ಬಿಡದಿ:ಬೆಂಗಳೂರಿಗೆ ಕೂಗಳತೆಯ ದೂರದಲ್ಲಿರುವ ಪಟ್ಟಣವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ, ಇಲ್ಲಿನ ಭೂಮಿಗೂ ಚಿನ್ನದ ಬೆಲೆ ಬಂದಿದೆ. ಈ ನಡುವೆಯೇ ನಿವೇಶನ ಖರೀದಿಸುವವರ ಚಿತ್ತವೂ ಇತ್ತ ನೆಟ್ಟಿದೆ.
ಪಟ್ಟಣದ ಸುತ್ತಮುತ್ತ ಕರ್ನಾಟಕ ಗೃಹ ಮಂಡಳಿ ಸೇರಿದಂತೆ ಖಾಸಗಿ ವ್ಯಕ್ತಿಗಳು, ರಿಯಲ್ ಎಸ್ಟೇಟ್ ಕಂಪನಿಗಳು ಸಾಕಷ್ಟು ನಿವೇಶನಗಳನ್ನು ಅಭಿವೃದ್ಧಿಪಡಿಸಿವೆ. ಆದರೆ, ಜನ ಸಾಮಾನ್ಯರು ಈ ಪ್ರದೇಶದಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭ ಸಾಧ್ಯವಿಲ್ಲ.
ಹಾಗಾಗಿಯೇ, ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ನಿವೇಶನ ನೀಡಬೇಕೆಂದು ಕರ್ನಾಟಕ ಗೃಹ ಮಂಡಳಿಯು ಪಟ್ಟಣದ ಸಮೀಪ 2006ರಲ್ಲಿಯೇ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು.
ಪಟ್ಟಣದಿಂದ ಅನತಿ ದೂರದಲ್ಲಿರುವ ಬೋರೆಹಳ್ಳಿ, ಕಾಕರಾಮನಹಳ್ಳಿ, ಮುದ್ದಾಪುರ ಕರೇನಹಳ್ಳಿ ಗ್ರಾಮಗಳಲ್ಲಿ ಗೃಹ ಮಂಡಳಿಯು 499 ಎಕರೆ 21 ಗುಂಟೆ ಜಮೀನನ್ನು ವಶಪಡಿಸಿಕೊಂಡಿತ್ತು.
2011ರಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಧನ ನೀಡಿತ್ತು. ಈ ಪ್ರದೇಶದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಹರಿಗೆ ಮಾರಾಟ ಮಾಡಿ ಹಲವು ವರ್ಷಗಳೇ ಉರುಳಿವೆ. ಆದರೆ, ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ನಿವೇಶನದಾರರು ತೊಂದರೆ ಅನುಭವಿಸುವಂತಾಗಿದೆ.
ಈ ಪ್ರದೇಶವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಿವೇಶನಗಳಲ್ಲಿ ಮುಳ್ಳಿನ ಗಿಡಗಳು, ಕಳೆ ಗಿಡಗಳು ಬೆಳೆದು ನಿಂತಿವೆ. ರಸ್ತೆಬದಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ, ಬಹುತೇಕರು ಮನೆ ನಿರ್ಮಿಸುವ ಸಾಹಸಕ್ಕೆ ಮುಂದಾಗಿಲ್ಲ.
ಮತ್ತೊಂದೆಡೆ ಈ ಭಾಗಕ್ಕೆ ನೀರಿನ ಸಂಪರ್ಕವೂ ಇಲ್ಲ. ಇದರಿಂದ ನಿವೇಶನದಾರರು ಮನೆ ನಿರ್ಮಿಸುವ ಹಿಂದಡಿ ಇಡುವಂತಾಗಿದೆ. ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕರ್ನಾಟಕ ಗೃಹ ಮಂಡಳಿ ಮತ್ತು ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ನಿವೇಶನದಾರರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.