ADVERTISEMENT

ಶಿಲ್ಪಕಲೆಯಲ್ಲಿ ಜಕಣಾಚಾರಿ ಇಂದಿಗೂ ಜೀವಂತ

ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಎಡಿಸಿ ಶಿವಾನಂದ ಮೂರ್ತಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:43 IST
Last Updated 2 ಜನವರಿ 2024, 14:43 IST
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಸೋಮವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು, ಜಕಾಣಾಚಾರಿ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಸೋಮವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು, ಜಕಾಣಾಚಾರಿ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ರಾಮನಗರ: ‘ಅಮರರಲ್ಪಿ ಜಕಣಾಚಾರಿ ಅವರು ವಿಶ್ವದ ಗಮನ ಸೆಳೆದಿರುವ ತಮ್ಮ ಮನಮೋಹಕ ಶಿಲ್ಪಕಲೆಗಳ ಮೂಲಕ, ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಗೆ ಅವರು ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಕಣಾಚಾರಿ ಅವರು ಬಿಟ್ಟು ಹೋಗಿರುವ ಬೆಲೆ ಕಟ್ಟಲಾಗದ ಕಲೆಯನ್ನು ಉಳಿಸಿ–ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ವಿಶ್ವಕರ್ಮ ಸಮುದಾಯದವರು ಜಕಣಾಚಾರಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ, ಶಿಲ್ಪಕಲೆಯಲ್ಲು ಉತ್ತುಂಗದ ಸಾಧನೆ ಮಾಡಬೇಕು. ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಚನ್ನಪಟ್ಟಣ ತಾಲ್ಲೂಕು ತಹಶೀಲ್ದಾರ್ ಮಹೇಂದ್ರ ಎ.ಎಚ್ ಮಾತನಾಡಿ, ‘ಜಕಣಾಚಾರಿ ಅವರ ಕೆತ್ತನೆಗಳನ್ನು ದಕ್ಷಿಣ ಭಾರತದ ಹಲವು ದೇವಾಲಯಗಳಲ್ಲಿ ನಾವು ಕಾಣಬಹುದು. ವಿಶ್ವಕರ್ಮರು ಕಬ್ಬಿಣ, ಚಿನ್ನ–ಬೆಳ್ಳಿ, ಶಿಲ್ಪಕಲೆ ಹಾಗೂ ಮರಗೆಲಸದ ಕುಲಕಸುಬುಗಳನ್ನು ನಿರ್ವಹಿಸುತ್ತಿದ್ದಾರೆ. ಈ ಕಲೆಗಳನ್ನು ಮುಂದಿನ ತಲೆಮಾರುಗಳಿಗೂ ಕೂಡ ಕಲಿಸಿ ಬೆಳಸಬೇಕು’ ಎಂದು ಕಿವಿಮಾತು ಹೇಳಿದರು.

ಶಿಕ್ಷಕಿ ಶೈಲಾ ಶ್ರೀನಿವಾಸ್ ಮಾತನಾಡಿ, ‘ಜಕಣಾಚಾರಿ ಅವರ ಶಿಲ್ಪಕಲೆಗಳಲ್ಲಿ ಸೃಜನಶೀಲತೆಯ ವೈಭವ ಎದ್ದು ಕಾಣುತ್ತದೆ. ಹಾಗಾಗಿಯೇ, ಬೇಲೂರು ಮತ್ತು ಹಳೆಬೀಡು ದೇವಾಲಯಗಳು ವಿಶ್ವವಿಖ್ಯಾತಿಯಾಗಿವೆ. ದೇಶ–ವಿದೇಶಗಳ ಪ್ರವಾಸಿಗರನ್ನು ನಿತ್ಯ ಆಕರ್ಷಿಸುತ್ತಿವೆ’ ಎಂದರು.

‘ಈ ನೆಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವುದು ಅವರ ಶಿಲ್ಪಕಲೆಗಳ ವಿಶೇಷ. ವಿಶ್ವಕರ್ಮರು ಬದಲಾಗದ ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಗೆ ಆಧುನಿಕ ಸ್ಪರ್ಶ ನೀಡಬೇಕಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಸಮುದಾಯದ ಶಂಕರ್, ಕುಮಾರ್, ಕರನಹಳ್ಳಿ ಕುಮಾರ್, ಲಿಂಗಾಚಾರ್, ಕನಕಪುರದ ಚಂದ್ರು ಅವರನ್ನು ಗಣ್ಯರು ಸನ್ಮಾನಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಬಿ. ಉಮೇಶ್, ತಗಡಚಾರಿ, ಶ್ರೀನಿವಾಸ ಮೂರ್ತಿ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

‘ಸಮುದಾಯಕ್ಕೆ ಸೀಮಿತ ಮಾಡಬಾರದು’

‘ಅಮರಶಿಲ್ಪಿ ಬಿರುದಾಂಕಿತ ಜಕಣಾಚಾರಿಯರು ನಾಡಿಗೆ ನೀಡಿದ ಕೊಡುಗೆ ಸ್ಮರಣೀಯ. ಅವರ ಸಂಸ್ಮರಣೆ ಮತ್ತು ಜನ್ಮದಿನದ ಆಚರಣೆಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಬೇರೆ ಮಹನೀಯರ ಕಾರ್ಯಕ್ರಮದಂತೆ ಜಕಣಾಚಾರಿ ಅವರ ಕಾರ್ಯಕ್ರಮವನ್ನು ಸಹ ಸಾರ್ವಜನಿಕವಾಗಿ ಅದ್ಧೂರಿಯಾಗಿ ಮಾಡಬೇಕು. ಆಗ ಮಾತ್ರ ಅವರ ಕೊಡುಗೆ ಎಲ್ಲರಿಗೂ ತಲುಪುತ್ತದೆ’ ಎಂದು ಶಿಕ್ಷಕಿ ಶೈಲಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.