ರಾಮನಗರ: ಕನಕಪುರ ತಾಲ್ಲೂಕಿನ ಗಾಳಿಬೋರೆ ಫಿಶಿಂಗ್ ಕ್ಯಾಂಪ್ ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಮೊಟ್ಟಮೊದಲ ಹೂಡಿಕೆದಾರರ ಸಮಾವೇಶವು ಪ್ರವಾಸೋದ್ಯಮ ಕುರಿತ ಭರವಸೆಗಳನ್ನು ಮೂಡಿಸುವಲ್ಲಿ ಯಶಸ್ವಿ ಆಯಿತು.
ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹೂಡಿಕೆದಾರರೊಂದಿಗಿನ ಸಮಾ ವೇಶ ನಡೆದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಉದ್ಯಮಿಗಳು ಪಾಲ್ಗೊಂಡಿದ್ದರು. ಈ ಪೈಕಿ ಕೆಲವರು ರಾಮನಗರದಲ್ಲಿ ಸ್ಥಳ ನೀಡಿದ್ದೇ ಆದಲ್ಲಿ ಉತ್ತಮ ಆತಿಥ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಭರವಸೆಯನ್ನೂ ನೀಡಿದರು.
ಸಮಾವೇಶಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಪ್ರವಾಸೋದ್ಯಮವು ಮನೋರಂಜನೆಯ ಜೊತೆಗೆ ಅತಿಹೆಚ್ಚು ಉದ್ಯೋಗ ಸೃಷ್ಟಿಗೆ ಅವಕಾಶ ಇರುವ ಕ್ಷೇತ್ರ. ಜಿಲ್ಲೆಯು ರಾಜಧಾನಿಗೆ ಹತ್ತಿರವೇ ಇದ್ದು, ಹೇರಳವಾದ ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ಇದರ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅವಕಾಶ ಇದೆ. ಉದ್ಯಮಿಗಳು ಆಸಕ್ತಿ ತೋರಿದಲ್ಲಿ ಏಕಗವಾಕ್ಷಿ ಪದ್ಧತಿಯ ಅನುಮೋದನೆ ಜೊತೆಗೆ ಕಾರ್ಮಿಕರಿಗೆ ಕೌಶಲ ತರಬೇತಿ ಸೇರಿದಂತೆ ಅಗತ್ಯ ಸವಲತ್ತುಗಳನ್ನು ತ್ವರಿತವಾಗಿ ಒದಗಿಸಿಕೊಡಲಾಗುವುದು’
ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ‘ಜಿಲ್ಲೆಯಲ್ಲಿ ಬೆಟ್ಟಗುಡ್ಡಗಳು, ಹಸಿರು ಹೊದ್ದ ಅರಣ್ಯ, ಜಲಾಶಯಗಳು, ದೇವಾಲಯಗಳು, ನಾನಾ ಬಗೆಯ ತಾಣಗಳು ಇವೆ. ಇವೆಲ್ಲವನ್ನೂ ಬಳಸಿಕೊಂಡು ಇಲ್ಲಿ ಮನೋರಂಜನಾ ಚಟುವಟಿಕೆ, ಸಾಹಸ ಕ್ರೀಡೆ, ಸೈಕ್ಲಿಂಗ್, ಟ್ರಕ್ಕಿಂಗ್, ಮೌಂಟೇನ್ ಕ್ಲೈಬಿಂಗ್, ರೇಷ್ಮೆ ಪ್ರವಾಸ, ವೈನ್ ಪ್ರವಾಸ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶ ಇದೆ’ ಎಂದರು.
ಕಾವೇರಿ ನದಿಯಲ್ಲಿ ಸಚಿವರ ವಿಹಾರ
ಸಚಿವ ಅಶ್ವತ್ಥನಾರಾಯಣ ಶುಕ್ರವಾರ ಕಾರ್ಯಕ್ರಮದ ಮುಕ್ತಾಯದ ಬಳಿಕ ತೆಪ್ಪ ಏರಿ ಗಾಳಿಬೋರೆಯಿಂದ ಸಂಗಮದವರೆಗೆ ಕಾವೇರಿ ನದಿಯಲ್ಲಿ ವಿಹರಿಸಿದರು.
ಸದ್ಯ ಕೆಆರ್‌ಎಸ್‌ನಿಂದ ನೀರು ಹರಿಬಿಡುತ್ತಿರುವ ಕಾರಣ ಕಾವೇರಿ ಮೈ ದುಂಬಿ ಹರಿಯುತ್ತಿದ್ದು, ಅದರ ಅಂದವನ್ನು ಕಣ್ತುಂಬಿಕೊಂಡರು. ಬಳಿಕ ಸಂಗಮದಿಂದ ಬೆಂಗಳೂರಿಗೆ ವಾಪಸ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.