ರಾಮನಗರ: ಕಲ್ಲಿನ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ರಾಮನಗರವೀಗ ಕಾದ ಬಾಣಲಿಯಂತಾಗಿದೆ. ರಣ ಬಿಸಿಲಿನ ಹೊಡೆತಕ್ಕೆ ಜನ ಹೈರಾಣಾಗಿದ್ದಾರೆ. ಬಿರು ಬಿಸಿಲಿನಲ್ಲಿ ಹೊರಕ್ಕೆ ಬರುವುದೆಂದರೆ ಒಂದು ರೀತಿಯಲ್ಲಿ ಬಾಣಲಿಯಲ್ಲಿ ಬಂದು ಬಿದ್ದಂತಾಗುತ್ತಿದೆ. ಹಗಲು ಬಿಸಿಲಿನ ಹೊಡೆತವಾದರೆ, ರಾತ್ರಿ ವಿಪರೀತ ಸೆಕೆಯ ಹಿಂಸೆ.
ಬಿಸಿಲಿನಿಂದಾಗಿ ನಗರದ ತಾಪಮಾನ ಏರಿಕೆಯಾಗುತ್ತಲೇ ಇದೆ. ತಿಂಗಳಿಂದ ನಗರದ ಉಷ್ಣಾಂಶ ಕನಿಷ್ಠ 35 ಡಿಗ್ರಿಯಿಂದ ಗರಿಷ್ಠ 38ರವರೆಗೆ ಇದೆ. ಉತ್ತರ ಕರ್ನಾಟಕದಲ್ಲಿ ಸಾಮಾನ್ಯ ಎನಿಸುವ ಬಿಸಿಲ ಬೇಗೆ ಇದೀಗ ರಾಮನಗರದಲ್ಲೂ ಶುರುವಾಗಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಶುರುವಾಗುವ ಬಿಸಿಲ ಬೇಗೆಗೆ ಹೊರಗೆ ಕಾಲಿಡಲು ಸಾಧ್ಯವಾಗದ ಸ್ಥಿತಿ ಇದೆ. ಜನ ಬಿಸಿ ತಣಿಸಿಕೊಳ್ಳಲು ಎಳನೀರು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ವ್ಯಾಪಾರಿಗಳ ಸಂಕಷ್ಟ: ‘ಸುಡು ಬಿಸಿಲಿನಿಂದಾಗಿ ನಮ್ಮ ಬದುಕು ಸಹ ಬೆಂದು ಹೋಗಿದೆ. ತುತ್ತು ಅನ್ನಕ್ಕಾಗಿ ದಿನವಿಡೀ ಬಿಸಿಲಲ್ಲೇ ನಿಂತು ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ನಮ್ಮದು. ಛತ್ರಿ ಅಥವಾ ಪ್ಲಾಸ್ಟಿಕ್ ಮುಚ್ಚಿಕೊಂಡರೂ ಬಿಸಿಲ ಹೊಡೆತ ತಪ್ಪಿಸಿಕೊಳ್ಳುತ್ತಿಲ್ಲ. ಇದರಿಂದಾಗಿ, ಮಧ್ಯಾಹ್ನ ವ್ಯಾಪಾರ ನಿಲ್ಲಿಸಿ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಅಂಗಡಿ ಹಾಕುತ್ತಿದ್ದೇವೆ’ ಎಂದು ಬೀದಿ ವ್ಯಾಪಾರಿ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಸಿಲಿನ ಕಾರಣಕ್ಕೆ ಗ್ರಾಹಕರು ಸಹ ಬೆಳಿಗ್ಗೆ ಅಥವಾ ಸಂಜೆ ಮಾತ್ರ ಖರೀದಿಗೆ ಬರುತ್ತಾರೆ. ಮಧ್ಯಾಹ್ನ ಯಾರೂ ಸುಳಿಯುವುದಿಲ್ಲ. ತರಕಾರಿ ಮತ್ತು ಹಣ್ಣುಗಳನ್ನು ಬಿಸಿಲಲ್ಲಿ ಇಟ್ಟುಕೊಳ್ಳುವುದರಿಂದ ಅವು ಬೇಗನೆ ಬಾಡಿ ಹೋಗುತ್ತಿವೆ. ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಅವುಗಳಿಗೆ ಎಷ್ಟೇ ನೀರು ಹಾಕಿದರೂ ಸಾಲದು. ತಕ್ಷಣ ಒಣಗಿ ಹೋಗುತ್ತಿವೆ’ ಎಂದು ಅಳಲು ತೋಡಿಕೊಂಡರು.
‘ವರ್ಷಗಳಿಂದ ಬೀದಿ ವ್ಯಾಪಾರ ಮಾಡುತ್ತಿರುವ ನಮ್ಮ ಬದುಕು ಬೀದಿಯಲ್ಲೇ ಕಳೆದು ಹೋಗುತ್ತಿದೆ. ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆದು ವ್ಯಾಪಾರ ಮಾಡುವುದಕ್ಕೆ ನಮಗೆ ಅನುಕೂಲ ಮಾಡಿಕೊಡಬೇಕು. ರಸ್ತೆ ಬದಿ ನಮಗೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ಶೆಲ್ಟರ್ ಹಾಕಿದರೆ, ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಸಿಗುತ್ತದೆ’ ಎಂದು ನಗರದ ಅರ್ಕಾವತಿ ಸೇತುವೆ ಬಳಿಯ ಬೀದಿ ವ್ಯಾಪಾರಿ ಲಕ್ಷ್ಮಮ್ಮ ಒತ್ತಾಯಿಸಿದರು.
ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಗಾಡಿಗಳಲ್ಲಿ ಇಟ್ಟುಕೊಂಡು ಬೀದಿ ಬೀದಿ ಸುತ್ತಿ ಮಾರಾಟ ಮಾಡುವವರು, ಬಿಸಿಲಿನಿಂದಾಗಿ ಹೊರಗೆ ಬರಲಾಗದ ಸ್ಥಿತಿ ತಲುಪಿದ್ದಾರೆ. ಮರದ ಕೆಳಗೆ ಅಥವಾ ಕಟ್ಟಡಗಳ ನೆರಳಿನಲ್ಲಿ ತರಕಾರಿ ಇಟ್ಟುಕೊಂಡು ಮಾರಾಟ ಮಾಡುವುದು ಸಾಮಾನ್ಯವಾಗಿದೆ.
ಆರೋಗ್ಯದ ಮೇಲೂ ಪರಿಣಾಮ: ಉಷ್ಣಾಂಶ ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಶಾಖದ ಹೊಡೆತದಿಂದಾಗಿ (ಹಿಟ್ ವೇವ್) ಚರ್ಮದ ಸಮಸ್ಯೆ, ದೇಹದ ನಿರ್ಜಲೀಕರಣ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗುತ್ತಿವೆ. ಈ ಕುರಿತು ಜಿಲ್ಲಾಡಳಿತ ಸಹ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಸೂಚನೆ ನೀಡಿದೆ.
ಹೊರಗಡೆ ಬಂದಾಗ ಬಿಸಿಲಿನಿಂದ ರಕ್ಷಣೆಗೆ ಛತ್ರಿ ಬಳಸುವುದು, ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸುವುದು, ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ, ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸುವುದರಿಂದ ಬಿಸಿಲಿನಿಂದ ರಕ್ಷಣೆ ಸಿಗುತ್ತದೆ. ದಾಹ ನೀಗಿಸಿಕೊಳ್ಳಲು ರಾಗಿ ಗಂಜಿ, ಮಜ್ಜಿಗೆ, ಎಳನೀರು, ಗ್ಲುಕೋಸ್‌ನಂತಹ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು. ಮನೆಯಲ್ಲಿ ಎ.ಸಿ, ಕೂಲರ್ ಅಥವಾ ಫ್ಯಾನ್ ಬಳಸಬೇಕು ಎಂದು ಸಲಹೆ ನೀಡಿದೆ.
ಎಳನೀರು ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ
ಬಿಸಿಲ ಧಗೆ ಹೆಚ್ಚಿದಂತೆ ಎಳನೀರು ಕಲ್ಲಂಗಡಿ ಕರ್ಬೂಜ ಮಜ್ಜಿಗೆ ಹಾಗೂ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ರಸ್ತೆ ಬದಿಗಳಲ್ಲಿ ಜನ ಎಳನೀರು ಕುಡಿಯುವುದು ಮತ್ತು ಕಲ್ಲಂಗಡಿ ತಿನ್ನುವುದು ಸಾಮಾನ್ಯವಾಗಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ₹30 ಇದ್ದ ಎಳನೀರು ದರ ₹40ಕ್ಕೆ ಏರಿಕೆಯಾಗಿದೆ. ಪ್ರತಿ ಕೆ.ಜಿ.ಗೆ ₹15–₹20 ಇದ್ದ ಕಲ್ಲಂಗಡಿ ಇದೀಗ ₹25–₹30ಕ್ಕೆ ಜಿಗಿದಿದೆ. ಬಿಸಿಲ ದಾಹ ತಣಿಸುವ ಇವುಗಳನ್ನು ಜನ ವಿಧಿ ಇಲ್ಲದೆ ಖರೀದಿಸುತ್ತಿದ್ದಾರೆ. ಇನ್ನು ಬೇಕರಿ ಸೇರಿದಂತೆ ಹೋಟೆಲ್‌ಗಳಲ್ಲಿ ಮಜ್ಜಿಗೆ ಹಣ್ಣಿನ ಜ್ಯೂಸ್ ಹಾಗೂ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಾಗಿದೆ. ‘ಮಳೆ ಇಲ್ಲದಿರುವುದರಿಂದ ಎಳನೀರಿನ ಇಳುವರಿಯೂ ಕುಸಿತವಾಗಿದೆ. ಕಲ್ಲಂಗಡಿ ಹಣ್ಣುಗಳ ಪೂರೈಕೆಯು ತಗ್ಗಿದೆ. ಹಾಗಾಗಿ ಬಿಸಿಲು ಜಾಸ್ತಿಯಾಗಿರುವುದರಿಂದ ಎರಡಕ್ಕೂ ಬೆಲೆ ಏರಿಕೆಯಾಗಿದೆ. ಒಂದೆರಡು ಸಲ ಮಳೆ ಬಂದರೆ ಕ್ರಮೇಣ ಬೆಲೆ ಇಳಿಕೆಯಾಗಲಿದೆ’ ಎಂದು ಎಳನೀರು ವ್ಯಾಪಾರಿ ವೀರಯ್ಯ ಹೇಳಿದರು. ನಿರೀಕ್ಷೆ ಹುಸಿ ಮಾಡಿದ ಮಳೆ ರಾಜ್ಯದ ವಿವಿಧೆಡೆ ಈಗಾಗಲೇ ಎರಡ್ಮುರು ಸಲ ಧಾರಾಕಾರ ಮಳೆ ಬಂದಿದೆ. ಇದರಿಂದ ಜನ ಜಾನುವಾರು ಹಾಗೂ ಭೂಮಿ ಸ್ವಲ್ಪ ಸುಧಾರಿಸಿಕೊಂಡಿದೆ. ಆದರೆ ರಾಮನಗರದಲ್ಲಿ ಇದುವರೆಗೆ ಒಂದನಿಯೂ ಮಳೆಯಾಗಿಲ್ಲ. ಮಾವು ಹೆಚ್ಚಾಗಿ ಬೆಳೆಯುವ ಜಿಲ್ಲೆಯಲ್ಲಿ ಪ್ರತಿ ವರ್ಷ ಇಷ್ಟೊತ್ತಿಗಾಗಲೇ ಎರಡ್ಮೂರು ಸಲ ಮಳೆ ಬಂದು ಹೋಗುತ್ತಿತ್ತು. ಮಾವಿನ ಬೆಳೆಗೂ ಈ ಮಳೆ ಪೂರಕವಾಗುತ್ತಿತ್ತು. ಬೆಳೆಯೂ ಮಾರುಕಟ್ಟೆಯಲ್ಲಿ ನಳನಳಿಸುತ್ತಿತ್ತು. ಆದರೆ ಈ ಸಲ ಎಲ್ಲವೂ ವ್ಯತಿರಿಕ್ತವಾಗಿದೆ. ‘ಬಿಸಿಲ ಏಟಿಗೆ ಮಾವು ತೆಂಗು ರೇಷ್ಮೆ ಸೇರಿದಂತೆ ಎಲ್ಲಾ ಬೆಳೆಗಳು ನೆಲ ಕಚ್ಚುತ್ತಿವೆ. ಮಾವಿನ ಕಾಯಿಗಳು ಉದುರುತ್ತಿದ್ದು ನೀರಿಲ್ಲದೆ ಮರಗಳು ಒಣಗುತ್ತಿವೆ. ತೆಂಗಿನ ಮರಗಳ ಗರಿಗಳು ಸಹ ಒಣಗಿ ಬೀಳುತ್ತಿವೆ. ಕೆರೆ ನದಿ ಸೇರಿದಂತೆ ನೀರಿನ ಮೂಲಗಳಲ್ಲಿ ನೀರಿಲ್ಲದಿರುವುದರಿಂದ ರೈತ ಚಿಂತಾಕ್ರಾಂತನಾಗಿದ್ದಾನೆ. ಮಳೆರಾಯ ಯಾವಾಗ ನಮ್ಮ ಮೇಲೆ ಕರುಣೆ ತೋರುತ್ತಾನೊ ಎಂದು ಕಾಯುತ್ತಿದ್ದೇವೆ’ ಎಂದು ರೈತ ರವಿಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.