ADVERTISEMENT

ಡೆಂಗಿ ರೋಗಿಗೆ ಅವಧಿ ಮುಗಿದ ಗ್ಲುಕೋಸ್!

ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಯಡವಟ್ಟು; ರೋಗಿ ಸಂಬಂಧಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:02 IST
Last Updated 11 ಜುಲೈ 2024, 6:02 IST
ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಭಾಗ್ಯಮ್ಮ
ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಭಾಗ್ಯಮ್ಮ   

ಮಾಗಡಿ: ಡೆಂಗಿ ರೋಗಕ್ಕೆ ಚಿಕಿತ್ಸೆಗಾಗಿ ದಾಖಲಾಗಿರುವ ಮಹಿಳಾ ರೋಗಿಯೊಬ್ಬರಿಗೆ, ಅವಧಿ ಮುಗಿದಿರುವ ಗ್ಲುಕೋಸ್ ಹಾಕಿ ಯಡವಟ್ಟು ಮಾಡಿರುವ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

ತಾಲ್ಲೂಕಿನ ಕರೇನಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವರು, ಡೆಂಗಿ ಪಾಸಿಟಿವ್ ಹಿನ್ನೆಲೆಯಲ್ಲಿ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದ ಸಂಬಂಧಿ ನಂದೀಶ್ ಎಂಬುವರು, ಭಾಗ್ಯಮ್ಮ ಅವರಿಗೆ ಹಾಕಿದ್ದ ಗ್ಲುಕೋಸ್ ಬಾಟಲಿಯನ್ನು ಪರಿಶೀಲಿಸಿದಾಗ ಅದರ ಅವಧಿ ಮುಗಿದಿರುವುದು ಗೊತ್ತಾಗಿದೆ.

‘2019ರ ಸೆಪ್ಟೆಂಬರ್‌ನಲ್ಲಿ ಪ್ಯಾಕ್ ಆಗಿರುವ ಗ್ಲುಕೋಸ್ ಬಾಟಲಿಯ ಬಳಕೆಯ ಅವಧಿ 2022ರ ಆಗಸ್ಟ್‌ಗೆ ಮುಗಿಯುವ ಲೇಬಲ್ ಗಮನಿಸಿದ ಭಾಗ್ಯಮ್ಮ ಅವರ ಪುತ್ರಿ ಮತ್ತು ನಾನು ಈ ಕುರಿತು, ಶುಶ್ರೂಷಕಿಯನ್ನು ವಿಚಾರಿಸಿದೆವು. ನಾನೀಗ ರೋಗಿಗಳನ್ನು ನೋಡುತ್ತಿದ್ದೇನೆ. ಆಮೇಲೆ ಬಂದು ವಿಚಾರಿಸುವೆ’ ಎಂದ ಉಡಾಫೆಯಿಂದ ಪ್ರತಿಕ್ರಿಯಿಸಿದರು’ ಎಂದು ರೋಗಿ ಸಂಬಂಧಿ ನಂದೀಶ್ ತಿಳಿಸಿದರು.

ADVERTISEMENT

‘ಬಾಟಲಿಯಲ್ಲಿದ್ದ ದಿನಾಂಕ ತೋರಿಸಿ ಪ್ರಶ್ನಿಸಿದಾಗ ಆಸ್ಪತ್ರೆಯಲ್ಲಿ ಇರುವುದನ್ನೇ ಕೊಟ್ಟಿದ್ದೇನೆ. ಬೇಕಿದ್ದರೆ ಎಂಎಲ್‌ಎ, ಸಿ.ಎಂ ಗಮನಕ್ಕೆ ತನ್ನಿ. ಮುಖ್ಯ ವೈದ್ಯಾಧಿಕಾರಿಗೆ ಕಾಲ್ ಮಾಡಿ ಹೇಳಿ. ರೋಗಿಗೆ ಏನಾದರೂ ತೊಂದರೆಯಾದರೆ ನಾನು ಜವಾಬ್ದಾರಿ ಎಂದು ದುರಹಂಕಾರದ ಮಾತುಗಳನ್ನಾಡಿದರು’ ಎಂದು ಆರೋಪಿಸಿದರು.

5 ಬಾಟಲಿ ಪತ್ತೆ: ‘ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳಿರುವ ವಾರ್ಡ್‌ನಲ್ಲಿ ಅವಧಿ ಮೀರಿದ 5 ಗ್ಲುಕೋಸ್ ಬಾಟಲಿಗಳು ಪತ್ತೆಯಾಗಿವೆ. ರೋಗಿಗಳಿಗೆ ಚಿಕಿತ್ಸೆ ನೀಡಿ, ಉತ್ತಮ ಔಷಧ ಕೊಟ್ಟು ಜೀವ ಉಳಿಸಬೇಕಾದ ವೈದ್ಯರೇ ಈ ರೀತಿ ಯಡವಟ್ಟು ಮಾಡಿಕೊಂಡರೆ ರೋಗಿಗಳ ಸ್ಥಿತಿ ಏನಾಗಬೇಕು. ಇಂದು ಆಗಿರುವ ಘಟನೆ ಕುರಿತು, ಮೇಲಾಧಿಕಾರಿಗಳು ತಕ್ಷಣ ಗಮನ ಹರಿಸಬೇಕು. ಅವಧಿ ಮೀರಿದ ಗ್ಲುಕೋಸ್ ಹಾಗೂ ಔಷಧಗಳನ್ನು ನಾಶ ಮಾಡಬೇಕು’ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ನೇತೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪುರುಷೋತ್ತಮ್ ಒತ್ತಾಯಿಸಿದರು.

ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ತೆಯಾದ ಅವಧಿ ಮುಗಿದಿರುವ ಗ್ಲುಕೋಸ್ ಬಾಟಲಿಗಳು
ಅವಧಿ ಮುಗಿದಿರುವ ಗ್ಲುಕೋಸ್ ಬಾಟಲಿ ಮೇಲಿನ ಲೇಬಲ್

‘ಸಂಬಂಧಿಸಿದವರನ್ನು ವಿಚಾರಿಸುವೆ’

‘ಅವಧಿ ಮುಗಿದ ಔಷಧ ಹಾಗೂ ಗ್ಲುಕೋಸ್ ಸಾಮಾನ್ಯವಾಗಿ ನಮ್ಮಲ್ಲಿರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ಆಗಾಗ ತರಿಸಿಕೊಳ್ಳಲಾಗುತ್ತದೆ. ಅವಧಿ ಮೀರಿದ ಗ್ಲುಕೋಸ್ ಪತ್ತೆಯಾಗಿರುವ ಬಗ್ಗೆ ಆಸ್ಪತ್ರೆಯಲ್ಲಿ ಸಂಬಂಧಪಟ್ಟವರನ್ನು ವಿಚಾರಣೆ ಮಾಡುತ್ತೇನೆ. ಸಂಪೂರ್ಣ ಮಾಹಿತಿ ಪಡೆದ ನಂತರ ಈ ಕುರಿತು ಪ್ರತಿಕ್ರಿಯಿಸುತ್ತೇನೆ’ ಎಂದು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೈಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.