ADVERTISEMENT

ಹುಟ್ಟೂರು ನಿರ್ಲಕ್ಷಿಸಿದವರು ಕ್ಷೇತ್ರ ಅಭಿವೃದ್ಧಿ ಮಾಡುವರೇ?: ಕುಮಾರಸ್ವಾಮಿ

ಪ್ರಚಾರಕ್ಕೆ ಬಿಜೆಪಿ ನಾಯಕರ ಸಾಥ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 7:52 IST
Last Updated 4 ನವೆಂಬರ್ 2024, 7:52 IST
ಚನ್ನಪಟ್ಟಣ ತಾಲ್ಲೂಕಿನಲ್ಲಿ ಅಕ್ಕೂರು ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಇತರರು ಇದ್ದಾರೆ
ಚನ್ನಪಟ್ಟಣ ತಾಲ್ಲೂಕಿನಲ್ಲಿ ಅಕ್ಕೂರು ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಇತರರು ಇದ್ದಾರೆ   

ಚನ್ನಪಟ್ಟಣ (ರಾಮನಗರ): ‘ಕಾಂಗ್ರೆಸ್ ಅಭ್ಯರ್ಥಿ ತಮ್ಮ ಹುಟ್ಟೂರನ್ನೇ ಅಭಿವೃದ್ಧಿ ಮಾಡಿಲ್ಲ. ಇನ್ನು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ? ನಾನೆಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂಬುದು ವೂ ಜನರ ಕಣ್ಣು ಮುಂದೆಯೇ ಇದೆ. ಹಿಂದೆ ಡಿ.ಕೆ ಸಹೋದರರನ್ನು ವಾಚಾಮಗೋಚರವಾಗಿ ಬೈದುಕೊಂಡು ತಿರುಗಿ, ಈಗ ಅವರನ್ನೇ ತಬ್ಬಿಕೊಂಡಿರುವ ವ್ಯಕ್ತಿಯನ್ನು ನಂಬಬೇಡಿ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ‘ಕೈ’ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಮತದಾರರಿಗೆ ಮನವಿ ಮಾಡಿದರು.

ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಯೋಗೇಶ್ವರ್ 20 ವರ್ಷ ಶಾಸಕರಾಗಿ ಏನು ಮಾಡಿದ್ದಾರೆ? ದಾಖಲೆಗಳನ್ನು ಪರಿಶೀಲನೆ ಮಾಡಿ. ನಾನು ಐದು ವರ್ಷದಲ್ಲಿ ಏನು ಮಾಡಿದ್ದೇನೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ನೀವು ಯಾರಿಗೂ ಹೆದರದೇ ಚುನಾವಣೆ ಮಾಡಿ’ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

‘ಈಗ ಕಾಂಗ್ರೆನ್‌ನಲ್ಲಿರುವ ಅಭ್ಯರ್ಥಿ ಚುನಾವಣೆ ಬಳಿಕ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ? ರಾಮನಗರಲ್ಲಿ ಕೂಪನ್ ಹಂಚಿಕೊಂಡು ಚುನಾವಣೆ ಮಾಡಿದರು. ಚನ್ನಪಟ್ಟಣದಲ್ಲೂ ಆ ಕೆಲಸ ಆಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಮತ ನೀಡಿ. ಈ ಚುನಾವಣೆಯಲ್ಲಿ ನಿಮ್ಮ ಗ್ರಾಮದ ನಾಯಕನನ್ನೇ ಅಭ್ಯರ್ಥಿ ಆಗಿ ಎಂದು ಕೇಳಿದೆವು. ನಮ್ಮ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಅಂದಿದ್ದೆ. ಆದರೆ, ಸುಳ್ಳು ಹೇಳಿಕೊಂಡು ಯಾವ ರೀತಿ ನಡೆದುಕೊಂಡರು ಎಂದು ನೋಡಿದ್ದೀರಿ. ಎಲ್ಲರಿಗೂ ಟೋಪಿ ಹಾಕಿ ಕಾಂಗ್ರೆಸ್‌ಗೆ ಹಾರಿರುವ ಅವರಿಗೆ ಪಾಠ ಕಲಿಸಿ’ ಎಂದರು.

ADVERTISEMENT

ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ‘ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಚನ್ನಪಟ್ಟಣಕ್ಕೆ ಹದಿನೆಂಟು ಸಲ ಸುತ್ತು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ತಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗದೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು ಯಾಕೆ? ಜಿಲ್ಲೆಯನ್ನು ಅಭಿವೃದ್ದಿ ಮಾಡಿದರೆ ಅವರಿಗೆ ಏನೂ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಅಭಿವೃದ್ಧಿಯ ಡ್ರಾಮ ನಡೆಸಿದರೆ ಲೂಟಿ ಹೊಡೆಯಬಹುದು ಎಂದು ಅಲ್ಲಿನ ಉಸ್ತುವಾರಿಯಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆಯಲ್ಲಿ ಭಾನುವಾರ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಕಮಲದ ಹೂಗಳನ್ನು ನೀಡಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಇದ್ದಾರೆ 
ಕೆರೆಗಳನ್ನು ತುಂಬಿಸಲು ಹಣ ಕೊಟ್ಟಿದ್ದು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು. ಯೋಜನೆಗೆ ಚಾಲನೆ ನೀಡಿದ್ದು ಅಂದಿನ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ. ಹೀಗಿರುವಾಗ ಯೋಗೇಶ್ವರ್ ಭಗೀರಥ ಹೇಗಾಗುತ್ತಾರೆ?
–ಆರ್. ಅಶೋಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಹೃದಯಗಳು ಒಂದಾದಂತೆ ಈ ಚುನಾವಣೆಯಲ್ಲೂ ಎರಡೂ ಪಕ್ಷದವರ ಹೃದಯಗಳು ಒಂದಾಗಿ ಕೆಲಸ ಮಾಡಿ ನಿಖಿಲ್ ಅವರನ್ನು ಗೆಲ್ಲಿಸಬೇಕು.
–ಡಾ. ಸಿ.ಎನ್. ಮಂಜುನಾಥ್ ಸಂಸದ

ಸಿಪಿವೈ ಒಳ ಒಪ್ಪಂದದ ಚುನಾವಣೆ

‘ಯೋಗೇಶ್ವರ್ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ನಿಮಗೆ ಸೂಕ್ತ ಸ್ಥಾನ ಸಿಗುತ್ತೆ ಅಂತ ಹೇಳಿದರೂ ಕೇಳದೆ ಕಾಂಗ್ರೆಸ್‌ಗೆ ಹಾರಿ ತಪ್ಪು ಮಾಡಿದ್ದಾರೆ. ಅವರು ಆತುರಕೆ ಹಾಗೂ ಅಧಿಕಾರದ ಆಸೆಯ ತಪ್ಪಿನ ಅರಿವಾಗುವ ರೀತಿ ಅವರಿಗೆ ಪಾಠ ಕಲಿಸಬೇಕು. ಆರಂಭದಲ್ಲಿ ಅವರ ಪರವಿದ್ದ ಟ್ರೆಂಡ್ ಈಗಿಲ್ಲ. ಎಲ್ಲವೂ ಬದಲಾಗುತ್ತಿದ್ದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಾತ್ರೆಯಾಗಿದೆ. ನಿಖಿಲ್ ಅವರಿಗೆ ತಂದೆಗಿಂತ ಮುಂದೆ ಹೋಗುವ ಸಾಮರ್ಥ್ಯವಿದೆ’ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.