ರಾಮನಗರ: ‘ರೋಗ ಬಂದಾಗ ಪರಿತಪಿಸುವ ಬದಲು, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯಯುತ ಜೀವನ ನಡೆಸಬೇಕು’ ಎಂದು ಜಿಲ್ಲಾ ಕ್ಷಯ ಆರೋಗ್ಯಾಧಿಕಾರಿ ಡಾ. ಕುಮಾರ್ ಅಭಿಪ್ರಾಯಪಟ್ಟರು.
ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕವು ನಗರದ ಶೇಷಾದ್ರಿ ಅಯ್ಯರ್ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಡೆಂಗಿ ಸುರಕ್ಷಾ ಸಾಧನಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಪಂಚದ ಇತಿಹಾಸದಲ್ಲಿ ಭಾರತೀಯ ರೆಡ್‌ಕ್ರಾಸ್‌ಗೆ ತನ್ನದೇ ಆದ ಸೈದ್ದಾಂತಿಕ ನೆಲೆಗಟ್ಟಿದೆ. ಸೇವಾ ಚಟುವಟಿಕೆಗೆ ಹೆಸರಾಗಿರುವ ರೆಡ್‌ಕ್ರಾಸ್ ಆಯೋಜಿಸುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ. ಬಡವರು, ನಿರ್ಗತಿಕರು, ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರನ್ನು ಗುರಿಯಾಗಿಸಿಕೊಂಡು ತನ್ನ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಶಶಿಧರ್,‘ಜಿಲ್ಲೆಯಲ್ಲಿ ಡೆಂಗಿ ರೋಗ ನಿಯಂತ್ರಣಕ್ಕೆ ಬರುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನೆ ಬಳಿ ಟೈಯರ್, ಮಡಿಕೆ ಚೂರು, ಎಳೆನೀರು ಬುರುಡೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಅಲ್ಲಿ ಉತ್ಪತ್ತಿಯಾಗುವ ಈಡೀಸ್ ಎಂಬ ಸೊಳ್ಳೆಯಿಂದ ಈ ರೋಗ ದ್ವಿಗುಣಗೊಳ್ಳುತ್ತದೆ’ ಎಂದು ಸಲಹೆ ನೀಡಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ಬಾಬು, ‘ಸಮಾಜದಲ್ಲಿ ಯಾವುದೇ ರೀತಿಯ ವಿಪತ್ತುಗಳು ಬಂದಾಗ, ರೆಡ್‌ಕ್ರಾಸ್ ತಕ್ಷಣ ನೆರವಿಗೆ ಬರುತ್ತದೆ. ಸಂಸ್ಥೆಯ ಸ್ವಯಂಸೇವಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಸರ್ವಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಸಭಾಪತಿ ಹಾಗೂ ರಾಜ್ಯ ನಿರ್ದೇಶಕ ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಶಂಕರಯ್ಯ, ರೆಡ್‌ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಶೇಷಾದ್ರಿ ಅಯ್ಯರ್, ಕಾರ್ಯದರ್ಶಿ ಎಸ್. ರುದ್ರೇಶ್ವರ, ಖಜಾಂಚಿ ಪರಮಶಿವಯ್ಯ, ಸಹ ಕಾರ್ಯದರ್ಶಿ ಚಂದ್ರಶೇಖರಯ್ಯ, ನರೇಂದ್ರ, ಕಾರ್ಯದರ್ಶಿ ವಿನಯ್‌ಕುಮಾರ್, ಚನ್ನಪಟ್ಟಣ ರೆಡ್‌ಕ್ರಾಸ್‌ನ ಸಭಾಪತಿ ಮದೂಸೂದನ್, ಮುಖ್ಯ ಶಿಕ್ಷಕ ಮಹೇಂದ್ರ ಕುಮಾರ್, ಶಿವಕುಮಾರ್ ಕಾರ್ತಿಕ್, ಮರಿಯಂ ಹಾಗೂ ಇತರರು ಇದ್ದರು. ಇದೇ ಸಂದರ್ಭದಲ್ಲಿ ಸೊಳ್ಳೆ ಪರದೆ ಮತ್ತು ಕಾಯಿಲ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.