ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ಹಳ್ಳಿಗಳಲ್ಲಿ ಅಪ್ಪ–ಮಗನ ಮತಬೇಟೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:57 IST
Last Updated 28 ಅಕ್ಟೋಬರ್ 2024, 18:57 IST
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಲ್ಲಿ ಸೋಮವಾರ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ಹಿರಿಯ ಮತದಾರರ ಕೈ ಹಿಡಿದು ಮತ ಯಾಚಿಸಿದರು
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಲ್ಲಿ ಸೋಮವಾರ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ಹಿರಿಯ ಮತದಾರರ ಕೈ ಹಿಡಿದು ಮತ ಯಾಚಿಸಿದರು   

ಚನ್ನಪಟ್ಟಣ(ರಾಮನಗರ): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಂತ ಸೋಮವಾರ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಅವರ ತಂದೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇಬ್ಬರೂ ಒಂದೊಂದು ದಿಕ್ಕಿನಲ್ಲಿ ಮತ ಯಾಚಿಸಿದರು.

ತಾಲ್ಲೂಕಿನ ದೇವರ ಹೊಸಹಳ್ಳಿಯ ಸಂಜೀವರಾಯಸ್ವಾಮಿ ದೇವಸ್ಥಾನದಲ್ಲಿ ಕುಮಾರಸ್ವಾಮಿ ಹಾಗೂ ಹುಣಸನಹಳ್ಳಿಯ ಬಿಸಲಮ್ಮ ದೇವಿಗೆ ನಿಖಿಲ್ ಪೂಜೆ ಸಲ್ಲಿಸಿ ದಿನದ ಪ್ರಚಾರ ಶುರು ಮಾಡಿದರು.

ಕುಮಾರಸ್ವಾಮಿ ಅವರಿಗೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಾ.ರಾ. ಮಹೇಶ್ ಹಾಗೂ ನಿಖಿಲ್‌ಗೆ ಪಕ್ಷದ ಸ್ಥಳೀಯ ಮುಖಂಡರು ಸಾಥ್ ನೀಡಿದರು.

ADVERTISEMENT

ಬೆಳಗ್ಗೆಯಿಂದ ಸಂಜೆವರೆಗೆ 15ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ ಇಬ್ಬರಿಗೂ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ಮಹಿಳೆಯರು ಆರತಿ ಎತ್ತಿದರು. ಮುಖಂಡರು ಹೂವಿನಹಾರ ಹಾಕಿ, ಘೋಷಣೆ ಕೂಗಿ ಅಭಿಮಾನ ಮೆರೆದರು. ದೇವಸ್ಥಾನಗಳಿಗೆ ಭೇಟಿ ನೀಡುವ ಜೊತೆಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ಜೆ. ಬ್ಯಾಡರಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ನಿಖಿಲ್ ಮಾಲಾರ್ಪಣೆ ಮಾಡಿ ನಮಸ್ಕರಿಸಿದರು. ತಮ್ಮನ್ನು ಮುತ್ತಿಕೊಂಡವರ ಕೈ ಕುಲುಕುತ್ತಾ, ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದರು. ಯುವಜನರು ಮುಗಿಬಿದ್ದು ನಿಖಿಲ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.

ದೇವರಹೊಸಹಳ್ಳಿಯಲ್ಲಿ ಮಹಿಳೆಯೊಬ್ಬರು ಕುಮಾರಸ್ವಾಮಿ ಅವರನ್ನು ಭಾಷಣದ ಮಧ್ಯೆ ‘ಅಣ್ಣಾ...’ ಎಂದು ಕೂಗುತ್ತಿದ್ದರು. ಆಗ ಎಚ್‌ಡಿಕೆ, ‘ನನ್ನ ಹಳೆ ತಂಗಿ ಇವಳು. ಚನ್ನಪಟ್ಟಣಕ್ಕೆ ಬಂದಾಗೆಲ್ಲಾ ಓಡಿ ಬರ್ತಾಳೆ. ಏನವ್ವಾ ನಿಂದು’ ಎಂದು ಮಹಿಳೆಯತ್ತ ನೋಡಿ ನಕ್ಕರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಸೋಮವಾರ ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರಿನಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಹಾಗೂ ಮುಖಂಡರು ಇದ್ದಾರೆ
ಚನ್ನಪಟ್ಟಣ ತಾಲ್ಲೂಕಿನ ಜೆ. ಬ್ಯಾಡರಹಳ್ಳಿಯಲ್ಲಿ ಸೋಮವಾರ ಪ್ರಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿದರು
ಈ ಚುನಾವಣೆಯಲ್ಲಿ ನನ್ನ ಸೋಲು–ಗೆಲುವಿನ ವಿಚಾರವಷ್ಟೇ ಮುಖ್ಯವಲ್ಲ. ಬದಲಿಗೆ ಈ ನಾಡಿನ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ ಅಳಿವು–ಉಳಿವಿನ ಪ್ರಶ್ನೆಯಾಗಿದೆ
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆ ಇದು. ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳಿವೆ. ಚನ್ನಪಟ್ಟಣದ ಜನ ಅವರಿಗೆ ಆಶೀರ್ವದಿಸಿ ಶಕ್ತಿ ತುಂಬಬೇಕು
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಸಂಸದ

‘ಗೌಡರ ವಿರುದ್ಧ ಟೀಕೆಗೆ ಜನರಿಂದ ತೀರ್ಪು’

‘ದೇವೇಗೌಡರ ಗರಡಿಯಲ್ಲಿ ಬೆಳೆದವರೇ ಈಗ ಕೀಳುಮಟ್ಟದ ಭಾಷೆಯಲ್ಲಿ ಅವರನ್ನು ಟೀಕಿಸುತ್ತಿದ್ದಾರೆ. ಮೊಮ್ಮಗನ ಪಟ್ಟಾಭಿಷೇಕಕ್ಕಾಗಿ ಆಂಬುಲೆನ್ಸ್‌ ಗಾಲಿ ಕುರ್ಚಿಯಲ್ಲಿ ಬಂದು ನಾಟಕವಾಡುತ್ತಾ ಮತ ಕೇಳುತ್ತಾರೆ ಎಂದಿದ್ದಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಜನರೇ ಅವರಿಗೆ ತೀರ್ಪು ಕೊಡುತ್ತಾರೆ’ ಎಂದು ಕುಮಾರಸ್ವಾಮಿ ದೇವರಹೊಸಹಳ್ಳಿಯಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ತಿರುಗೇಟು ನೀಡಿದರು. ತಾತನ ವಿರುದ್ಧದ ಟೀಕೆಗೆ ಕಿಡಿಕಾರಿದ ನಿಖಿಲ್ ‘ದೇವೇಗೌಡರ ಕುರಿತು ಹಗುರುವಾಗಿ ಮಾತನಾಡುವುದು ಸರಿಯಲ್ಲ. ಅವರ ಆರೋಗ್ಯದ ಕುರಿತು ವ್ಯಂಗ್ಯವಾಡುವುದನ್ನು ಬಿಟ್ಟು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲಿ. ಕ್ಷೇತ್ರದಲ್ಲಿ ಪಕ್ಷ ಉಳಿಸಿ ಮೈತ್ರಿಕೂಟದ ಗೌರವ ಕಾಪಾಡಲು ನಾನು ಸ್ಪರ್ಧಿಸಿದ್ದೇನೆಯೇ ಹೊರತು ಪಟ್ಟಾಭಿಷೇಕಕ್ಕಲ್ಲ’ ಎಂದರು. ‘ರಾಜಮನೆತನಕ್ಕೆ ಸರ್ಕಾರ ಕಿರುಕುಳ’ ‘ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿರುವ ಮೈಸೂರು ರಾಜ ಮನೆತನದ ವಿರುದ್ಧ ಸಿದ್ದರಾಮಯ್ಯ ಸರ್ಕಾರ ದ್ವೇಷ ಸಾಧಿಸುತ್ತಾ ಕಿರುಕುಳ ನೀಡುತ್ತಿದೆ. ಮನೆದೇವತೆಯಾದ ಚಾಮುಂಡೇಶ್ವರಿಯನ್ನು ರಾಜ ಮನೆತನದಿಂದ ದೂರ ಮಾಡುವ ಕೇಡಿನ ಕೆಲಸಕ್ಕೆ ಕೈ ಹಾಕಿದೆ. ತಮ್ಮ ಉಸ್ತುವಾರಿಯಲ್ಲಿದ್ದ ದೇವಿಯ ಕ್ಷೇತ್ರವನ್ನು ರಾಜ ಮನೆತನ ಉತ್ತಮವಾಗಿ ನಿರ್ವಹಣೆ ಮಾಡುತ್ತಿತ್ತು. ಆ ಕುಟುಂಬಕ್ಕೆ ದಕ್ಕಿದ್ದ ದೇವರ ಸೇವೆಯ ಅವಕಾಶವನ್ನು ಸರ್ಕಾರ ಕಿತ್ತುಕೊಂಡಿದೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.

ನಗರಸಭೆ ಬಿಜೆಪಿಯ ಆರು ಸದಸ್ಯರು ಕಾಂಗ್ರೆಸ್‌ಗೆ

ಚುನಾವಣೆ ಕಾವು ಏರುತ್ತಿದ್ದಂತೆ ಪಕ್ಷಾಂತರ ಪರ್ವ ಕೂಡ ಜೋರಾಗಿದೆ. ನಗರಸಭೆ ಸದಸ್ಯರಾಗಿರುವ ಬಿಜೆಪಿಯ ಆರು ಸದಸ್ಯರು ಹಾಗೂ ಪಕ್ಷದ ಕೆಲ ಪದಾಧಿಕಾರಿಗಳು ಸೋಮವಾರ ಬಿಜೆಪಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ಬೆಂಬಲಿಸಲು ಕಾಂಗ್ರೆಸ್ ಸೇರುವುದಾಗಿ ಅವರು ಘೋಷಿಸಿದರು. ‘ನಗರಸಭೆ ಸದಸ್ಯರಾಗಿ ನಾವು ಪಕ್ಷ ಸಂಘಟಿಸುತ್ತಿದ್ದರೂ ಯೋಗೇಶ್ವರ್ ಬೆಂಬಲಿಗರೆಂಬ ಕಾರಣಕ್ಕೆ ನಮ್ಮನ್ನು ಕಡೆಗಣಿಸಿರುವುದರಿಂದ ನಾವು ಪಕ್ಷ ತೊರೆದಿದ್ದೇವೆ’ ಎಂದು ಪಕ್ಷ ತೊರೆದವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.