿ ಅವರು ಪ್ರತಿನಿಧಿಸಿದ್ದ ರಾಮನಗರ ಕ್ಷೇತ್ರದಿಂದ ವಿಧಾನಸೌಧ ಪ್ರವೇಶಿಸಲು ನಿಖಿಲ್ ಮುಂದಾದರು. ಆಗ ಕಾಂಗ್ರೆಸ್‌ನ ಎದುರಾಳಿ ಎಚ್.ಎ. ಇಕ್ಬಾಲ್ ಹುಸೇನ್ (87,690) ಎದುರು ನಿಖಿಲ್ (76,975) 10,715 ಮತಗಳಿಂದ ಸೋತರು.
ಇದೀಗ 2024ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತಂದೆ ಕುಮಾರಸ್ವಾಮಿ ಅವರಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಎದುರಾಳಿ ಸಿ.ಪಿ. ಯೋಗೇಶ್ವರ್ 1,12,642 ಮತ ಪಡೆದು ನಿಖಿಲ್ (87,229) ಅವರನ್ನು 25,413 ಮತಗಳಿಂದ ಮಣಿಸಿದರು.
ನಿಖಿಲ್ ಅವರು ದೊಡ್ಡ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಯಾದರೂ ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಚುನಾವಣೆ ಸೇರಿ ಸತತ ಮೂರು ಚುನಾವಣೆಗಳಲ್ಲಿ ಸೋಲಿನ ಕಹಿ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.