ರಾಮನಗರ: ‘ಕಟ್ಟಡ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರು ತಮ್ಮ ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು. ತಲೆಗೆ ಹೆಲ್ಮೆಟ್, ಕೈಗಳಿಗೆ ಗ್ಲೌಸ್ ಹಾಗೂ ಕಾಲುಗಳಿಗೆ ಷೂ ಧರಿಸಿ ಕೆಲಸ ಮಾಡಬೇಕು’ ಎಂದು ದೆಹಲಿ ಕೃಷಿ ಸಮಾಜದ ಬೆಳಗವಾಡಿ ಸತೀಶ್ ಸಲಹೆ ನೀಡಿದರು.
ವಿಶ್ವ ಕಾರ್ಮಿಕದ ದಿನದ ಅಂಗವಾಗಿ ತಾಲ್ಲೂಕಿನ ತಡಿಕವಾಗಿಲು ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹೆಲ್ಮೆಟ್ ವಿತರಿಸಿ ಮಾತನಾಡಿದ ಅವರು, ‘ಕಟ್ಟಡ ನಿರ್ಮಾಣ ಮಾಡುವಾಗ ಇಟ್ಟಿಗೆ, ಕಲ್ಲು, ಮರಳು, ಸಿಮೆಂಟ್, ಬಾಣಲಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಲೆ ಮೇಲೆ ಎತ್ತಿ ಕೊಡುವ ಕೆಲಸ ಮಾಡಬೇಕಾಗುತ್ತದೆ. ಆಗ ಯಾವುದೇ ಅವಘಡ ಸಂಭವಿಸದಂತೆ ಸುರಕ್ಷಾ ಸಾಧನಗಳನ್ನು ಬಳಸಬೇಕು’ ಎಂದರು.
‘ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದ್ದು, ಇದರ ಮೂಲಕ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕಾರ್ಮಿಕರು ಮಂಡಳಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ರಾಮನಗರ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ. ವೆಂಕಟಾಚಲಯ್ಯ, ನಿವೃತ್ತ ಶಿಕ್ಷಕರಾದ ಬೇಗೂರಯ್ಯ, ಜಯರಾಮ್, ಸಂಜೀವಯ್ಯ, ಜಾಲಮಂಗಲದ ಬೆಸ್ಕಾಂ ಶ್ರೀನಿವಾಸಮೂರ್ತಿ ಹಾಗೂ ಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.