ಹಾರೋಹಳ್ಳಿ: ‘ಬೇರೆಯವರ ರೀತಿಯಲ್ಲಿ ನಾವು ಡಿನ್ನರ್ ಸೆಟ್, ತವಾ ಹಂಚಿ ಗಿಮಿಕ್ ರಾಜಕಾರಣ ಮಾಡುವುದಿಲ್ಲ. ಜನರು ಒಪ್ಪುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿ ಜನರ ಮನಸ್ಸು ಗೆಲ್ಲುತ್ತೇವೆ. ಕಾಂಗ್ರೆಸ್ ಮುಖಂಡರ ರೀತಿಯಲ್ಲಿ ಟೀಕೆ ಮಾಡಲು ಹೋಗುವುದಿಲ್ಲ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ
ತಿಳಿಸಿದರು.
ತಾಲ್ಲೂಕಿನ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಮನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಿಖಿಲ್ ಮದುವೆಯನ್ನು ರಾಮನಗರ ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಬೇಕಿತ್ತು. ಅದಕ್ಕೆ ಅವಕಾಶ ಸಿಗದ ಕಾರಣ ಮಗನ ಮದುವೆ ಖರ್ಚಿನ ಹಣದಲ್ಲಿ ಕ್ಷೇತ್ರದ ಜನರಿಗೆ ಫುಡ್ ಕಿಟ್ ನೀಡಿದ್ದೇವೆ’
ಎಂದರು.
‘ಹಾರೋಹಳ್ಳಿ ತಾಲ್ಲೂಕು ರಚನೆ ವಿಚಾರದಲ್ಲಿ ನಾನು ಎಷ್ಟು ಕಷ್ಟ ಪಟ್ಟಿದ್ದೇನೆ ಎಂಬುದು ನನಗಷ್ಟೇ ಗೊತ್ತು. ವಿಧಾನಸೌಧದಲ್ಲಿ ಪ್ರತಿ ಹಂತದಲ್ಲೂ ಅದನ್ನು ಫಾಲೋ ಅಪ್ ಮಾಡಿದ್ದೇನೆ. ಆದರೆ, ಅದರ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿಯವರು ಪ್ರಯತ್ನಿಸಿದರು. ಆದರೆ, ಜನರಿಗೆ ಸತ್ಯ ಏನೆಂಬುದು ಗೊತ್ತಿದೆ’ ಎಂದು
ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ದೊಡ್ಡಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಸಣ್ಣ ಪುಟ್ಟ ಸಮಸ್ಯೆಯಿದ್ದು ಅದಕ್ಕೆ ಶಾಶ್ವತ ಪರಿಹಾರಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ತಾತ್ಕಾಲಿಕವಾಗಿ ಸಮಸ್ಯೆ ಇರಬಹುದು. ಮುಂದಿನ 50 ವರ್ಷಗಳನ್ನು ಗಮನದಲ್ಲಿ ಇಟ್ಟುಕೊಂಡು ನೀರು ಪೂರೈಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಎರಡು, ಮೂರು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.