ಮಾಗಡಿ: ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಕನ್ನಡಿಗರ ಜೀವನಾಡಿಯಾದ ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಗೈರಾಗಿದ್ದಾರೆ. ಆ ಮೂಲಕ ಕಾವೇರಿ ಸಭೆಗೆ ಚಕ್ಕರ್ ಹಾಕಿ, ಪಾಂಡವಪುರದಲ್ಲಿ ಆಯೋಜಿಸಿದ್ದ ಬಾಡೂಟಕ್ಕೆ ಹಾಜರಾಗಿದ್ದಾರೆ ಎಂದು ಶಾಸಕ ಬಾಲಕೃಷ್ಣ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕರೆದಿದ್ದ ಸರ್ವಪಕ್ಷ ಸಭೆಗೆ ಜೀವನದಿ ಕಾವೇರಿ ಹರಿಯುವ ಮಂಡ್ಯ ಪ್ರತಿನಿಧಿಸುವ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಗೈರಾಗಿದ್ದಾರೆ. ಅವರ ಈ ಬೇಜವಾಬ್ದಾರಿತನವು ಮಂಡ್ಯ ಜಿಲ್ಲೆಯ ರೈತರ ಮೇಲೆ ಅವರಿಗಿರುವ ಕಾಳಜಿ ಎಂತಹದ್ದು ಎಂಬುದಕ್ಕೆ ಕನ್ನಡಿ ಹಿಡಿದಿದೆ’ ಎಂದು ಟೀಕಿಸಿದ್ದಾರೆ.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಸೇತುವಾಗಿ ಸಮನ್ವಯ ಸಾಧಿಸಲು, ಕುಮಾರಸ್ವಾಮಿ ಅವರು ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ರೈತರ ಹಿತ ಕಾಯಲು ತಮ್ಮ ಸಲಹೆ– ಸೂಚನೆಗಳನ್ನು ನೀಡಬೇಕಿತ್ತು. ಆದರೆ, ಅವರಿಗೆ ಸರ್ವಪಕ್ಷ ಸಭೆಗಿಂತಲೂ ಪಾಂಡವಪುರದಲ್ಲಿ ಆಯೋಜನೆ ಮಾಡಿದ್ದ ಬಾಡೂಟದ ಕಾರ್ಯಕ್ರಮವೇ ಮುಖ್ಯವಾಯಿತೇ?’ ಎಂದು ಪ್ರಶ್ನಿಸಿದ್ದಾರೆ.
‘ಇನ್ನಾದರೂ ಕೇಂದ್ರ ಸಚಿವರು ನೀರಾವರಿ ವಿಚಾರದಲ್ಲಿ ಒಗ್ಗಟ್ಟಿನಿಂದ ಕಾವೇರಿ ಭಾಗದ ರೈತರ ಜೊತೆ ನಿಲ್ಲಬೇಕು ಎಂಬುದೇ ನನ್ನ ಮನವಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.