ಚನ್ನಪಟ್ಟಣ: ‘ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಸ್ಯಾಸ್ಪದ ಮತ್ತು ದುರುದ್ದೇಶಪೂರಿತ. ಇಂತಹ ನೂರು ಎಫ್‌ಐಆರ್ ದಾಖಲಾದರೂ ಧೃತಿಗೆಡಲ್ಲ. ಉಪ ಚುನಾವಣೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದ್ವೇಷ ಸಾಧನೆಗೆ ಕೋರ್ಟ್ ಮೂಲಕವೇ ಉತ್ತರ ಕೊಡುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಅಕ್ಕೂರು ಹೊಸಹಳ್ಳಿಯಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ನಾನು ಸುದ್ದಿಗೋಷ್ಠಿ ಮಾಡಿದೆ ಎಂದು, ನಿಖಿಲ್ ಕುಮಾರಸ್ವಾಮಿ ಅದಕ್ಕೆ ಪೂರಕವಾಗಿ ಹೇಳಿಕೆ ನೀಡಿದರೆಂದು ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದಕ್ಕಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ದವೂ ಎಫ್ಐಆರ್ ಮಾಡಿಸಿದ್ದಾರೆ’ ಎಂದರು.
‘ಎಫ್‌ಐಆರ್ ಪ್ರತಿ ಓದಿದಾಗ ಅದು ದುರದ್ದೇಶಪೂರಿತ ಎನ್ನುವುದು ಅರ್ಥವಾಯಿತು. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ದೂರುದಾರ ಅಧಿಕಾರಿ ಕೋರಿದ್ದಾರೆ. ಅವರ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನೆ ಎಂದಿರುವ ಅವರು, ನನ್ನ ಸುದ್ದಿಗೋಷ್ಠಿ ವಿಡಿಯೊ ನೋಡಿಕೊಳ್ಳಲಿ’ ಎಂದು ಸಲಹೆ ನೀಡಿದರು.
‘ಯಾರೂ, ಯಾರ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂದು ಕಾನೂನಿನಲ್ಲಿ ಇದೆಯೇ? ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ. ಚನ್ನಪಟ್ಟಣದಲ್ಲಿ ಇವರ ಷಡ್ಯಂತ್ರ ನಡೆಯಲ್ಲ ಎಂದು ಗೊತ್ತಾದಾಗ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.