ADVERTISEMENT

ಬಿಡದಿ: ಅಕ್ರಮ ಅಡ್ಡೆಯಾದ ಇಂದಿರಾ ಕ್ಯಾಂಟೀನ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:37 IST
Last Updated 21 ಅಕ್ಟೋಬರ್ 2024, 14:37 IST
ಕಟ್ಟಡದ ಒಳಗೆ ಕುಡಿದು ಬಿಸಾಡಿದ ಪ್ಯಾಕೆಟ್
ಕಟ್ಟಡದ ಒಳಗೆ ಕುಡಿದು ಬಿಸಾಡಿದ ಪ್ಯಾಕೆಟ್   

ಬಿಡದಿ: ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್ ಕಟ್ಟಡ ಉದ್ಘಾಟನೆಗೂ ಮುನ್ನವೇ ಕಿಡಿಗೇಡಿಗಳ ಅಕ್ರಮ ಅಡ್ಡವಾಗಿ ಮಾರ್ಪಟ್ಟಿದೆ. ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಇಂದಿರಾ ಕ್ಯಾಂಟೀನ್ ಬಿಡದಿ ಪೋಲಿಸ್ ಠಾಣೆಯಿಂದ ಕೂಗಳತೆ ದೂರದಲ್ಲಿದೆ.

ಜನಸಾಮಾನ್ಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ರಾಜ್ಯದಾದ್ಯಂತ 2017ರಲ್ಲಿ ಆರಂಭಿಸಲಾಗಿತ್ತು.

ಪಟ್ಟಣದಿಂದ ಪ್ರತಿನಿತ್ಯ ಸಾವಿರಾರು ಕಾರ್ಮಿಕರು, ವಿದ್ಯಾರ್ಥಿಗಳು ಕೆಲಸಕ್ಕೆ ಹಾಗೂ ಶಾಲಾ-ಕಾಲೇಜಿಗೆ ತೆರಳುತ್ತಾರೆ. ಇವರ ಅನುಕೂಲಕ್ಕಾಗಿ ಬಿಡದಿಯಲ್ಲಿ ಬಹುದಿನಗಳ ಬೇಡಿಕೆ ನಂತರ ಇಂದಿರಾ ಕ್ಯಾಂಟೀನ್‌ಗೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಚಾಲನೆ ನೀಡಿದ್ದರು. ಆದರೆ, ಕಟ್ಟಡ ಕೆಲಸ ಮುಗಿದಿದ್ದು ನೀರು ಹಾಗೂ ವಿದ್ಯುತ್ ಕೆಲಸ ಬಾಕಿ ಇದೆ. ಖಾಲಿ ಕಟ್ಟಡವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ರಾತ್ರಿಯಾದರೆ ಕುಡಿತ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾಡಿಕೊಂಡಿದ್ದಾರೆ.

ADVERTISEMENT

ಒಂದು ಕಡೆ ಅಕ್ರಮ ಚಟುವಟಿಕೆಯಾದರೆ ಮತ್ತೊಂದು ಕಡೆ ದ್ವಿಚಕ್ರ ವಾಹನ ಸವಾರರ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಈ ಅಕ್ರಮ ಚಟುವಟಿಕೆ ತಡೆಯಲು ಪೊಲೀಸರು ಹಾಗೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಟ್ಟಡ ಕಾಮಗಾರಿ ಪೂರ್ಣಗೊಂಡ ಇಂದಿರಾ ಕ್ಯಾಂಟೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.