ADVERTISEMENT

ರಾಮನಗರ | ದುರಸ್ತಿಗೆ ಅಡ್ಡಿಯಾಯಿತೇ ಪಬ್ಲಿಕ್ ಶಾಲೆ

ಪಂಚಾಯಿತಿ ಮಟ್ಟದ ಪಬ್ಲಿಕ್ ಶಾಲೆಯಿಂದ ಸಮೀಪದ ಶಾಲೆಗಳ ಅಸ್ತಿತ್ವಕ್ಕೆ ಕುತ್ತು

ಓದೇಶ ಸಕಲೇಶಪುರ
Published 8 ಜುಲೈ 2024, 4:28 IST
Last Updated 8 ಜುಲೈ 2024, 4:28 IST
ಉಮೇಶ್ ಜಿ. ಗಂಗವಾಡಿ, ಅಧ್ಯಕ್ಷ, ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ
ಉಮೇಶ್ ಜಿ. ಗಂಗವಾಡಿ, ಅಧ್ಯಕ್ಷ, ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ   

ರಾಮನಗರ: ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಿಸಲು ಮುಂದಾಗಿರುವ ಸರ್ಕಾರ ರಾಜ್ಯದಾದ್ಯಂತ ಸುಮಾರು 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಪಂಚಾಯಿತಿ ಶಾಲೆಗಳ ಮಟ್ಟದಲ್ಲಿ ತಲೆ ಎತ್ತಲಿರುವ ಈ ಶಾಲೆಗಳ ಕಾರಣಕ್ಕಾಗಿಯೇ, ಗ್ರಾಮಗಳ ಮಟ್ಟದಲ್ಲಿರುವ ಶಿಥಿಲಾವಸ್ಥೆಯ ಶಾಲೆಗಳ ದುರಸ್ತಿ ಅಥವಾ ಹಳೆ ಕಟ್ಟಡಗಳ ಜಾಗದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಪಂಚಾಯಿತಿ ಮಟ್ಟದಲ್ಲಿ ಪಬ್ಲಿಕ್‌ ಶಾಲೆಗಳನ್ನು ಸ್ಥಾಪಿಸಲಿರುವ ಸರ್ಕಾರ, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಅಂತಹ ಮೊದಲ ಶಾಲೆಯ ನಿರ್ಮಾಣಕ್ಕೆ ಜಿಲ್ಲೆಯ ಮಾಗಡಿಯ ತಾಲ್ಲೂಕಿನ ಕುದೂರಿನಲ್ಲಿ ಕಳೆದ ವರ್ಷ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ.

ಜಿಲ್ಲೆಯಲ್ಲಿರುವ ಕಾರ್ಪೊರೇಟ್ ಕಂಪನಿಗಳು ಹಾಗೂ ಕೈಗಾರಿಕೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ನೀಡುವ ಅನುದಾನದಲ್ಲಿ ಈ ಶಾಲೆಗಳನ್ನು ನಿರ್ಮಿಸಲಾಗುತ್ತದೆ. ಸದ್ಯ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ತಲಾ 5 ಶಾಲೆಗಳು ತಲೆ ಎತ್ತಲಿವೆ. ಇದಕ್ಕಾಗಿ, ಪಂಚಾಯಿತಿ ಮಟ್ಟದಲ್ಲಿ ಜಾಗ ಹುಡುಕುವ ಕೆಲಸವೂ ನಡೆಯುತ್ತಿದೆ.

ADVERTISEMENT

ಕಡೆಗಣನೆ ಸಲ್ಲದು:

‘ಸರ್ಕಾರ ತೆರೆಯಲಿರುವ ಪಬ್ಲಿಕ್ ಶಾಲೆಗಳು ಸುತ್ತಮುತ್ತಲಿನ ಗ್ರಾಮಗಳ ಕಿರಿಯ ಪ್ರಾಥಮಿಕ ಶಾಲೆಗಳ ಅಳಿವಿಗೆ ಕಾರಣವಾಗಲಿದೆ. ಈಗಾಗಲೇ ಬೆರಳೆಣಿಯಲ್ಲಿರುವ ಈ ಶಾಲೆಗಳಿಗೆ ಮುಂದೆ ವಿದ್ಯಾರ್ಥಿಗಳೇ ಬರುವುದಿಲ್ಲ. ಆಗ, ಶಿಕ್ಷಣ ಇಲಾಖೆ ಅನಿವಾರ್ಯವಾಗಿ ಶಾಲೆಗೆ ಬೀಗ ಹಾಕಲಿದೆ’ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಅಧ್ಯಕ್ಷ ಉಮೇಶ್ ಜಿ. ಗಂಗವಾಡಿ ‘ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದರು.

‘ಈಗಾಗಲೇ ಹಳೆಯ ಮತ್ತು ಶಿಥಿಲ ಕಟ್ಟಡಗಳ ದುರಸ್ತಿ ಮಾಡುವಂತೆ ಹಾಗೂ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವಂತೆ ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಶಿಕ್ಷಕರು ವರ್ಷಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಇಲಾಖೆ ಅನುದಾನದ ಕೊರತೆ ನೆಪ ಹೇಳಿ ಶಿಥಿಲ ಕಟ್ಟಡದಲ್ಲೇ ಪಾಠ–ಪ್ರವಚನ ನಡೆಯುವಂತೆ ಮಾಡಿದೆ. ಮುಂದೆ ಪ್ಲಬಿಕ್ ಶಾಲೆಯಲ್ಲಿ ವಿಲೀನವಾಗುವ ಶಾಲೆಗೆ ಯಾಕೆ ಹಣ ವ್ಯರ್ಥ ಮಾಡಬೇಕು ಎಂಬ ಧೋರಣೆ ಅಧಿಕಾರಿಗಳಲ್ಲಿದೆ’ ಎಂದು ಹೇಳಿದರು.

'ಎರಡೂ ಬಗೆಯ ಶಾಲೆ ಬೇಕು

‘ಪಂಚಾಯಿತಿಗೊಂದು ಸುಸಜ್ಜಿತ ವ್ಯವಸ್ಥೆಯ ಶಾಲೆ ತೆರೆಯುವ ಅಗತ್ಯ ಎಷ್ಟಿದೆಯೊ ಗ್ರಾಮ ಮಟ್ಟದ ಶಾಲೆಯನ್ನು ಉಳಿಸಿಕೊಳ್ಳುವುದು ಸಹ ಅಷ್ಟೇ ಅಗತ್ಯವಿದೆ. ಪಬ್ಲಿಕ್ ಶಾಲೆ ತೆರೆದು ಹಳ್ಳಿಗಳಿಗೆ ವಾಹನಗಳಿಗೆ ಮಕ್ಕಳನ್ನು ಕರೆ ತರುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಇದು ಸಾಧ್ಯವಾಗದ ಮಾತು. ಸರ್ಕಾರ ಬದಲಾದಂತೆ ಮಾತುಗಳು ಹಾಗೂ ನೀತಿಗಳು ಸಹ ಬದಲಾಗುತ್ತವೆ. ಈಗ ಉಳಿದಿರುವ ಹಳ್ಳಿ ಶಾಲೆಗಳನ್ನು ಸಬಲೀಕರಿಸಿ ಬಡವರಿಗೆ ಊರಲ್ಲೇ ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕು. ಹಿರಿಯ ಪ್ರಾಥಮಿಕ ಪ್ರೌಢಶಾಲೆಗೆ ಪಬ್ಲಿಕ್ ಶಾಲೆಗೆ ಮಕ್ಕಳು ಬರುವಂತಾದರೆ ಉತ್ತಮ’ ಎಂದು ಉಮೇಶ್ ಜಿ. ಗಂಗವಾಡಿ ಅಭಿಪ್ರಾಯಪಟ್ಟರು.

ಮಕ್ಕಳಿದ್ದರೆ ಶಾಲಾಭಿವೃದ್ಧಿಗೆ ಒತ್ತು

‘ಶಾಲೆ ದೂರವೆಂಬ ಕಾರಣಕ್ಕೆ ಎಷ್ಟೋ ತಂದೆ–ತಾಯಂದಿರುವ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಗ್ರಾಮಗಳ ಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿರುವ ಶಾಲೆಗಳಿಂದಾಗಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ. ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆದು ಉತ್ತಮ ಶಿಕ್ಷಣ ನೀಡುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ ಇದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆಯೂ ಚಿಂತನೆ ಅಗತ್ಯ. ಇಲಾಖೆ ಸಹ ಮಕ್ಕಳಿರುವ ಶಾಲೆ ಅಭಿವೃದ್ಧಿ ದುರಸ್ತಿಗೆ ಒತ್ತು ನೀಡುತ್ತದೆ. ಇಲ್ಲದಿದ್ದರೆ ಕಡೆಗಣಿಸುತ್ತದೆ. ಈ ವಿಷಯದಲ್ಲಿ ನಾವು ಸಹ ಅಸಹಾಯಕರೇ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.