ಕನಕಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಹೆಂಚಿನ ಪ್ಯಾಕ್ಟರಿ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.
ನಗರದ ಮೈಸೂರು ರಸ್ತೆಯ ಹೆಂಚಿನ ಪ್ಯಾಕ್ಟರಿ ಹಿಂಭಾಗ ರಸ್ತೆಯ ನಿವಾಸಿ ಮುತ್ತುರಾಜು(45) ಕೊಲೆಗೆ ಯತ್ನಿಸಿದ ಆರೋಪಿ ಎಂದು ಗುರುತಿಸಲಾಗಿದೆ.
ಇವರ ಪತ್ನಿ ಉಮಾ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಉಮಾ ಹೇಳಿಕೆ ಪಡೆದು ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
30 ವರ್ಷಗಳ ಹಿಂದೆ ಗಾಯಾಳು ಉಮಾ ಅವರನ್ನು ಮುತ್ತುರಾಜು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ, ದಂಪತಿಗಳ ನಡುವೆ ಕೌಟುಂಬಿಕ ಕಲಹದಿಂದ ದಂಪತಿಗಳಿಬ್ಬರು ತಮ್ಮದೇ ಮನೆಯಲ್ಲಿ ತಂದೆ ಒಂದು ಕಡೆ, ತಾಯಿ ಮತ್ತು ಮಕ್ಕಳು ಒಂದು ಕಡೆ ಪ್ರತ್ಯೇಕವಾಗಿ ವಾಸವಾಗಿದ್ದರು.
ಸೋಮವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ದಂಪತಿಗಳ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆ ಪ್ರಾರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಆರೋಪಿ ಮುತ್ತುರಾಜು ಪತ್ನಿ ಉಮಾ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಆಗ ಮಗ ಯೋಗೇಶ್ ಬಿಡಿಸಿದ್ದಾನೆ, ಇದರಿಂದ ಕುಪಿತಗೊಂಡ ಆರೋಪಿ ಮುತ್ತುರಾಜು ಮನೆಯಲ್ಲಿ ಇಟ್ಟಿದ್ದ ಪೆಟ್ರೋಲ್ ತಂದು ಉಮಾ ಅವರ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.
ಉಮಾ ಚೀರಾಡಿದಾಗ ಅಕ್ಕಪಕ್ಕದವರು ಬಂದು ಬೆಂಕಿ ಹಾರಿಸಿ ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಾಹಿತಿ ತಿಳಿದ ನಗರ ಠಾಣೆ ಪಿಎಸ್‌ಐ ಉಷಾ ನಂದಿನಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಉಮಾ ಅವರಿಂದ ಹೆಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗಾಯಗೊಂಡಿರುವ ಉಮಾ ಅವರು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.