ADVERTISEMENT

ರಾಮನಗರ | ಮಾಯಗಾನಹಳ್ಳಿ ಡೇರಿಯಲ್ಲಿ ಅಕ್ರಮ: ಆರೋಪ

30 ವರ್ಷದಿಂದ ನಡೆಯದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:05 IST
Last Updated 20 ಜೂನ್ 2024, 7:05 IST
ರಾಮನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ, ತಾಲ್ಲೂಕಿನ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಯೋಗೇಶ್ ಮಾತನಾಡಿದರು. ಗ್ರಾಮಸ್ಥರು ಹಾಗೂ ಜೆಡಿಎಸ್ ಮುಖಂಡರು ಇದ್ದಾರೆ
ರಾಮನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ, ತಾಲ್ಲೂಕಿನ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಯೋಗೇಶ್ ಮಾತನಾಡಿದರು. ಗ್ರಾಮಸ್ಥರು ಹಾಗೂ ಜೆಡಿಎಸ್ ಮುಖಂಡರು ಇದ್ದಾರೆ   

ರಾಮನಗರ: ‘ತಾಲ್ಲೂಕಿನ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಮೂವತ್ತು ವರ್ಷಗಳಿಂದ ಚುನಾವಣೆಯನ್ನೇ ನಡೆಸಿಲ್ಲ. ತಮಗೆ ಬೇಕಾದವರನ್ನು ಅವಿರೋಧ ಆಯ್ಕೆ ಮಾಡಿಕೊಂಡು ಅಕ್ರಮ ಎಸಗಲಾಗುತ್ತಿದೆ. ಈ ಕುರಿತು ಪ್ರಶ್ನಿಸಿದವರಿಗೆ ಸಂಘದ ಅಧ್ಯಕ್ಷರೂ ಆಗಿರುವ ಬಮೂಲ್ ನಿರ್ದೇಶಕ ಪಿ. ನಾಗರಾಜ್ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಸಂಘದ ಸದಸ್ಯ ಯೋಗೇಶ್ ಆರೋಪಿಸಿದರು.

‘ಸಂಘಕ್ಕೆ ನಾನೇ ಅಧ್ಯಕ್ಷ ಎಂದು ನಾಗರಾಜ್ ಹೇಳಿಕೊಂಡಿದ್ದಾರೆ. ಆದರೆ, ಈ ಕುರಿತು ಸಂಘದಲ್ಲಿ ಮಾಹಿತಿ ಪ್ರದರ್ಶಿಸಿಲ್ಲ. ಪದಾಧಿಕಾರಿಗಳು ಹಾಗೂ ಸಂಘದ ವಹಿವಾಟಿನ ಮಾಹಿತಿ ಕೇಳಿದರೆ, ಕೊಡಲು ನಿರಾಕರಿಸುವ ಕಾರ್ಯದರ್ಶಿ ಶಿವನಂಜಯ್ಯ ಅಸಭ್ಯವಾಗಿ ಮಾತನಾಡುತ್ತಾರೆ’ ಎಂದು ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸಂಘದ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ವೈಯಕ್ತಿಕ ಅನುಕೂಲಕ್ಕಾಗಿ ಗ್ರಾಮಸ್ಥರ ವಿರೋಧ ಲೆಕ್ಕಿಸದೆ ಊರಾಚೆ ತಮಗೆ ಬೇಕಾದ ಜಾಗದಲ್ಲಿ ಸಂಘದ ಕಚೇರಿ ಕಟ್ಟಿಸಿದ್ದಾರೆ. ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನೇ ನಡೆಸಿಲ್ಲ. ಸಂಘದಲ್ಲಿ ಅವ್ಯವಹಾರ ನಡೆದಿಲ್ಲವಾದರೆ, ಪ್ರಶ್ನಿಸಿದವರಿಗೆ ಮತ್ತು ದಾಖಲೆ ಕೇಳಿದವರಿಗೆ ಯಾಕೆ ಬೆದರಿಕೆ ಹಾಕಬೇಕು?’ ಎಂದು ಪ್ರಶ್ನಿಸಿದರು.

ADVERTISEMENT

ಅವರ ಮಾತಿಗೆ ದನಿಗೂಡಿಸಿದ ಮತ್ತೊಬ್ಬ ಸದಸ್ಯ ರಾಮಚಂದ್ರ, ‘ಸಂಘದಲ್ಲಿ ಅವ್ಯವಹಾರ ನಡೆದಿರುವ ಕುರಿತು ಮಾಧ್ಯವರಿಗೆ ಹೇಳಿಕೆ ನೀಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದರು. ಅವರಿಂದ ನಮಗೆ ಜೀವ ಬೆದರಿಕೆ ಇದೆ. ನಮಗೇನಾದರು ತೊಂದರೆಯಾದರೆ, ಅದಕ್ಕೆ ನಾಗರಾಜ್ ಅವರೇ ಹೊಣೆಯಾಗಿರುತ್ತಾರೆ’ ಎಂದು ಹೇಳಿದರು.

ವೀರೇಶ್, ಶಿವಸ್ವಾಮಿ, ರಾಜು ಎಂ.ಎಸ್, ಜಯಕುಮಾರ್, ಪಾಪಣ್ಣ, ಕೆಂಪಣ್ಣ, ಶಿವಲಿಂಗಪ್ಪ, ಕೆಂಪರಾಜು, ವಾಸು ಹಾಗೂ ಇತರರು ಇದ್ದರು.

ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಹಾಗೇನಾದರೂ ನಡೆದಿದ್ದರೆ ಪ್ರತಿ ವರ್ಷ ನಡೆಯುವ ಲೆಕ್ಕ ಪರಿಶೋಧನೆಯಲ್ಲಿ ಅದು ಗೊತ್ತಾಗುತ್ತದೆ. ನನ್ನ ವಿರುದ್ಧದ ಆರೋಪ ಸುಳ್ಳು
– ಪಿ. ನಾಗರಾಜ್ ಅಧ್ಯಕ್ಷ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ
ಸದಸ್ಯನಿಂದ ಠಾಣೆಗೆ ದೂರು
‘ಪಿ. ನಾಗರಾಜ್ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಸಂಘದ ಸದಸ್ಯ ರಾಮಚಂದ್ರ ಮಂಗಳವಾರ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಸಂಘದ ಸರ್ವ ಸದಸ್ಯರ ಮಾಹಿತಿ ಕೋರಿ ಮುಖ್ಯ ಕಾರ್ಯನಿರ್ವಾಹಕರಿಗೆ ಜೂನ್ 18ರಂದು ಬೆಳಿಗ್ಗೆ ಅರ್ಜಿ ಸಲ್ಲಿಸಲು ಹೋದಾಗ ಕಾರ್ಯದರ್ಶಿ ಅದನ್ನು ಸ್ವೀಕರಿಸದೆ ಅವಾಚ್ಯವಾಗಿ ನಿಂದಿಸಿದರು. ಆಗ ಸ್ಥಳಕ್ಕೆ ಬಂದ ನಾಗರಾಜ್ ಅವರು ದೈಹಿಕ ಹಲ್ಲೆ ನಡೆಸಿದರು. ಅವರಿಂದ ನನಗೆ ಪ್ರಾಣ ಬೆದರಿಕೆ ಇದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ರಾಮಚಂದ್ರ ಅವರು ನೀಡಿರುವ ದೂರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.