ಚನ್ನಪಟ್ಟಣ (ರಾಮನಗರ): ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಪರಿಶಿಷ್ಟರ ಅನುದಾನವನ್ನೇ ಲೂಟಿ ಹೊಡೆದಿದ್ದಾರೆ. ಸಂವಿಧಾನ ಉಳಿಸುತ್ತೇವೆ ಎಂದು ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ. ಕನಕಪುರದಲ್ಲಿ ಎಷ್ಟೋ ದಲಿತ ಕುಟುಂಬಗಳನ್ನು ಹಾಳು ಮಾಡಿರುವ ಡಿ.ಕೆ ಸಹೋದರರು ಅನೇಕ ಹೆಣ್ಣು ಮಕ್ಕಳ ಕಣ್ಣೀರು ಹಾಕಿಸಿದ್ದಾರೆ...
– ಮುಡಾ ಹಗರಣ ವಿರೋಧಿಸಿ ಬಿಜೆಪಿ–ಜೆಡಿಎಸ್ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆ ಮೂರನೇ ದಿನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದ ರೀತಿ ಇದು.
‘ದಲಿತರನ್ನು ರಕ್ಷಿಸುತ್ತೇವೆ ಎಂದಿದ್ದ ಸಿದ್ದರಾಮಯ್ಯ ಸರ್ಕಾರದ ವರ್ಗಾವಣೆ ದಂಧೆಗೆ ಯಾದಗಿರಿಯ ಪಿಎಸ್‌ಐ, ಪರಿಶಿಷ್ಟ ಸಮುದಾಯದ ಪರಶುರಾಮ ಬಲಿಯಾಗಿದ್ದಾರೆ. ಯಾದಗಿರಿ ಕಾಂಗ್ರೆಸ್ ಶಾಸಕ ಮತ್ತು ಪುತ್ರನನ್ನು ಬಂಧಿಸುವ ಬದಲು ಮುಖ್ಯಮಂತ್ರಿ ಇಬ್ಬರನ್ನೂ ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆ’ ಎಂದು ಟೀಕಿಸಿದರು.
‘ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದರೋಡೆ ಮಾಡಿದರು. ಮೈಸೂರಿನ ಮುಡಾದಲ್ಲಿ 14 ನಿವೇಶನ ಗುಳುಂ ಮಾಡಿದರು. ಅಹಿಂದ ನಾಯಕ ಎಂದು ಬಿಂಬಿಸಿಕೊಂಡು ಎಲ್ಲಾ ಅಕ್ರಮ ಮಾಡಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯೊಬ್ಬರು ಮುಡಾದಲ್ಲಿ 14 ನಿವೇಶನ ಪಡೆದ ನಿದರ್ಶನ ರಾಜ್ಯದ ಇತಿಹಾಸದಲ್ಲಿಯೇ ಇಲ್ಲ. ಸಿದ್ದರಾಮಯ್ಯ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಅವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.
ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಬಿಜೆಪಿ ಹಾಗೂ ಯಡಿಯೂರಪ್ಪ ಅವರ ನಾಯಕತ್ವ. ರಾಜ್ಯದಲ್ಲಿ ಕುಮಾರಸ್ವಾಮಿಯನ್ನು ಗುರುತಿಸಿದ್ದೇ ಯಡಿಯೂರಪ್ಪ. ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂದಿರಬಹುದು. ಈಗ ಎಲ್ಲಾ ಮರೆತು ಒಂದಾಗಿದ್ದೇವೆ– ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.