ADVERTISEMENT

ರಾಮನಗರದಲ್ಲಿ ಭಾರಿ ಮಳೆ | ರಸ್ತೆ ಜಲಾವೃತ: ಬೆಂ–ಮೈ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:59 IST
Last Updated 2 ಜೂನ್ 2024, 15:59 IST
   

ರಾಮನಗರ: ನಗರದಲ್ಲಿ ಭಾನುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ವರುಣನ ಅಬ್ಬರಕ್ಕೆ ನಗರದ ನಗರದ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ, ಕಿಲೋಮೀಟರ್‌ನಷ್ಟು ದೂರ ವಾಹನಗಳ ದಟ್ಟಣೆ ಕಂಡುಬಂತು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಸಂಜೆ 6ರ ಸುಮಾರಿಗೆ ಭಾರಿ ಗಾಳಿಯೊಂದಿಗೆ ಶುರುವಾದ ಮಳೆ ಸತತ ಎರಡು ತಾಸು ಬಿಡದೆ ಸುರಿಯಿತು. ಇದರಿಂದಾಗಿ ಸಂಗಬಸವನದೊಡ್ಡಿ ಬಳಿಯ ಹೆದ್ದಾರಿಯ ಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತು. ಕೆಳ ಸೇತುವೆಗಳ ಬಳಿಯೂ ನೀರು ಸಂಗ್ರಹಗೊಂಡಿತು. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಂತವು. ದ್ವಿಚಕ್ರ ವಾಹನಗಳ ಸವಾರರು ಅತ್ತ ಮಳೆಯಿಂದ ತಪ್ಪಿಸಿಕೊಳ್ಳಲು ಆಗದೆ, ಇತ್ತ ಬೇಗನೇ ಹೋಗಲು ಆಗದೆ ಪರದಾಡಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಮಿಕರನ್ನು ಕರೆಯಿಸಿದರು. ವಿವಿಧೆಡೆ ಸಂಗ್ರಹಗೊಂಡಿದ್ದ ನೀರು ರಸ್ತೆ ಪಕ್ಕದ ಸರಾಗವಾಗಿ ಹರಿದು ಹೋಗುವಂತೆ ಮಾಡಿದರು. ಇದರಿಂದಾಗಿ, ಸವಾರರು ಮಳೆ ಲೆಕ್ಕಸದೆ ಕೆಲ ಹೊತ್ತು ರಸ್ತೆಯಲ್ಲೇ ಕಳೆಯಬೇಕಾಯಿತು.

ADVERTISEMENT

‘ಮಳೆ ನೀರು ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗಬೇಕು. ಆದರೆ, ಕೆಲವೆಡೆ ನೀರು ಹರಿದು ಹೋಗುವ ತೂತುಗಳಲ್ಲಿ ಕಸ ಕಟ್ಟಿಕೊಂಡಿರುವುದರಿಂದ ನೀರು ಸಂಗ್ರಹಗೊಂಡಿತು. ಕೆಲವೆಡೆ ತೀರಾ ತಗ್ಗು ಪ್ರದೇಶವಿರುವುದರಿಂದ ಎಲ್ಲಾ ನೀರು ಅಲ್ಲಿಗೇ ಬಂದು ಸೇರಿಕೊಂಡಿತು. ಇದರಿಂದಾಗಿ ಕೆಲವೆಡೆ ರಸ್ತೆ ಜಲಾವೃತವಾಯಿತು’ ಎಂದು ಬೈಕ್ ಸವಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಸಲ ಜೋರಾಗಿ ಮಳೆ ಸುರಿದಾಗಲೂ ಹೆದ್ದಾರಿಯಲ್ಲಿ ಇದೇ ಪಾಡು. ರಸ್ತೆ ಜಲಾವೃತಗೊಂಡಾಗ ಅಧಿಕಾರಿಗಳು ಓಡಿ ಬರುತ್ತಾರೆ. ಮಳೆಗೂ ಮುಂಚೆಯೇ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರು ಪರಿತಪಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಸರು ಗದ್ದೆಯಾದ ರಸ್ತೆಗಳು
ನಗರದೊಳಗೆ ನಿರಂತರ ನೀರು ಕುಡಿಯುವ ಯೋಜನೆಗಾಗಿ ರಸ್ತೆ ಅಗೆದಿರುವ ರಸ್ತೆಗಳು ಮಳೆಯಿಂದಾಗಿ ಕೆಸರಿನ ಗದ್ದೆಗಳಾದವು. ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ವಾಹನಗಳ ಸಂಚಾರವಿರಲಿ, ಪಾದಚಾರಿಗಳು ಸಹ ನಡೆದುಕೊಂಡು ಹೋಗಲು ಪರದಾಡಬೇಕಾಯಿತು. ಗಾಳಿಯ ಅಬ್ಬರಕ್ಕೆ ಕೆಲವೆಡೆ ಮರಗಳು, ಕೊಂಬೆಗಳು ಬಿದ್ದಿರುವ ವರದಿಯಾಗಿದೆ. ಮಳೆ ಕಾರಣಕ್ಕೆ ಹಲವೆಡೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.