ADVERTISEMENT

ಕರ್ನಾಟಕ ಜಾನಪದ ಪರಿಷತ್‌ಗೆ ಯುನೆಸ್ಕೊ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 21:57 IST
Last Updated 27 ಸೆಪ್ಟೆಂಬರ್ 2024, 21:57 IST
ಕರ್ನಾಟಕ ಜಾನಪದ ಪರಿಷತ್ತು ಲೊಗೊ
ಕರ್ನಾಟಕ ಜಾನಪದ ಪರಿಷತ್ತು ಲೊಗೊ   

ರಾಮನಗರ: ಅಮೂರ್ತ ಸಾಂಸ್ಕತಿಕ ಪರಂಪರೆ ಸಂರಕ್ಷಣೆ ಉದ್ದೇಶಕ್ಕಾಗಿ ಕರ್ನಾಟಕ ಜಾನಪದ ಪರಿಷತ್‌ ಯುನೆಸ್ಕೊ ಮಾನ್ಯತೆ ಪಡೆದಿದೆ. ಇದರೊಂದಿಗೆ, ಯುನೆಸ್ಕೊ ಪಟ್ಟಿಯಲ್ಲಿರುವ ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಪರಿಷತ್‌ ಸಹ ಒಂದಾಗಿದೆ ಎಂದು ಪರಿಷತ್‌ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೂನ್‌ ತಿಂಗಳಿನಲ್ಲಿ ಯುನೆಸ್ಕೊ ಮುಖ್ಯ ಕಚೇರಿಯಲ್ಲಿ ನಡೆದ ಹತ್ತನೇ ಅಧಿವೇಶನದಲ್ಲಿ ಪರಿಷತ್‌ಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೊ–2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಆಂತರಿಕ ಸಮಿತಿಗೆ ಸಲಹೆ ನೀಡಲು ಪರಿಷತ್‌ ಮಾನ್ಯತೆ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಯುನೆಸ್ಕೊ ಮಾನ್ಯತೆಯು ನಾಡೋಜ ಎಚ್.ಎಲ್.ನಾಗೇಗೌಡ ಅವರ ಜನಪದ ಕಳಕಳಿಗೆ ಸಿಕ್ಕ ಗೌರವವಾಗಿದೆ. ಕರ್ನಾಟಕದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸಂವರ್ಧನೆ, ಪ್ರಸಾರ, ಪ್ರಚಾರ, ದಾಖಲಾತಿ ಮಾಡುವ ನಮ್ಮ ಪ್ರಯತ್ನಗಳಿಗೆ ಈ ಮಾನ್ಯತೆ ಸಾಕ್ಷಿಯಾಗಿದೆ. ಇದರೊಂದಿಗೆ, ಅಂತರರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ತನ್ನ ಪಾತ್ರವನ್ನು ಪರಿಷತ್‌ ಹೆಚ್ಚಿಸಿಕೊಂಡಿದೆ. ಜಾಗತಿಕ ಸಂವಾದಕ್ಕೆ ನಾವು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಈ ಗೌರವ ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ADVERTISEMENT

1979ರಲ್ಲಿ ಸ್ಥಾಪನೆಯಾದ ಪರಿಷತ್‌ 45 ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಅಮೂಲ್ಯ ಕೆಲಸ ಮಾಡಿಕೊಂಡು ಬರುತ್ತಿದೆ. ರಾಮನಗರದಲ್ಲಿ ಸುಮಾರು 15 ಎಕರೆಯಲ್ಲಿ ಪರಿಷತ್‌ ನಿರ್ಮಿಸಿರುವ ‘ಜಾನಪದ ಲೋಕ’ ರಾಜ್ಯದಲ್ಲಷ್ಟೇ ಅಲ್ಲದೆ, ದೇಶದಲ್ಲೇ ಅಪರೂಪ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.