ಚನ್ನಪಟ್ಟಣ (ರಾಮನಗರ): ‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಎಚ್.ಎಂ.ಟಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವರಿಗೆ ಮಾಹಿತಿ ಮತ್ತು ಜ್ಞಾನದ ಕೊರತೆ ಇದೆ. ಆ ಜಾಗವನ್ನು 2002ರಲ್ಲೇ ಕೆನರಾ ಬ್ಯಾಂಕಿಗೆ ನೀಡಲಾಗಿದೆ. ಈ ಬಗ್ಗೆ ನಾಳೆ ಅಥವಾ ನಾಡಿದ್ದು ದಾಖಲೆ ಸಮೇತ ಮಾಧ್ಯಮದವರ ಮುಂದೆ ಮಾತನಾಡುವೆ’ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಎಚ್.ಎಂ.ಟಿ ಜಾಗಕ್ಕೆ ಸಚಿವ ಖಂಡ್ರೆ ಭೇಟಿ ನೀಡಿ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಚ್.ಎಂ.ಟಿ ಜಾಗ ಕುರಿತು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದ್ದು, ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆಯೇ ಹೊರತು, ಪ್ರಚಾರಕ್ಕಾಗಿ ಯಾವುದೇ ವಿಚಾರ ತೆಗೆದುಕೊಳ್ಳುವುದಿಲ್ಲ’ ಎಂದರು.
‘ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ಒತ್ತುವರಿ ಮಾಡಿರುವ ಅರಣ್ಯ ಭೂಮಿ ತೆರವುಗೊಳಿಸುವ ಧೈರ್ಯವನ್ನು ಸಚಿವರು ತೋರಿಸಲಿ. ಒತ್ತುವರಿ ತೆರವಿಗೆ ಆದೇಶಿಸಿರುವ ಕೋರ್ಟ್, ಅರಣ್ಯ ಇಲಾಖೆ ಮತ್ತು ಕೋಲಾರ ಜಿಲ್ಲಾಧಿಕಾರಿಗೆ ನೋಟಿಸ್ ಕೊಟ್ಟಿದೆ. ಆದರೂ, ಯಾಕೆ ತೆರವುಗೊಳಿಸಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.