ಮಾಗಡಿ: ರಾಗಿ, ಅವರೆಕಾಯಿ, ತಾಜಾ ತರಕಾರಿಗಳಿಗೆ ಹೆಸರುವಾಸಿಯಾಗಿರುವ ಮಾಗಡಿ ಶುದ್ಧ ಹರಳೆಣ್ಣೆ ಕೂಡ ಸಾಕಷ್ಟು ಪ್ರಸಿದ್ಧಿಯಾಗಿದೆ.
ಇಲ್ಲಿ ದೊರೆಯುವ ಹರಳೆಣ್ಣೆ ಖರೀದಿಸಲು ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ಗ್ರಾಹಕರು ಬರುತ್ತಾರೆ. ನಿತ್ಯ 100 ರಿಂದ 200 ಲೀಟರ್ ಹರಳೆಣ್ಣೆ ಮಾರಾಟ ಆಗುತ್ತದೆ.
ರಾಮನಗರ, ಕನಕಪುರ, ಚನ್ನಪಟ್ಟಣ, ಬೆಂಗಳೂರು, ನೆಲಮಂಗಲ, ಹುಲಿಯೂರುದುರ್ಗ, ಕುಣಿಗಲ್, ತುಮಕೂರು ಸೇರಿದಂತೆ ನಾನಾ ಊರುಗಳಿಂದ ಇಲ್ಲಿಗೆ ಹರಳೆಣ್ಣೆ ಖರೀದಿಗೆ ಬರುತ್ತಾರೆ.
ರೈತರಿಂದ ನೇರ ಖರೀದಿ: ಹರಳನ್ನು ನೇರವಾಗಿ ರೈತರಿಂದ ಖರೀದಿಸುತ್ತಿದ್ದೇವೆ. ಅವರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ನೀಡುತ್ತಿದೆ. ಒಂದು ಕೆ.ಜಿ ಹರಳಿಗೆ ₹65 ಕೊಡುತ್ತಿದ್ದೇವೆ. ಒಂದು ಲೀಟರ್ ಹರಳೆಣ್ಣೆ ತೆಗಿಯಬೇಕಾದರೆ ಮೂರು ಕೆ.ಜಿ ಹರಳು ಹಾಕಬೇಕಾಗುತ್ತದೆ.ಈಗ ₹220ಗೆ ಒಂದು ಲೀಟರ್ ಶುದ್ಧ ಹರಳೆಣ್ಣೆ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಮಂಜುನಾಥ್ ಆಯಿಲ್ ಮಿಲ್ ಮಾಲೀಕ ಚಂದ್ರಶೇಖರ್. 40 ವರ್ಷಗಳಿಂದಲೂ ಇವರ ಕುಟುಂಬ ಗ್ರಾಹಕರಿಗೆ ಶುದ್ಧ ಹರಳೆಣ್ಣೆ ಮಾರಾಟ ಮಾಡುತ್ತಿದೆ.
‘ಗಾಣದ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಹುಚ್ಚಳ್ಳು ಎಣ್ಣೆ ಮಾರಾಟ ಮಾಡಲಾಗುತ್ತಿದ್ದು, ಅತಿ ಹೆಚ್ಚು ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ ಮಾರಾಟವಾಗುತ್ತಿದೆ. ನಮಗೆ ಹರಳೆಣ್ಣೆ ಮಾರಾಟದಿಂದಲೇ ಹೆಚ್ಚಿನ ಹೆಸರು ಬಂದಿದೆ. ಮಾಗಡಿಗೆ ಹರಳೆಣ್ಣೆ ಎಂದರೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ಹೆಸರನ್ನು ಉಳಿಸಿಕೊಳ್ಳಲು ನಮ್ಮ ಕುಟುಂಬದ ಸದಸ್ಯರೆಲ್ಲ ಸಾಥ್ ನೀಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.