ಕುದೂರು: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಪಟ್ಟಣದಲ್ಲಿ ಎರಡು ಮನೆಗಳು ಕುಸಿದಿವೆ.
ಪಟ್ಟಣದ ಪೇಟೆ ಆಂಜನೇಯ ದೇವಾಲಯದ ಪಕ್ಕದಲ್ಲಿರುವ ಶ್ರೀನಿವಾಸ್ ಶೆಟ್ಟಿ ಅವರ ಮನೆ ಮತ್ತು ಮಾರುತಿ ಕಲ್ಯಾಣ ಮಂಟಪ ಸಮೀಪದ ಗಂಗಾಚಾರ್ ಎಂಬುವವರ ಮನೆ ಸೋಮವಾರ ಮುಂಜಾನೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸಂಜೆ ಹಾಗೂ ರಾತ್ರಿ ಕೆಲವೊಮ್ಮೆ ಧಾರಾಕಾರವಾಗಿ ಹಾಗೂ ನಂತರ ಸಾಧಾರಣವಾಗಿ ಸುರಿಯುತ್ತದೆ. ಮಳೆಯಿಂದಾಗಿ ಶಿವಗಂಗೆ ರಸ್ತೆಯು ಗುಂಡಿಬಿದ್ದು ಹದಗೆಟ್ಟಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತಿತ್ತು. ಕೆಲವೆಡೆ ಕೆಸರಿನ ರಾಡಿಯಾಗಿದ್ದರಿಂದ ವಾಹನಗಳ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.
ಮಳೆಯಿಂದಾಗಿ ಹೋಬಳಿಯ ಕೆರೆ ಕಟ್ಟೆಗಳು ತುಂಬಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹಲವು ಕೆರೆಗಳಲ್ಲಿ ನೀರಿನ ಶೇಖರಣೆಯಾಗಿದೆ. ಸಣ್ಣಪುಟ್ಟ ಕೆರೆಗಳಲ್ಲಿ ನೀರು ತುಂಬಿ ಕೋಡಿ ಬಿದ್ದಿದೆ.
ರಸ್ತೆಗಳ ಇಕ್ಕೆಲಗಳಲ್ಲಿ ಹೂ ಹಣ್ಣು, ತರಕಾರಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳೂ ಸಹ ಮಳೆಯ ಕಾರಣ ಗ್ರಾಹಕರು ಬಾರದೆ, ಕಾಯ್ದು ಬರಿಗೈಲಿ ಹೋಗುವಂತಾಯಿತು. ವಾಹನ ಸವಾರರು ರೈನ್ ಕೋಟ್, ಜರ್ಕಿನ್ ಧರಿಸಿ ದೈನಂದಿನ ಕೆಲಸಗಳಿಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.