ರಾಮನಗರ: ಸದ್ಯ ರಾಜ್ಯದಲ್ಲೆಡೆ ಸಮ್ಮಿಶ್ರ ಸರ್ಕಾರದ ಅಳಿವು–ಉಳಿವಿನ ಬಗ್ಗೆ ಚರ್ಚೆ ನಡೆದಿದ್ದರೆ, ಚನ್ನಪಟ್ಟಣ ಕ್ಷೇತ್ರದ ಜನರು ಸರ್ಕಾರದ ಉಳಿವಿನ ಜೊತೆಗೆ ತಮ್ಮ ಅರ್ಜಿಗಳು ವಿಲೇವಾರಿ ಆಗಲಿ ಎಂದು ಕಾಯುತ್ತಿದ್ದಾರೆ.
ಕ್ಷೇತ್ರದ ಶಾಸಕರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳೆದ ಜೂನ್ 17 ಹಾಗೂ 18ರಂದು ಕ್ಷೇತ್ರದ ಐದು ಕಡೆ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದರು. ಈ ಸಂದರ್ಭ ಬರೋಬ್ಬರಿ ಏಳು ಸಾವಿರದಷ್ಟು ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದವು. ಇವುಗಳನ್ನು ತಿಂಗಳ ಒಳಗೆ ಇತ್ಯರ್ಥಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನೂ ನೀಡಿದ್ದರು. ಆದರೆ ಕೆಲವಷ್ಟು ಅರ್ಜಿಗಳಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿದೆ. ಒಟ್ಟಾರೆ ಎಷ್ಟು ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂಬುದಕ್ಕೆ ಅಧಿಕಾರಿಗಳ ಬಳಿ ಲೆಕ್ಕವಿಲ್ಲ.
ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿಗಾಗಿ ಜಿಲ್ಲಾಡಳಿತ ಆರು ಅಧಿಕಾರಿಗಳ ತಂಡವನ್ನು ರಚಿಸಿತ್ತು. ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಯೋಜನಾ ಕೋಶದ ನಿರ್ದೇಶಕ ಮಾಯಣ್ಣ ಗೌಡ, ಹಿಂದುಳಿದ ವರ್ಗಗಳ ಇಲಾಖೆಯ ಉಪ ನಿರ್ದೇಶಕ ಪ್ರತಾಪ್, ತೋಟಗಾರಿಕೆ ಉಪನಿರ್ದೇಶಕ ಗುಣವಂತ, ರಾಮನಗರದ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೂರಜ್ ಈ ಅರ್ಜಿಗಳ ನಿರ್ವಹಣೆಯ ನೋಡಲ್ ಅಧಿಕಾರಿಗಳಾಗಿ ನಿಯೋಜನೆಗೊಂಡಿದ್ದರು.
ಹೀಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಸದ್ಯ ಕೆಲವಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಸಾವಿರಕ್ಕೂ ಹೆಚ್ಚು ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ರವಾನಿಸಲಾಗಿದ್ದು, ಅಲ್ಲಿಂದ ಉತ್ತರಕ್ಕೆ ಕಾಯುತ್ತಿದ್ದೇವೆ ಎನ್ನುತ್ತಾರೆ ನೋಡಲ್ ಅಧಿಕಾರಿಗಳು.
ಯಾವ ಅರ್ಜಿಗಳು ಹೆಚ್ಚು: ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಹೆಚ್ಚಿನ ಅರ್ಜಿಗಳು ಬಂದಿದ್ದವು. ತಾವು ಬಡವರಿದ್ದು, ಸಣ್ಣದೊಂದು ಸೈಟು ಕೊಡಿ, ಆಶ್ರಯ ಮನೆ ಕಟ್ಟಿಕೊಡಿ ಎಂದು ಹೆಚ್ಚಿನ ಮಂದಿ ಅಹವಾಲು ಸಲ್ಲಿಸಿದ್ದರು. ಇಂತಹ ಅರ್ಜಿಗಳಿಗೆ ಅಗತ್ಯ ದಾಖಲಾತಿಗಳೊಡನೆ ಗ್ರಾ.ಪಂ. ಗಳಿಗೆ ಅರ್ಜಿ ಸಲ್ಲಿಸುವಂತೆ ಹಿಂಬರಹ ನೀಡಲಾಗಿದೆ.
ಇನ್ನೂ ಕೆಲವರು ತಮಗೆ ಸರ್ಕಾರಿ ಉದ್ಯೋಗ ಕೊಡುವಂತೆ ಮನವಿ ಮಾಡಿದ್ದಾರೆ. ಕೆಲವರು ಮನೆ ಜಮೀನಿನ ಖಾತೆ, ಪೋಡಿ, ಸ್ಕೆಜ್‌ಗಳ ಬದಲಾವಣೆಗೆ ಮನವಿ ಮಾಡಿದ್ದಾರೆ. ಇನ್ನೂ ಕೆಲವರು ಮುಖ್ಯಮಂತ್ರಿಗಳ ನಿಧಿ ಅಡಿ ವಿವಿಧ ಚಿಕಿತ್ಸೆಗೆ ನೆರವು ಕೋರಿದ್ದಾರೆ. ಇವುಗಳಲ್ಲಿ ಸಾಧ್ಯವಾದಷ್ಟು ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ವರ್ಗಾವಣೆಗೂ ಮನವಿ: ಜನತಾ ದರ್ಶನದಲ್ಲಿ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿದ್ದರು. ಕೆಎಸ್‌ಆರ್‌ಟಿಸಿ ನೌಕರರು ಗುಂಪಾಗಿ ಅರ್ಜಿ ಸಲ್ಲಿಸಿ ವರ್ಗಾವಣೆ ವ್ಯವಸ್ಥೆ ಜಾರಿಗೆ ಕೋರಿದ್ದರು. ಕೆಲವರು ಪೊಲೀಸರು ಮತ್ತು ಅವರ ಕುಟುಂಬದವರು ಮನವಿ ಸಲ್ಲಿಸಿ ಔರಾದ್ಕರ್ ವರದಿ ಜಾರಿಗೆ ಆಗ್ರಹಿಸಿದ್ದರು. ಸರ್ಕಾರ ಈ ವಿಚಾರದಲ್ಲಿ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಇನ್ನೂ ಕೆಲವು ಸಿಬ್ಬಂದಿ ವರ್ಗಾವಣೆಗೆ ಶಾಸಕರ ಶಿಫಾರಸು ಪತ್ರ ಕೋರಿದ್ದು, ಅದನ್ನು ಮುಖ್ಯಮಂತ್ರಿ ಕಚೇರಿಯ ಗಮನಕ್ಕೆ ತರಲಾಗಿದೆ.
‘ಅರ್ಜಿಗಳನ್ನು ಇಲಾಖೆವಾರು ವಿಂಗಡನೆ ಮಾಡಲಾಗಿದ್ದು, ಸ್ಥಳೀಯವಾಗಿ ಬಗೆಹರಿಸಬಹುದಾಗಿದ್ದನ್ನು ಇತ್ಯರ್ಥಗೊಳಿಸಿದ್ದೇವೆ. ಶೀಘ್ರವಾಗಿ ಬಗೆಹರಿಸಲು ಸಾಧ್ಯವಾಗದ ಅರ್ಜಿಗಳೇ ಸಾಕಷ್ಟು ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ. ಇವುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದು ಕಷ್ಟ. ಅಂತಹವುಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿದ್ದೇವೆ’ ಎಂಬುದು ನೋಡಲ್ ಅಧಿಕಾರಿಗಳ ಸ್ಪಷ್ಟನೆ.
ಹೊರ ಜಿಲ್ಲೆ ಜನರಿಂದಲೂ ಸಲ್ಲಿಕೆ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನತಾ ದರ್ಶನ ನಡೆದಿದ್ದರೂ ಹೊರ ಕ್ಷೇತ್ರ ಮತ್ತು ಜಿಲ್ಲೆಗಳಿಂದಲೂ ಸಾಕಷ್ಟು ಅರ್ಜಿಗಳು ಬಂದಿವೆ. ಶೇ 90 ರಷ್ಟು ಅರ್ಜಿಗಳು ಚನ್ನಪಟ್ಟಣ–ರಾಮನಗರ ಕ್ಷೇತ್ರದ್ದಾಗಿದ್ದರೆ, ಉಳಿದವು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿವೆ. ಈ ಸಂಬಂಧ ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಶಿವಮೊಗ್ಗ ಮೊದಲಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅರ್ಜಿಗಳನ್ನು ಕಳುಹಿಸಿಕೊಡಲಾಗಿದೆ.
**
ನನ್ನ ವ್ಯಾಪ್ತಿಯಲ್ಲಿ 1800 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಂಬಂಧಿಸಿದ ಇಲಾಖೆಗಳಿಗೆ ವಿಲೇವಾರಿ ಮಾಡಿ ಕ್ರಮಕ್ಕೆ ಸೂಚಿಸಲಾಗಿದೆ. 300–400 ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ.
–ಕೆ. ಮಾಯಣ್ಣ ಗೌಡ,ಜಿಲ್ಲಾ ಯೋಜನಾ ಕೋಶದ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.