ADVERTISEMENT

ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮೇ 2024, 5:07 IST
Last Updated 8 ಮೇ 2024, 5:07 IST
ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು   

ಪ್ರಜಾವಾಣಿ ವಾರ್ತೆ

ಚನ್ನಪಟ್ಟಣ: ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಆರೋಪದ ಸಿ.ಡಿ ಬಿಡುಗಡೆ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಭವನ ಸರ್ಕಲ್‌ನಲ್ಲಿ ಜಮಾಯಿಸಿದ ಪ್ರತಿಭಟನಕಾರರು ಡಿ.ಕೆ. ಶಿವಕುಮಾರ್ ವಿರುದ್ಧ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ನಂತರ ತಾಲ್ಲೂಕು ಕಚೇರಿಯ ಎದುರು ಧರಣಿ ನಡೆಸಿದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು ಮಾತನಾಡಿ, ಪೆನ್ ಡ್ರೈವ್ ಬಿಡುಗಡೆ ಹಗರಣದ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವಿರುವ ಬಗ್ಗೆ ಈಗಾಗಲೇ ಬಹಿರಂಗಗೊಂಡಿದೆ. ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಹಾಗೆಯೇ ಈ ಸಿಡಿ ವಿಚಾರದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು. ಎಸ್‌ಐಟಿ ರಾಜ್ಯ ಸರ್ಕಾರ ನೇಮಿಸಿರುವ ಸಮಿತಿ ಆದ ಕಾರಣ ಪ್ರಾಮಾಣಿಕ ತನಿಖೆ ನಡೆಯವುದು ಸಾಧ್ಯವಿಲ್ಲ ಎಂದು ದೂರಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ತೂಬಿನಕೆರೆ ರಾಜು ಮಾತನಾಡಿ, ಈ ಹಗರಣದ ಪೆನ್ ಡ್ರೈವ್ ಬಿಡುಗಡೆ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇರುವುದು ಸ್ಪಷ್ಟವಾಗುತ್ತಿದೆ. ಪೆನ್ ಡ್ರೈವ್ ರೂವಾರಿ ಡಿ.ಕೆ. ಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಹಗರಣ ಸಂಪೂರ್ಣ ರಾಜಕೀಯಪ್ರೇರಿತ ಹಗರಣವಾಗಿದೆ. ಇಸನ್ನು ಸಿಬಿಐಗೆ ವಹಿಸಿದರೆ ಮಾತ್ರ ನ್ಯಾಯಯುತ ತನಿಖೆ ನಡಯಲು ಸಾಧ್ಯ ಎಂದು ಆಗ್ರಹಿಸಿದರು.

ಆನಂತರ ಪ್ರತಿಭಟನಕಾರರು ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮ್, ಮುಖಂಡರಾದ ಹಾಪ್ ಕಾಮ್ಸ್ ದೇವರಾಜು, ರೇಖಾ ಉಮಾಶಂಕರ್, ಬೋರ್ ವೆಲ್ ರಾಮಚಂದ್ರು, ವಿ.ಬಿ.ಚಂದ್ರು, ಮತ್ತೀಕೆರೆ ಮನು, ಕೂರಣಗೆರೆ ರವಿ, ಕೋಟೆ ಚಂದ್ರು, ಇತರರು ಭಾಗವಹಿಸಿದ್ದರು.

ಡಿಕೆಶಿ ಭಾವಚಿತ್ರಕ್ಕೆ ಚಪ್ಪಲಿಹಾರ!

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು ಡಿಕೆಶಿ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿದ ಘಟನೆ ನಡೆಯಿತು. ನಂತರ ಮೆರವಣಿಗೆ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಳಿ ಡಿಕೆಶಿ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆದ ಪ್ರಸಂಗವೂ ಜರುಗಿತು. ಪ್ರತಿಭಟನಾಕಾರರು ಧಿಕ್ಕಾರ ಘೋಷಣೆ ಕೂಗುವ ವೇಳೆ ಖೇಡಿ ಶಿವಕುಮಾರ್ 420 ಶಿವಕುಮಾರ್ ಸಿಡಿ ಶಿವಕುಮಾರ್ ಶಿಖಂಡಿ ಶಿವರಾಮೇಗೌಡ ಇತ್ಯಾದಿ ಸೇರಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.